ಸೋಮವಾರ, ಸೆಪ್ಟೆಂಬರ್ 27, 2021
24 °C

ಡಿಸಿಪಿಯಾದ ಮಗಳು ಬೇಗ ಮನೆಗೆ ಬರುವಂತೆ ತಂದೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತಾ: ಅದೊಂದು ಅಪರೂಪದ ಕ್ಷಣ, ಸರ್ಕಾರಿ ಅಧಿಕಾರಿಯಾದ 17 ವರ್ಷದ ಮಗಳು ತನ್ನ ಕೈಕೆಳಗೆ ಕೆಲಸ ಮಾಡುವ ತಂದೆಗೆ ಮನೆಗೆ ಬೇಗ ಬರುವಂತೆ ಆದೇಶವಿತ್ತರೆ ತಂದೆಯ ಸ್ಥಿತಿ ಹೇಗಿರಬೇಡ. ಈ ಅಪರೂಪದ ಘಟನೆ ನಡೆದಿದ್ದು ಕೊಲ್ಕತಾ ನಗರದಲ್ಲಿ.

ಇಲ್ಲಿನ ಠಾಣೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಸಿಂಗ್ ಎಂಬುವರ ಪುತ್ರಿ ರಿಚಾಸಿಂಗ್ ಈ ಆದೇಶ ಹೊರಡಿಸಿದವರು. ಇದೇನು 17 ವರ್ಷದ ಬಾಲಕಿ ಇಷ್ಟು ಬೇಗ ಆದೇಶ ಹೊರಡಿಸುವಷ್ಟರ ಮಟ್ಟಿಗೆ ಬೆಳೆದುಬಿಟ್ಟಳಾ ಎಂಬ ಪ್ರಶ್ನೆ ಮೂಡಬಹುದು.

ಇಲ್ಲಿದೆ ವಿವರ, ರಿಚಾ ಸಿಂಗ್ ಕೊಲ್ಕತಾದ ಜಿ.ಡಿ.ಬಿರ್ಲಾ ಸೆಂಟರ್‌‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಇತ್ತೀಚೆಗೆ ನಡೆದ ಐಎಸ್‌ಸಿ ಪರೀಕ್ಷೆಯಲ್ಲಿ ಶೇ. 99.25 ಅಂಕಗಳನ್ನು ಪಡೆದು ರಾಷ್ಟ್ರಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ತಮ್ಮ ಸಹೋದ್ಯೋಗಿಯೊಬ್ಬರ ಪುತ್ರಿ ಈ ಸಾಧನೆ ಮಾಡಿದ್ದು  ಎಂದು ತಿಳಿದು ಕೊಲ್ಕತಾದ ಡಿಸಿಪಿ ಡಾ.ರಾಜೇಶ್ ಕುಮಾರ್, ತಂದೆ ಮಗಳನ್ನು ಕರೆದು ಕಚೇರಿಯಲ್ಲಿ ಗೌರವಿಸಬೇಕು ಎಂದು ತೀರ್ಮಾನಿಸಿದರು. ಜೊತೆಗೆ ಏನಾದರೂ ಉಡುಗೊರೆ ಕೊಡಲು ತೀರ್ಮಾನಿಸಿದ ಡಿಸಿಪಿ "ನಿನಗೆ ಏನು ಇಷ್ಟ" ಎಂದು ಕೇಳಿದ್ದಾರೆ. ಅದಕ್ಕೆ ಆಕೆ "ನಾನು ಒಂದು ದಿನ ನಿಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು" ಎಂದು ಹೇಳಿದ್ದಾಳೆ. ಕೂಡಲೆ ಕೊಲ್ಕತಾ ಪೊಲೀಸ್ ಆಯುಕ್ತರಿಗೆ ಈ ವಿಷಯ ತಿಳಿಸಲಾಯಿತು. ಅಲ್ಲಿಂದ ಅನುಮತಿ ಪಡೆದ ಮೇರೆಗೆ ಡಿಸಿಪಿ ಕುರ್ಚಿಯಲ್ಲಿ ಬೆಳಗ್ಗೆ 6 ರಿಂದ 12ರವರೆಗೆ ಅಧಿಕಾರ ನಡೆಸುವ ಅವಕಾಶವನ್ನು ರಿಚಾ ಸಿಂಗ್‌‌ಗೆ ನೀಡಿದ್ದಾರೆ. 

ವಿದ್ಯಾರ್ಥಿ ರಿಚಾ ಸಿಂಗ್ ಕುರ್ಚಿಯಲ್ಲಿ ಕುಳಿತುಕೊಂಡು ಅಧಿಕಾರ ವಹಿಸಿಕೊಂಡಿದ್ದಾಳೆ. ಆಕೆ ಅಧಿಕಾರ ವಹಿಸಿಕೊಂಡಾಗ ಒಂದು ವೇಳೆ ನೀನು ಈ ಕುರ್ಚಿಯಲ್ಲಿ ಕುಳಿತು ಏನಾದರೂ ಆದೇಶ ಹೊರಡಿಸುವುದಾದರೆ ಯಾವ ಆದೇಶ ಹೊರಡಿಸುವೆ ಎಂದು ಕೇಳಿದಾಗ "ತಂದೆ ರಾಜೇಶ್ ಸಿಂಗ್ ಪ್ರತಿದಿನ ಮನೆಗೆ ಬೇಗ ಬರಬೇಕು ಎಂದು ಆದೇಶ ಹೊರಡಿಸುವೆ" ಎಂದಿದ್ದಾಳೆ.

ಇದನ್ನು ಕೇಳಿದ ಅಧಿಕಾರಿಗಳು ಕ್ಷಣ ಕಾಲ ನಕ್ಕರೂ ನಂತರ ಪೊಲೀಸರ ಮಕ್ಕಳು ತಮ್ಮ ತಂದೆಯನ್ನು ಎಷ್ಟೊಂದು ಮಿಸ್ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ಗಂಭೀರವಾಗಿ ಚಿಂತಿಸಲು ತೊಡಗಿದ್ದಾರೆ. ಈ ಸಂಬಂಧ ಇದನ್ನೇ ಆದೇಶ ಎಂದು ತಿಳಿದುಕೊಂಡರೆ ನಿಮ್ಮ ಅಭಿಪ್ರಾಯವೇನು ಎಂದು ಈಕೆಯ ತಂದೆಯನ್ನು ಕೇಳಿದ್ದಾರೆ. ಅದಕ್ಕೆ ರಾಜೇಶ್ ಸಿಂಗ್ " ಮಗಳಾದರೂ ನನ್ನ ಮೇಲಿನ ಅಧಿಕಾರಿ. ಅವರ ಆದೇಶವನ್ನು ತಪ್ಪದೆ ಪಾಲಿಸುವೆ" ಎಂದು ರಾಜೇಶ್ ಸಿಂಗ್ ಹೇಳಿದ್ದಾರೆ. 

ಮುಂದೆ ನಿನ್ನ ಗುರಿ ಏನೆಂದು ಮಾಧ್ಯಮದವರು ರಿಚಾಳನ್ನು ಪ್ರಶ್ನಿಸಿದಾಗ ಇತಿಹಾಸ ಮತ್ತು ಸಮಾಜಶಾಸ್ತ್ರದಲ್ಲಿ ಅಧ್ಯಯನ ಮಾಡಿ ಉನ್ನತ ಶಿಕ್ಷಣ ಪಡೆಯಬೇಕು. ನಂತರ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣಳಾಗುವುದು ನನ್ನ ಗುರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಈಕೆ ತನ್ನ ಗುರಿ ಮುಟ್ಟಿ ಇನ್ನೂ ಹೆಚ್ಚಿನ ಶಿಕ್ಷಣ ಪಡೆದು ಯಶಸ್ಸು ಪಡೆಯಲಿ ಎಂದು ಹಿರಿಯ ಅಧಿಕಾರಿಗಳು ಆಶೀರ್ವದಿಸಿ ಕಚೇರಿಯಿಂದ ಬೀಳ್ಕೊಟ್ಟಿದ್ದಾರೆ.

6 ರಿಂದ 12ಗಂಟೆಯವರೆಗೆ ಒಬ್ಬ ಪೊಲೀಸ್ ಅಧಿಕಾರಿಯ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯೇ, ಹೀಗೆ ಯಾರು ಬೇಕಾದರೂ ಕುಳಿತುಕೊಂಡು ಅಧಿಕಾರ ನಡೆಸಬಹುದಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಕಾನೂನಿನಲ್ಲಿ ಈ ಅವಕಾಶ ಇಲ್ಲದಿದ್ದರೂ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು, ಮಾರಕ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬಲು ಹೀಗೆ ಮಾಡುವುದುಂಟು. ಆದರೆ, ಈ ಅವಕಾಶ ಕೊಡುವುದು ಬಿಡುವುದು ಆಯಾ ಅಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಹೆಸರು ಹೇಳಲಿಚ್ಚಿಸದ ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು