ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಕೋವಿಡ್ ಹೋರಾಟಕ್ಕೆ ಸಂಪನ್ಮೂಲ: ನೌಕರರ ವೇತನಕ್ಕೆ ಪಿಣರಾಯಿ ಸರ್ಕಾರ ಕತ್ತರಿ

Last Updated 30 ಏಪ್ರಿಲ್ 2020, 7:52 IST
ಅಕ್ಷರ ಗಾತ್ರ

ತಿರುವನಂತಪುರ: ಕೋವಿಡ್-19 ವಿರುದ್ಧ ಹೋರಾಟ ಹಾಗೂ ಪರಿಹಾರೋಪಾಯಗಳಿಗಾಗಿ 20000 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಜಾಗತಿಕವಾಗಿ ಸದ್ದು ಮಾಡಿದ್ದ ಕೇರಳದ ಎಡ ರಂಗ ಸರ್ಕಾರ, ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಈಗ ಸರ್ಕಾರಿ ನೌಕರರ ವೇತನ ತಡೆಹಿಡಿಯಲು ಮುಂದಾಗಿದೆ.

ಹೀಗಾದಲ್ಲಿ, ಕೋವಿಡ್ ಹೋರಾಟಕ್ಕಾಗಿ ಸರ್ಕಾರಿ ನೌಕರರ ವೇತನ ತಡೆಹಿಡಿಯುವ ಮೊದಲ ರಾಜ್ಯವಾಗಲಿದೆ ಕೇರಳ. ಈ ಮಧ್ಯೆ, ವೇತನ ತಡೆ ನಿರ್ಧಾರಕ್ಕೆ ಕೇರಳದ ಹೈಕೋರ್ಟ್ ಮಂಗಳವಾರ ಅಂಕುಶ ಹಾಕಿತಾದರೂ, ಸುಗ್ರೀವಾಜ್ಞೆ ತರಲು ಕೇರಳದ ಪಿಣರಾಯಿ ವಿಜಯನ್ ಸಂಪುಟವು ಬುಧವಾರ ನಿರ್ಧರಿಸಿದೆ. ಸಚಿವರು ಹಾಗೂ ಶಾಸಕರ ವೇತನ, ಭತ್ಯೆ ಮತ್ತು ಗೌರವಧನದ ಶೇ.30 ಭಾಗವನ್ನು ಒಂದು ವರ್ಷ ಕಾಲ ಕಡಿತ ಮಾಡಲಾಗುತ್ತದೆ. ಆದರೆ, ಮುಂದೂಡಿಕೆ ಮಾಡಿದ ವೇತನವನ್ನು ಯಾವಾಗ ಪಾವತಿಸಲಾಗುತ್ತದೆ ಎಂಬ ಬಗ್ಗೆ ಕೇರಳ ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಕೇರಳ ಸರ್ಕಾರಿ ನೌಕರರ ವೇತನ ಕಡಿತ ಮಾಡುವ ಎಡ ರಂಗ ಸರ್ಕಾರದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಈ ಆದೇಶದ ಪ್ರಕಾರ, ಪ್ರತಿ ತಿಂಗಳು ಆರು ದಿನಗಳ ವೇತನವನ್ನು ಮುಂದಿನ ಐದು ತಿಂಗಳ ಕಾಲ ಕಡಿತ ಮಾಡಿ, ಕೋವಿಡ್-19 ಪಿಡುಗಿನ ಹೋರಾಟಕ್ಕೆ ಬಳಸಲಾಗುತ್ತದೆ.

"ಸುಗ್ರೀವಾಜ್ಞೆ ಅನುಸಾರ, ವಿಕೋಪದ ಸಂದರ್ಭದಲ್ಲಿ ಸರ್ಕಾರಿ ನೌಕರರ ಶೇ.25ರಷ್ಟು ವೇತನವನ್ನು ತಡೆಹಿಡಿಯಲು ಸರ್ಕಾರಕ್ಕೆ ಅಧಿಕಾರ ಸಿಗುತ್ತದೆ. ಈ ತಡೆಹಿಡಿದ ವೇತನವನ್ನು ಆರು ತಿಂಗಳೊಳಗೆ ಮರಳಿ ನೀಡುವ ಬಗ್ಗೆ ಸರ್ಕಾರವು ನಿರ್ಧಾರ ಕೈಗೊಳ್ಳಬಹುದಾಗಿದೆ" ಎಂದು ಕೇರಳದ ವಿತ್ತ ಸಚಿವ ಟಿ.ಎಂ.ಥಾಮಸ್ ಇಸಾಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಕೇರಳ ಹೈಕೋರ್ಟ್ ತೀರ್ಪಿನ ಬಳಿಕ ಸುಗ್ರೀವಾಜ್ಞೆಗೆ ಸರ್ಕಾರ ತೀರ್ಮಾನಿಸಿದೆ. ನಾವು ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಆದರೆ, ನಮ್ಮ ಕ್ರಮಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಹೈಕೋರ್ಟ್ ಹೇಳಿರುವುದರಿಂದ, ಕಾನೂನುಬದ್ಧವಾಗಿಯೇ ಈ ರೀತಿ ಮಾಡಲು ನಿರ್ಧರಿಸಿದೆವು" ಎಂದವರು ಹೇಳಿದರು.

ಕೋವಿಡ್-19 ಹೋರಾಟಕ್ಕೆ ಮಾರ್ಚ್ ತಿಂಗಳಲ್ಲಿ 5000 ಕೋಟಿ ರೂ. ವ್ಯಯಿಸಿರುವುದರಿಂದ ಮತ್ತು ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿರುವುದರಿಂದ, ಪೂರ್ಣ ವೇತನ ಪಾವತಿಸುವುದು ಕಷ್ಟವಾಗುತ್ತದೆ ಎಂದು ಕೇರಳ ಸರ್ಕಾರವು ಹೈಕೋರ್ಟಿಗೆ ಹೇಳಿತ್ತು.

ಆಗ ಕೋರ್ಟ್, ಪಿಡುಗಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಡೆಸಿದ ಹೋರಾಟಕ್ಕೆ 'ಜಗತ್ತಿನಾದ್ಯಂತ ಶ್ಲಾಘನೆ' ವ್ಯಕ್ತವಾಗಿದೆಯಾದರೂ, ಕಾನೂನಿನ ಚೌಕಟ್ಟನ್ನು ನಿರ್ಲಕ್ಷಿಸಲಾಗದು. ಮಾಡಿದ ಕೆಲಸಕ್ಕೆ ವೇತನ ಪಡೆಯುವುದು ಪ್ರತಿಯೊಬ್ಬ ನೌಕರನ ಸ್ಥಾಪಿತ ಹಕ್ಕು ಎಂದಿರುವ ನ್ಯಾಯಾಲಯ, ವೇತನ ನಿರಾಕರಿಸಲು ತನಗೆ ವಿಕೋಪ ನಿರ್ವಹಣಾ ಕಾಯ್ದೆಯಡಿ ಅಧಿಕಾರ ಇದೆ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿತು.

ಈ ಮೊದಲು, ಕೇರಳವು ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಕ್ಕೆ, ಪರಿಹಾರೋಪಾಯ ಘೋಷಣೆಗಳ ಬಗ್ಗೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಕೇರಳದಲ್ಲಿ ಕೊರೊನಾ ವೈರಸ್ ಹರಡುವಿಕೆಯು ವೇಗ ಹೆಚ್ಚಿಸಿಕೊಂಡಿದ್ದು, ರಾಜ್ಯದಲ್ಲಿ ಇಡುಕ್ಕಿ, ಕೊಲ್ಲಂ, ತಿರುವನಂತಪುರ, ಕೊಟ್ಟಾಯಂ, ಕಾಸರಗೋಡು ಮುಂತಾದೆಡೆ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ, ರೆಡ್ ಝೋನ್‌ಗೆ ಸೇರ್ಪಡೆಯಾಗಿದ್ದವು.

20000 ಕೋಟಿ ಪ್ಯಾಕೇಜ್ ಬಗ್ಗೆ ಬಿಜೆಪಿ ಪ್ರಶ್ನೆ
ಕೇರಳದ ಕ್ರಮವನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇರಳವೀಗ ಅಪಾಯಕಾರಿ ಪರಿಸ್ಥಿತಿಯತ್ತ ತಿರುಗಿದೆ. 20,000 ಕೋಟಿ ಪ್ಯಾಕೇಜ್ ಗಾಳಿಯಲ್ಲಿ ಹೋಗಿದೆ. ಅವರೀಗ ಸರ್ಕಾರಿ ನೌಕರರ ವೇತನವನ್ನೇ ತಡೆಹಿಡಿಯುತ್ತಿದ್ದಾರೆ ಎಂದು 'ಎಚ್ಚರಗೊಳ್ಳಿ ಪಿಣರಾಯಿ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಕರ್ನಾಟಕವು 55504 ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ 534 ಪಾಸಿಟಿವ್ ಪ್ರಕರಣಗಳು ಬಂದಿದ್ದರೆ, ಕೇರಳವು 23980 ಪರೀಕ್ಷೆಗಳನ್ನು ಮಾಡಿ, 2 ಲಕ್ಷ ಮಾಡಿದ್ದೇವೆ ಅಂತ ಹೇಳಿದೆ. ಇದಕ್ಕೆ ಕಿಟ್‌ಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿರುವ ಸಂತೋಷ್, ರಾಜ್ಯಕ್ಕೆ ಮರಳಿದ್ದ 284 ಮಂದಿ ತಬ್ಲಿಗಿಗಳನ್ನು ಇನ್ನೂ ಪತ್ತೆ ಮಾಡಲಾಗಿಲ್ಲ, ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಇದರ ಜೊತೆಗೆ, 3.5 ಲಕ್ಷ ಉದ್ಯೋಗಿಗಳು ಗಲ್ಫ್‌ನಿಂದ ಮರಳಲು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT