ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಈಶಾನ್ಯ ಭಾರತ ತತ್ತರ

ಬಿಹಾರದ ಆರು ಜಿಲ್ಲೆಗಳಲ್ಲಿ ಆತಂಕದ ಸ್ಥಿತಿ l ನೇಪಾಳದಲ್ಲೂ ಧಾರಾಕಾರ ಮಳೆ
Last Updated 14 ಜುಲೈ 2019, 20:19 IST
ಅಕ್ಷರ ಗಾತ್ರ

ನವದೆಹಲಿ: ನೇಪಾಳದಲ್ಲಿನ ವಿಪರೀತ ಮಳೆಯಿಂದಾಗಿ ಈಶಾನ್ಯ ಭಾರತ ಪ್ರವಾಹಕ್ಕೆ ಸಿಲುಕಿದೆ. ಇಲ್ಲಿಯವರೆಗೆ 11 ಜನರು ಮೃತಪಟ್ಟಿದ್ದಾರೆ. ಅಸ್ಸಾಂನಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ.

ಬಿಹಾರದ ಆರು ಜಿಲ್ಲೆಗಳಲ್ಲಿ ಪ್ರವಾಹ (ಪಟ್ನಾ ವರದಿ): ನೇಪಾಳ ಗಡಿಗೆ ಹೊಂದಿಕೊಂಡಿರುವ ಬಿಹಾರದ ಆರು ಜಿಲ್ಲೆಗಳು ಮಳೆಯಿಂದಾಗಿ ಪ್ರವಾಹ ಭೀತಿಯಲ್ಲಿವೆ. ಉತ್ತರ ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನೂರಾರು ಗ್ರಾಮಗಳು ಜಲಾವೃತವಾಗಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಸೂಚನೆ ನೀಡಿದರು.

ಎನ್‌ಡಿಆರ್‌ಎಫ್‌ ಯೋಧರ ಜತೆಗೆ ರಾಜ್ಯದ ವಿಪತ್ತು ನಿರ್ವಹಣಾ ಪಡೆಯನ್ನೂ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಕಠ್ಮಂಡು ವರದಿ: ನೇಪಾಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಮೃತರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. 33ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ.

ನೇಪಾಳದ ಪೂರ್ವ ಮತ್ತು ದಕ್ಷಿಣ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಗುರುವಾರದಿಂದ ವಿಪರೀತ ಮಳೆ ಸುರಿಯುತ್ತಿದ್ದು, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಲ್ಲಿಯವರೆಗೆ 1,100ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ನೇಪಾಳ ಪೊಲೀಸ್‌ ವಕ್ತಾರ ಬಿಶ್ವರಾಜ್‌ ಪೋಖ್ರೆಲ್‌ ತಿಳಿಸಿದ್ದಾರೆ.

‘ಕಾಣೆಯಾಗಿರುವವರ ಪತ್ತೆಗೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೊಡನೆ ಸಂಪರ್ಕ ಸಾಧಿಸಿ ಸಂಕಷ್ಟದಲ್ಲಿರುವವರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.

ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಸೋಮವಾರದ ವೇಳೆಗೆ ಅವುಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ನೇಪಾಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂಗ್ಲಾದೇಶದ ಆಗ್ನೇಯ ಭಾಗವೂ ಪ್ರವಾಹ ಪೀಡಿತವಾಗಿದ್ದು, ಮಗು ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರೊಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದ ವಿವಿಧ ತಂಡಗಳು ನೆರವಿನ ಹಸ್ತ ಚಾಚಿದ್ದು, ದಿನಸಿ ಮತ್ತಿತರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಕಳೆದ ವರ್ಷ ದಕ್ಷಿಣ ಏಷ್ಯಾದಲ್ಲಿ ಮುಂಗಾರು ಮಳೆ ವೇಳೆ ಉಂಟಾದ ಪ್ರವಾಹದಿಂದ 1,200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಕೇರಳದಲ್ಲಿ 100 ವರ್ಷಗಳಲ್ಲಿ ಕಂಡರಿಯದಂತ ಪ್ರವಾಹ ಉಂಟಾಗಿ ಸಾಕಷ್ಟು ಸಾವು, ನೋವು ಉಂಟಾಗಿ, ಅಪಾರ ಪ್ರಮಾಣದ ಆಸ್ತಿ–ಪಾಸ್ತಿ ನಷ್ಟವಾಗಿತ್ತು.

ಅಸ್ಸಾಂನಲ್ಲಿ ಸೇನೆ ನೆರವು

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹದಿಂದಾಗಿ 14 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಸೇನೆ ನೆರವು ಪಡೆಯಲಾಗಿದೆ.

ಜಲಾವೃತ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಯೋಧರು ಕರೆದೊಯ್ಯತ್ತಿದ್ದಾರೆ.25 ಜಿಲ್ಲೆಗಳ 2,168 ಗ್ರಾಮಗಳ ಜನರು ತೊಂದರೆಯಲ್ಲಿದ್ದಾರೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT