ಮಂಗಳವಾರ, ಮೇ 18, 2021
24 °C

ಪ್ರವಾಹ: ಹೆಚ್ಚು ಪರಿಹಾರಕ್ಕೆ ಕೇರಳದ ಸರ್ವಪಕ್ಷ ನಿಯೋಗದಿಂದ ಕೇಂದ್ರಕ್ಕೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ : ಪ್ರವಾಹದಿಂದ ತತ್ತರಿಸುವ ರಾಜ್ಯಕ್ಕೆ ಹೆಚ್ಚಿನ ಪರಿಹಾಧನ ನೀಡಬೇಕು, ವಿದೇಶಿ ನೆರವು ಪಡೆಯಲು ಅನುಮತಿ ನೀಡಬೇಕು ಎಂದು ಕೇರಳದ ಸರ್ವಪಕ್ಷ ನಿಯೋಗ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿತು.

‘ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು, ಪುನರ್‌ನಿರ್ಮಾಣ ಕಾರ್ಯಕ್ಕಾಗಿ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಕೋರಿದೆವು‌. ವಿದೇಶಗಳಿಂದ ನೆರವು ಪಡೆಯಲು ಇರುವ ನಿಬಂಧನೆಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿದೆವು. ಈ ಕುರಿತಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ರಾಜ್‌ನಾಥ್‌ ಸಿಂಗ್‌ ಭರವಸೆ ನೀಡಿದರು’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಎ.ಕೆ.ಆ್ಯಂಟನಿ ಸುದ್ದಿಗಾರರಿಗೆ ತಿಳಿಸಿದರು.

ಕೆ.ವಿ.ಥಾಮಸ್‌, ಕೆ.ಸಿ.ವೇಣುಗೋಪಾಲ್‌, ಕೆ.ಸುರೇಶ್‌, ಆ್ಯಂಟೊ ಆ್ಯಂಟನಿ, ಎಂ.ಕೆ.ರಾಘವನ್‌ (ಕಾಂಗ್ರೆಸ್‌), ಪಿ.ಕರುಣಾಕರನ್‌, ಪಿ.ಕೆ.ಬಿಜು (ಸಿಪಿಎಂ), ಎನ್‌.ಕೆ.ಪ್ರೇಮಚಂದ್ರನ್‌ (ಆರ್‌ಎಸ್‌ಪಿ), ಜೋಸ್‌ ಕೆ.ಮಣಿ (ಕೇರಳ ಕಾಂಗ್ರೆಸ್‌–ಮಣಿ), ಜೋಸ್‌ ಜಾರ್ಜ್‌ (ಪಕ್ಷೇತರ) ನಿಯೋಗದಲ್ಲಿ ಇದ್ದರು.
**
ಸಬ್ಸಿಡಿ ದರದಲ್ಲಿ ಹೊಸ ಎಲ್‌ಪಿಜಿ ಸಿಲಿಂಡರ್‌ 
ಪ್ರವಾಹದಿಂದಾಗಿ ಅಡುಗೆ ಅನಿಲ ಸಿಲಿಂಡರ್‌ ಕಳೆದುಕೊಂಡಿರುವ ಕೇರಳದ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅನುಮೋದನೆ ನೀಡಿದ್ದಾರೆ.

‘ಬಡತನ ರೇಖೆಗಿಂತ ಕೆಳಗಿರುವವರಿಗೆ ₹ 200ಕ್ಕೆ ಹಾಗೂ ಉಳಿದವರಿಗೆ ₹ 1,200ಕ್ಕೆ (ಮೂಲ ದರ ₹ 1,400) ಎಲ್‌ಪಿಜಿ ಸಿಲಿಂಡರ್‌ ಸಂಪರ್ಕ ನೀಡಲು ಎಂದು ಸಚಿವ ಪ್ರಧಾನ್‌ ಸಮ್ಮತಿಸಿದ್ದಾರೆ. ಈ ಸಂಬಂಧ ಎಲ್ಲ ತೈಲ ಕಂಪನಿಗಳಿಗೂ ಈಗಾಗಲೇ ನಿರ್ದೇಶನ ನೀಡಿದ್ದಾರೆ’ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ.ಅಲ್ಫಾಂಸ್‌ ತಿಳಿಸಿದ್ದಾರೆ.
**

ಅಂಕಿ–ಅಂಶ 
₹ 20 ಸಾವಿರ ಕೋಟಿ 
ಪ್ರಾಥಮಿಕ ಸಮೀಕ್ಷೆ ಪ್ರಕಾರ ಹಾನಿಯ ಪ್ರಮಾಣ

14.50 ಲಕ್ಷ 
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆ

483 
ಆಗಸ್ಟ್‌ 8ರಿಂದ ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು