ಗುರುವಾರ , ನವೆಂಬರ್ 21, 2019
21 °C

ದೆಹಲಿ ಕೋರ್ಟ್ ಹೊರಗಡೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ವಕೀಲರಿಂದ ಹಲ್ಲೆ

Published:
Updated:
 cop thrashed by protesting lawyer

ನವದೆಹಲಿ: ವಕೀಲರು ಮತ್ತು ಪೊಲೀಸರ ನಡುವಿನ ಜಗಳಕ್ಕೆ ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣ ಸಾಕ್ಷಿಯಾಗಿತ್ತು. ಇದಾದ ಎರಡು ದಿನಗಳ ಬಳಿಕ ಮತ್ತೆ ಸಾಕೇತ್ ನ್ಯಾಯಾಲಯದ ಹೊರಭಾಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ವಕೀಲರು ಹಲ್ಲೆ ನಡೆಸಿದ್ದಾರೆ.

ವಕೀಲರು ಹಲ್ಲೆ ನಡೆಸಿರುವ ವಿಡಿಯೂ ವೈರಲ್ ಆಗಿದ್ದು, ಬೈಕ್ ಓಡಿಸುತ್ತಿದ್ದ ಪೊಲೀಸ್ ಅಧಿಕಾರಿಗೆ  ಹೊಡೆದಿರುವ ಮತ್ತು ಕಪಾಳಮೋಕ್ಷ ಮಾಡಿರುವ ದೃಶ್ಯಾವಳಿಯು ಸೆರೆಯಾಗಿದೆ.

ವಕೀಲರಿಂದ ಹಲ್ಲೆಗೊಳಗಾಗಿ ಅಲ್ಲಿಂದ ತೆರಳಲು ಮುಂದಾದ ಪೊಲೀಸ್ ಅಧಿಕಾರಿಯ ಬೈಕ್‌ಗೆ ವಕೀಲರೊಬ್ಬರು ಹೆಲ್ಮೆಟ್ ಎಸೆದಿದ್ದಾರೆ.

ಸಾಕೇತ್ ನ್ಯಾಯಾಲಯದ ಬಳಿ ಪೊಲೀಸ್ ಅಧಿಕಾರಿಗೆ ವಕೀಲರು ಹಲ್ಲೆ ನಡೆಸಿದ್ದಾರೆ. ವಿಡಿಯೊದಿಂದಾಗಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಕೀಲರು ಮತ್ತು ಪೊಲೀಸರ ನಡುವೆ ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರವಷ್ಟೇ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ 20 ಜನ ಪೊಲೀಸರು ಮತ್ತು ಹಲವಾರು ವಕೀಲರು ಗಾಯಗೊಂಡಿದ್ದರು. ಅಲ್ಲದೆ ಹಲವು ವಾಹನಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ: ವಕೀಲರು, ಪೊಲೀಸರ ನಡುವೆ ಘರ್ಷಣೆ, ನ್ಯಾಯಾಂಗ ತನಿಖೆಗೆ ಆದೇಶ

ಏನಿದು ಘಟನೆ?
ನ.2ರಂದು ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದ ಹೊರಗಡೆ ವಕೀಲರು ಮತ್ತು ಪೊಲೀಸರ ನಡುವೆ  ಗಲಾಟೆ ನಡೆದಿತ್ತು. ಗಲಾಟೆಯನ್ನು ಖಂಡಿಸಿ ದೆಹಲಿ ಹೈಕೋರ್ಟ್ ಮತ್ತು ಎಲ್ಲ ಜಿಲ್ಲಾ ನ್ಯಾಯಾಲಯದ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಸೋಮವಾರ ಪೊಲೀಸರ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.
ಕೋಪೋದ್ರಿಕ್ತ ವಕೀಲರು ಸಾಕೇತ್ ನ್ಯಾಯಾಲಯದ ಹೊರಭಾಗ ಜಮಾಯಿಸಿ ನ್ಯಾಯಾಲಯದ ಒಳಗೆ ಹೋಗುತ್ತಿದ್ದ ಸಿಬ್ಬಂದಿಯನ್ನು ತಡೆದಿದ್ದರು. ಈ ವೇಳೆ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ದರು.
ವಕೀಲರು ತಮ್ಮ ಸಹೋದ್ಯೋಗಿಗೆ ಹೊಡೆಯಲಾಗಿದೆ ಎಂದು ಆರೋಪಿಸಿದರೆ, ಪೊಲೀಸರು ಮೂವರು ಹಿರಿಯ ಅಧಿಕಾರಿಗಳಿಗೆ ವಕೀಲರು ಹೊಡೆದಿದ್ದಾರೆ ಎಂದು ದೂರಿದ್ದರು. ಈ ಮಧ್ಯೆ ದೆಹಲಿ ಹೈಕೋರ್ಟ್ ಘಟನೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇಬ್ಬರು ಎಎಸ್ಐಗಳನ್ನು ಅಮಾನತುಗೊಳಿಸಿದೆ ಮತ್ತು ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದುವರೆಗೂ ಆರು ಪ್ರಕರಣಗಳು ದಾಖಲಾಗಿವೆ.

ಶನಿವಾರ ಮಧ್ಯಾಹ್ನ 2 ಗಂಟೆ ತೀಸ್ ಹಜಾರಿ ನ್ಯಾಯಾಲಯದ ಹೊರಭಾಗದಲ್ಲಿ ನಿಯೋಜಿಸಲಾಗಿದ್ದ ಮೂರನೇ ಬೆಟಾಲಿಯನ್‌ನ ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ ನಡೆದಿದೆ. ಇದು ಹಿಂಸಾಚಾರಕ್ಕೆ ತಿರುಗಿ ಸ್ಥಳದಲ್ಲಿ ಜಮಾಯಿಸಿದ ವಕೀಲರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ 8 ಜನ ವಕೀಲರು ಗಾಯಗೊಂಡಿದ್ದರು ಮತ್ತು 20 ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)