ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ದಿನಗಳ ಬಳಿಕ ತೆರೆದ ಮದ್ಯದಂಗಡಿ: ಮದ್ಯಕ್ಕಾಗಿ ಮುಗಿಬಿದ್ದ ಜನರು

Last Updated 4 ಮೇ 2020, 21:25 IST
ಅಕ್ಷರ ಗಾತ್ರ

ನವದೆಹಲಿ: 40 ದಿನಗಳ ಬಳಿಕ ದೇಶದಲ್ಲಿ ಮದ್ಯದ ಅಂಗಡಿಗಳು ಬಾಗಿಲು ತೆರೆದಿವೆ. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದೇ ಮುಂತಾದ ಅಗತ್ಯ ಸುರಕ್ಷಾ ಕ್ರಮಗಳನ್ನೆಲ್ಲ ಗಾಳಿಗೆ ತೂರಿ ಜನರು ಮದ್ಯದಂಗಡಿಗಳತ್ತ ಧಾವಿಸಿದ ಘಟನೆ ಹಲವೆಡೆ ನಡೆದಿವೆ. ಹೆಚ್ಚಿನ ಕಡೆಗಳಲ್ಲಿ ಅಂಗಡಿಗಳನ್ನು ತೆರೆಯುವುದಕ್ಕೂ ಮುನ್ನವೇ ಜನರು ಸಾಲುಗಟ್ಟಿ ನಿಂತಿದ್ದರು.

ದೆಹಲಿಯಲ್ಲಿ ಸರ್ಕಾರಿ ಸ್ವಾಮ್ಯದ 150 ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಇಂಥ ಅಂಗಡಿಗಳಿಗೆ ಜನರು ಮುಗಿಬಿದ್ದರು. ಜನರನ್ನು ನಿಯಂತ್ರಿಸಲಾಗದೆ ಸ್ವಲ್ಪ ಸಮಯದಲ್ಲೇ ಹಲವು ಅಂಗಡಿಗಳನ್ನು ಮುಚ್ಚಬೇಕಾಯಿತು. ಕೆಲವೆಡೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿದರು.

ಉತ್ತರಪ್ರದೇಶದಲ್ಲಿ ಸುಮಾರು 26 ಸಾವಿರ ಮದ್ಯದಂಗಡಿಗಳು ಸೋಮವಾರ ತೆರೆದಿದ್ದವು. ಬಹುತೇಕ ಎಲ್ಲಾ ಅಂಗಡಿಗಳ ಮುಂದೆಯೂ ಉದ್ದನೆಯ ಸಾಲು ಕಾಣಿಸಿತು. ಇಲ್ಲಿ ಒಂದೇ ದಿನದಲ್ಲಿ ಸರ್ಕಾರವು ಸುಮಾರು ₹100 ಕೋಟಿ ಆದಾಯ ದಾಖಲಿಸುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸದ ಕಾರಣಕ್ಕೆ ರಾಜಸ್ಥಾನದಲ್ಲಿ ಹಲವು ಅಂಗಡಿಗಳನ್ನು ಮುಚ್ಚಬೇಕಾಯಿತು. ಪಂಜಾಬ್‌, ಹರಿಯಾಣದಲ್ಲಿ ಮದ್ಯದಂಗಡಿ ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಮಧ್ಯಪ್ರದೇಶದಲ್ಲಿ ಮಂಗಳವಾರದಿಂದ ಬಾಗಿಲು ತೆರೆಯಲಿವೆ. ಆಂಧ್ರಪ್ರದೇಶದಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯದ ಮೇಲೆ ‘ನಿಷೇಧ ತೆರಿಗೆ’ವಿಧಿಸುವುದಾಗಿ ಸರ್ಕಾರ ಹೇಳಿದೆ.

‘ಮದ್ಯದಂಗಡಿ ಮುಚ್ಚಿಸಲಾಗುವುದು’
ಮಹಾರಾಷ್ಟ್ರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಬಡ ಕುಟುಂಬಗಳ ಮಹಿಳೆಯರು, ಮದ್ಯ ಸೇವಿಸಿ ಬರುವ ಪತಿಯಿಂದ ದೌರ್ಜನ್ಯಕ್ಕೆ ಒಳಗಾಗಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಮದ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಿದ್ದಾರೆ ಎಂದು ಔರಂಗಾಬಾದ್‌ ಕ್ಷೇತ್ರದ ಸಂಸದ (ಎಐಎಂಐಎಂ) ಇಮ್ತಿಯಾಜ್‌ ಜಲೀಲ್‌ ಹೇಳಿದ್ದಾರೆ.

ದಿನದ ಬೆಳವಣಿಗೆಗಳು:
* ಛತ್ತೀಸಗಡದಲ್ಲಿ ಮದ್ಯದಂಗಡಿಗಳಿಗೆ ಪೊಲೀಸರ ರಕ್ಷಣೆ. ಮನೆಗಳಿಗೆ ಮದ್ಯ ಸರಬರಾಜು ಮಾಡುವ ಬಗ್ಗೆ ಅಬಕಾರಿ ಅಧಿಕಾರಿಗಳ ಚಿಂತನೆ
*ಮುಂಬೈ ಹಾಗೂ ಪುಣೆ ನಗರಗಳಲ್ಲಿ ಮದ್ಯದ ಅಂಗಡಿಗಳು ತೆರೆಯಬಹುದೆಂಬ ನಿರೀಕ್ಷೆಯಲ್ಲಿ ಜನರು ಮೊದಲೇ ಸಾಲುಗಟ್ಟಿ ನಿಂತಿದ್ದರು. ಆದರೆ ಹೆಚ್ಚಿನ ಅಂಗಡಿಗಳು ಬಾಗಿಲು ತೆರೆಯಲೇ ಇಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ಸಂವಹನದ ಕೊರತೆಯೇ ಇದಕ್ಕೆ ಕಾರಣ ಎಂದು ಅರೋಪಿಸಲಾಗಿದೆ
* ಪುದುಚೇರಿಯಲ್ಲಿ ಸೋಮವಾರ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರಲಿಲ್ಲ. ಕೇಂದ್ರದ ಮಾರ್ಗಸೂಚಿಯನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ಅಲ್ಲಿನ ವ್ಯಾಪಾರಿಗಳು ದೂರಿದ್ದಾರೆ
* ಕೋಲ್ಕತ್ತದ ಕಾಲಿಘಾಟ್‌ ಪ್ರದೇಶದಲ್ಲಿ ಮದ್ಯದಂಗಡಿ ಮುಂದೆ ಗುಂಪುಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ
* ಗೋವಾದಲ್ಲಿ ಮಾಸ್ಕ್‌ ಇದ್ದವರಿಗೆ ಮಾತ್ರ ಮದ್ಯ

ಮದ್ಯ ಬಿಟ್ಟು ಎಲ್ಲಾ ಇದೆ
ಲಾಕ್‌ಡೌನ್‌ ಸಡಿಲಿಕೆಯಿಂದ ಕೇರಳದ ಬಹುಪಾಲು ಪ್ರದೇಶ ಸಾಮಾನ್ಯ ಸ್ಥಿತಿಗೆ ಬಂದಿದೆ. ಸೋಮವಾರ ಹೆಚ್ಚಿನ ಎಲ್ಲಾ ಅಂಗಡಿಗಳು ತೆರೆದಿದ್ದರೂ ಮದ್ಯದಂಗಡಿಗಳಿಗೆ ಮಾತ್ರ ಅವಕಾಶ ನೀಡಲಿಲ್ಲ.

ವಿಶೇಷವೆಂದರೆ, ಎರಡನೇ ಅವಧಿಯ ಲಾಕ್‌ಡೌನ್‌ ವೇಳೆಯಲ್ಲೇ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಕೇರಳ ಸರ್ಕಾರವು ಗಂಭೀರ ಪ್ರಯತ್ನಗಳನ್ನು ನಡೆಸಿತ್ತು. ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ಜಾರಿ ಮಾಡಿರಲಿಲ್ಲ. ಕೋವಿಡ್‌–19 ನಿಯಂತ್ರಣದ ವಿಚಾರದಲ್ಲಿ ಸರ್ಕಾರವು ಶ್ಲಾಘನೆಗೆ ಪಾತ್ರವಾಗಿತ್ತು. ಈಗ ಮದ್ಯದಂಗಡಿಗಳನ್ನು ತೆರೆದರೆ ಜನರು ಮುಗಿಬಿದ್ದು, ಮತ್ತೆ ವೈರಸ್‌ ಹರಡಲು ಕಾರಣವಾಗಬಹುದು, ಹಾಗೇನಾದರೂ ಆದರೆ ಈವರೆಗಿನ ಸಾಧನೆ ವ್ಯರ್ಥವಾದೀತೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

‘40 ದಿನಗಳಿಂದ ಮದ್ಯದಂಗಡಿ ಮುಚ್ಚಿದ್ದರಿಂದ ಹಲವರು ಈ ವ್ಯಸನದಿಂದ ಹೊರಬರುತ್ತಿದ್ದಾರೆ. ಆದ್ದರಿಂದ ಇನ್ನೂ ಕೆಲವು ದಿನಗಳ ಕಾಲ ಅಂಗಡಿಗಳನ್ನು ತೆರೆಯಬಾರದು’ ಎಂದು ‘ತೀರದೇಶ ಮಹಿಳಾವೇದಿ’ ಎಂಬ ಸಂಘಟನೆಯು ಸರ್ಕಾರವನ್ನು ಒತ್ತಾಯಿಸಿದೆ.

‘ಮದ್ಯ ಮಾರಾಟ ಸ್ಥಗಿತಗೊಂಡಿದ್ದರಿಂದ ಅನೇಕ ಕುಟುಂಬಗಳಲ್ಲಿ ಶಾಂತಿ ನೆಲೆಸಿದೆ, ಕೌಟುಂಬಿಕ ಸಂಬಂಧಗಳು ಗಟ್ಟಿಗೊಂಡಿವೆ’ ಎಂಬುದು ಕೇರಳ ಇನ್‌ಸ್ಟಿಟ್ಯೂಟ್‌ ಆಫ್‌ ಲೋಕಲ್‌ ಅಡ್ಮಿನಿಸ್ಟ್ರೇಶನ್ಸ್‌ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿತ್ತು.

ಕೇರಳದ ಕರಾವಳಿ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಹಿಳೆಯರು ವೋಟ್‌ಬ್ಯಾಂಕ್‌ ಆಗಿದ್ದಾರೆ. ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವುದರಿಂದ ಮಹಿಳೆಯರನ್ನು ಎದುರುಹಾಕಿಕೊಳ್ಳಲು ಯಾವ ಪಕ್ಷವೂ ಸಿದ್ಧವಿಲ್ಲ. ಮದ್ಯ ಮಾರಾಟ ಆರಂಭಿಸದಿರುವ ಸರ್ಕಾರದ ತೀರ್ಮಾನದ ಹಿಂದೆ ಈ ಕಾರಣವೂ ಇದೆ ಎನ್ನಲಾಗಿದೆ.

ಏನೇ ಆದರೂ ವಾರ್ಷಿಕ ₹2500 ಕೋಟಿ ಆದಾಯ ತಂದುಕೊಡುವ ಈ ವಹಿವಾಟನ್ನು ದೀರ್ಘಕಾಲದವರೆಗೆ ತಡೆಹಿಡಿಯಲು ಸರ್ಕಾರಕ್ಕೆ ಕಷ್ಟವಾಗಬಹುದು.

**

ಮಹಾರಾಷ್ಟ್ರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಬಡ ಕುಟುಂಬಗಳ ಮಹಿಳೆಯರು, ಮದ್ಯ ಸೇವಿಸಿ ಬರುವ ಪತಿಯಿಂದ ದೌರ್ಜನ್ಯಕ್ಕೆ ಒಳಗಾಗಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಮದ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಿದ್ದಾರೆ.
-ಇಮ್ತಿಯಾಜ್‌ ಜಲೀಲ್‌, ಔರಂಗಾಬಾದ್‌ ಕ್ಷೇತ್ರದ ಸಂಸದ (ಎಐಎಂಐಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT