ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿತಿನ್‌ ಪ್ರಸಾದ ‘ಕೈ’ ಬಿಡುವುದಿಲ್ಲ

Last Updated 22 ಮಾರ್ಚ್ 2019, 18:01 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಜಿತಿನ್‌ ಪ್ರಸಾದ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಶುಕ್ರವಾರ ಹಬ್ಬಿತ್ತು. ಆದರೆ, ಇದು ಕಪೋಲಕಲ್ಪಿತ ಎಂದು ಪ್ರಸಾದ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಪ್ರಸಾದ ಅವರು ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆತ್ಮೀಯರಲ್ಲಿ ಒಬ್ಬರು. ಆದರೆ, ಅವರು ಸ್ಪರ್ಧಿಸುವ ಧೌರಹ್ರಾ ಕ್ಷೇತ್ರದ ಸುತ್ತಲಿನ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರಸಾದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಮಾರ್ಚ್‌ 7ರಂದು ಪ್ರಕಟವಾದ ಮೊದಲ ಪಟ್ಟಿಯಲ್ಲಿಯೇ ಧೌರಹ್ರಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಸಾದ ಅವರ ಹೆಸರು ಪ್ರಕಟಿಸಲಾಗಿತ್ತು.

ಬಿಜೆಪಿ ಸೇರುವಿರಾ ಎಂಬ ಪ್ರಶ್ನೆಗೆ ‘ಕಲ್ಪಿತ ಪ್ರಶ್ನೆಗಳಿಗೆ ನಾನೇಕೆ ಉತ್ತರಿಸಲಿ’ ಎಂದು ಪ್ರಸಾದ ಮರು ಪ್ರಶ್ನೆ ಹಾಕಿದ್ದಾರೆ.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರೂ ಈ ಪ್ರಶ್ನೆಗೆ ಅಸಮಾಧಾನದಿಂದಲೇ ಉತ್ತರಿಸಿದ್ದಾರೆ. ‘ಜಿತಿನ್‌ಭಾಯ್‌ ಮತ್ತು ನಾನು ಇನ್ನೂ ಬಹಳ ದೂರ ಸಾಗುವುದಿದೆ. ಈ ಬಗೆಗಿನ ಸುದ್ದಿಗಳೆಲ್ಲವೂ ಲದ್ದಿ. ಇಂತಹ ಭಾಷೆ ನಾನು ಬಳಸುವುದಿಲ್ಲ. ಆದರೂ ಈಗ ಅನಿವಾರ್ಯವಾಗಿ ಹೀಗೆ ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಜಿತಿನ್‌ ಪ್ರಸಾದ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಜಿತೇಂದ್ರ ಪ್ರಸಾದ ಅವರ ಮಗ. 1977ರಲ್ಲಿ ಕಾಂಗ್ರೆಸ್‌ ವಿಭಜನೆಯನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ವ್ಯಕ್ತಿ ಅವರು. ಪಕ್ಷ ತೊರೆದು ಬರುವಂತೆ ಜಿತೇಂದ್ರ ಅವರಿಗೆ ಹಲವು ಬಾರಿ ಒತ್ತಡ ಹಾಕಲಾಗಿತ್ತು. 1977ರಲ್ಲಿ ಜಯಪ್ರಕಾಶ ನಾರಾಯಣ್‌, 1994ರಲ್ಲಿ ಅರ್ಜುನ್‌ ಸಿಂಗ್‌ ಮತ್ತು 1996ರಲ್ಲಿ ಶರದ್‌ ಪವಾರ್‌ ಅವರು ಪಕ್ಷ ಬಿಟ್ಟು ಬರುವಂತೆ ಒತ್ತಾಯಿಸಿದ್ದರು. ಆದರೆ, ಜಿತೇಂದ್ರ ಪಕ್ಷ ಬಿಟ್ಟಿರಲಿಲ್ಲ. ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು.

ಜಿತಿನ್‌ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು. ಆಗಿನ ಕಿರಿಯ ವಯಸ್ಸಿನ ಸಚಿವರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT