ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳೆತ್ತಿದ ಕೆರೆಗಳಲ್ಲಿ ಜಲ ಸಂಭ್ರಮ

ಕಡು ಬೇಸಿಗೆಯಲ್ಲೂ ಕೆರೆ ಪಾತ್ರದ ಜನರಿಗೆ ನೀರ ನೆಮ್ಮದಿ
Last Updated 29 ಮೇ 2019, 19:45 IST
ಅಕ್ಷರ ಗಾತ್ರ

ಶಿರಸಿ: ಎಲ್ಲೆಡೆ ನೀರು ಹಿಡಿಯಲು ಸಂಘರ್ಷ ನಡೆಯುತ್ತಿದ್ದರೆ, ಇಲ್ಲಿ ಹಿಡಿದಿಟ್ಟ ನೀರಿನ ಪ್ರಮಾಣದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಬಾವಿಯಲ್ಲಿರುವ ನೀರಿನ ಮಟ್ಟ ಅಳೆಯುವ ಕುತೂಹಲ ಹೆಚ್ಚಾಗುತ್ತಿದೆ!

ಹೌದು, ಜಲಮೂಲ ರಕ್ಷಣೆಯ ಕಾಳಜಿಯೊಂದಿಗೆ ಎರಡು ವರ್ಷಗಳ ಹಿಂದೆ ಹುಟ್ಟಿರುವ ‘ಶಿರಸಿ ಜೀವಜಲ ಕಾರ್ಯಪಡೆ’ ಹೂಳೆತ್ತಿರುವ ಕೆರೆಗಳಲ್ಲಿ, ಬಿರು ಬೇಸಿಗೆಯಲ್ಲೂ ಜಲರಾಶಿ ಸಮೃದ್ಧವಾಗಿದೆ. ನೀರ ನೆಮ್ಮದಿ ಕಂಡಿರುವ ಕೆರೆ ಪಾತ್ರದ ನಿವಾಸಿಗಳು, ಮೇ ತಿಂಗಳ ಕೊನೆಯಲ್ಲೂ ಮನೆಯ ಬಾವಿಯಲ್ಲಿರುವ ನೀರಿನ ಮಟ್ಟವನ್ನು ಕಂಡು ಸಂಭ್ರಮಿಸುತ್ತಿದ್ದಾರೆ.

2017ರಲ್ಲಿ ಜೀವಜಲ ಕಾರ್ಯಪಡೆಯು ನಗರದ ಐದು ಕೆರೆಗಳ ಹೂಳೆತ್ತಿದ್ದರೆ, ನಗರಸಭೆ ಎರಡು ಕೆರೆಗಳ ಹೂಳು ತೆಗೆದಿತ್ತು. ಸಾರ್ವಜನಿಕರ ವಂತಿಗೆಯ ಜತೆಗೆ, ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಸ್ವಂತ ಹಣ ಖರ್ಚು ಮಾಡಿ ಐದು ಕೆರೆಗಳ ಹೂಳೆತ್ತಿದ್ದರು. ಈಗ ಈ ಎಲ್ಲ ಕೆರೆಗಳಲ್ಲೂ 5ರಿಂದ 8 ಅಡಿಯಷ್ಟು ನೀರಿದೆ.

’ನೀರಿನ ಸಮಸ್ಯೆ ಇಲ್ಲವೆಂದಲ್ಲ, ನಗರಸಭೆ ನಳದ ನೀರನ್ನು ಅವಲಂಬಿಸಿರುವವರಿಗೆ ಈ ಬಾರಿ ಬೇಸಿಗೆಯಲ್ಲಿ ಸಮಸ್ಯೆಯಾಗಿದೆ. ಕೆರೆ ಪಾತ್ರದ ಒಂದು ಕಿಲೊಮೀಟರ್‌ ವ್ಯಾಪ್ತಿಯಲ್ಲಿ ತೆರೆದಬಾವಿ ಹೊಂದಿರುವ ಮನೆಗಳಿಗೆ ನೀರಿಗೆ ತೊಂದರೆಯಿಲ್ಲ. ನಗರದಲ್ಲಿ ಈಗ ನೀರಿನ ಮಾದರಿಗಳು ಮಾತನಾಡುತ್ತಿವೆ. ಜನರಲ್ಲಿ ಜಲಜಾಗೃತಿ ಮೂಡಿದ್ದನ್ನು ಕಂಡಾಗ ಮಾಡಿದ ಕೆಲಸ ಸಾರ್ಥಕವೆನಿಸುತ್ತದೆ’ ಎನ್ನುತ್ತಾರೆ ಶ್ರೀನಿವಾಸ ಹೆಬ್ಬಾರ.

’ಪ್ರತಿವರ್ಷ ಬೇಸಿಗೆಯಲ್ಲಿ ನಗರಸಭೆ ನಳದ ನೀರಿಗಾಗಿ ಕಾಯಬೇಕಾಗಿದ್ದ ನಮ್ಮ ಭಾಗದಲ್ಲಿ ಕೆರೆ ಹೂಳೆತ್ತಿದ ಮೇಲೆ ಬಾವಿಗಳು ಬತ್ತುವುದಿಲ್ಲ’ ಎನ್ನುತ್ತಾರೆ ಬೆಳ್ಳಕ್ಕಿ ಕೆರೆ ಸಮೀಪದ ನಿವಾಸಿ ಎಂ.ಜೆ.ಹರಿಕಾಂತ. ’ಕೆರೆ ಹೂಳೆತ್ತುವ ಪೂರ್ವದಲ್ಲಿ ಏಪ್ರಿಲ್–ಮೇ ತಿಂಗಳಲ್ಲಿ ಬಾವಿಯ ನೀರು ನೋಡಿ ಪಂಪ್‌ಸೆಟ್ ಚಾಲು ಮಾಡಬೇಕಾಗಿತ್ತು. ಈಗ ಸರಾಸರಿ ಆರು ಅಡಿ ನೀರಿಗೆ ಬರವಿಲ್ಲ’ ಎನ್ನುತ್ತಾರೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಭಟ್ಟ.

‘2016ರವರೆಗೆ ಬೇಸಿಗೆಯಲ್ಲಿ 2–3 ಮನೆಯವರು ಸೇರಿ ಟ್ಯಾಂಕರ್ ನೀರು ಖರೀದಿಸುವ ಸಂದರ್ಭವಿತ್ತು. ಈಗ ನಮ್ಮ ಕೆರೆಯಲ್ಲಿ ಎಂಟು ಅಡಿ ನೀರಿದೆ. ಇದೇ ಮಟ್ಟಕ್ಕೆ ಎಲ್ಲರ ಮನೆಯ ಬಾವಿಯಲ್ಲೂ ನೀರಿದೆ. ಜೀವಜಲ ಕಾರ್ಯಪಡೆಯಿಂದ ಸುಮಾರು 100 ಮನೆಗಳ ಜಲದಾಹ ಇಂಗಿದೆ’ ಎನ್ನುತ್ತಾರೆ ರಾಯರಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎನ್.ಹೆಗಡೆ.

ಬಾವಿ, ಕೆರೆ, ನದಿಯ ಒಡನಾಟದಲ್ಲಿ ಬೆಳೆದ ಮಲೆನಾಡಿನ ಜನರಿಗೆ ಇವು ಬತ್ತುವ ಹಂತ ಅನುಭವಕ್ಕೆ ಬಂದಿದೆ. ಹೂಳೆತ್ತಿದ ಮೇಲೆ ಕೆರೆಯಲ್ಲಿ ನೀರಿದ್ದರೆ, ಬಾವಿಯಲ್ಲಿ ನೀರು ಎಂಬ ಜಲ ಸಾಕ್ಷರತೆಯ ಪ್ರಜ್ಞೆ ಬೆಳೆದಿದೆ. ಈ ಪ್ರಜ್ಞೆ ಸಮೂಹದಲ್ಲಿ ಮೂಡಿದರೆ ಕೆರೆ ತನ್ನಿಂದ ತಾನಾಗಿಯೇ ಸಂರಕ್ಷಣೆಯಾಗುತ್ತದೆ’ ಎಂದು ಜಲ ಕಾರ್ಯಕರ್ತ ಶಿವಾನಂದ ಕಳವೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಕೊಳವೆಬಾವಿ ತೆರೆಯುವ ಸಂಸ್ಕೃತಿ ಬದಲಾಗಿ, ಪುನಃ ತೆರೆದಬಾವಿ ತೋಡಿಸಲು ಜನ ಮುಂದಾಗಬೇಕು. ಕೆರೆ ಹೂಳೆತ್ತುವ ಜತೆಗೆ ಇಂಗುಗುಂಡಿ ನಿರ್ಮಿಸಿದರೆ, ಬರ ಓಡಿಸಲು ಸಾಧ್ಯ
-ಶ್ರೀನಿವಾಸ ಹೆಬ್ಬಾರ,ಜೀವಜಲ ಕಾರ್ಯಪಡೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT