ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಹೇಳಿಕೆಗೆ ಸಚಿವ ಹರ್ಷವರ್ಧನ ಟೀಕೆ

ಸಂಸತ್ ಕಲಾಪ ನುಂಗಿದ ಕೋಲಾಹಲ
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಪ್ರಧಾನಿ ವಿರುದ್ಧ ಮಾಡಿದ್ದ ಟೀಕೆಯನ್ನು ಖಂಡಿಸುವ ಭರದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಮಾಡಿದ ಟೀಕೆ ಸಂಸತ್‌ನಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಗಿ, ಕಲಾಪವನ್ನೇ ಬಲಿಪಡೆಯಿತು.

ಇದೇ ವಿಷಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವಿನ ಆರೋಪ–ಪ್ರತ್ಯಾರೋಪಗಳಿಗೆ ಕಲಾಪ ಬಲಿಯಾಯಿತು. ಪರಿಸ್ಥಿತಿ ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆ, ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಪ್ರಶ್ನೋತ್ತರ ವೇಳೆ ಆರಂಭಗೊಂಡಾಗ, ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸಂಸದ ರಾಹುಲ್‌ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವಂತೆ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದರು.

ಸಚಿವ ಹರ್ಷವರ್ಧನ್ ಅವರು ಪ್ರಶ್ನೆಗೆ ಉತ್ತರ ನೀಡುವ ಬದಲಾಗಿ, ‘ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ಬಹಳ ವಿಲಕ್ಷಣವಾಗಿ ಮಾತನಾಡಿದ್ದನ್ನು ಮೊದಲು ಖಂಡಿಸಲು ಬಯಸುತ್ತೇನೆ’ ಎಂದು ಹೇಳಿದ್ದೇ ತಡ, ಕಾಂಗ್ರೆಸ್‌ ಸಂಸದರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇನ್ನೊಂದೆಡೆ, ಬಿಜೆಪಿ ಸಂಸದರು ಸಚಿವ ಹರ್ಷವರ್ಧನ್ ಬೆಂಬಲಕ್ಕೆ ನಿಂತ ಕೂಡಲೇ ಗದ್ದಲ ಆರಂಭವಾಯಿತು.

ಸಚಿವ ಹರ್ಷವರ್ಧನ್ ಮಾತಿಗೆ ಕಡಿವಾಣ ಹಾಕಲು ಸ್ಪೀಕರ್‌ ಪ್ರಯತ್ನಿಸಿದರು. ಇದನ್ನೂ ಲೆಕ್ಕಿಸದ ಹರ್ಷವರ್ಧನ್, ಪ್ರಧಾನಿ ಕುರಿತ ರಾಹುಲ್‌ ಹೇಳಿಕೆಯನ್ನು ಖಂಡಿಸುವುದನ್ನು ಮುಂದುವರಿಸಿದರು.

ಆಗ ಕಾಂಗ್ರೆಸ್‌ನ ಕೆಲವು ಸಂಸದರು ಸ್ಪೀಕರ್‌ ಮುಂಭಾಗಕ್ಕೆ ಬಂದು, ಹರ್ಷವರ್ಧನ್ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ನಡುವೆ, ಕಾಂಗ್ರೆಸ್‌ ಸಂಸದ ಮಾಣಿಕಂ ಠಾಗೋರ್‌, ಸಚಿವ ಹರ್ಷವರ್ಧನ್ ಅವರತ್ತ ನುಗ್ಗಿದಾಗ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಸರನ್‌ಸಿಂಗ್‌ ಅವರನ್ನು ಹಿಡಿದುಕೊಂಡರು. ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಸ್ಪೀಕರ್‌ ಪೀಠದ ಮುಂಭಾಗಕ್ಕೆ ದೌಡಾಯಿಸಿದರೆ. ಇದಕ್ಕೆ ಪ್ರತಿಯಾಗಿ ಕೇರಳದ ಕಾಂಗ್ರೆಸ್‌ ಸಂಸದ ಹೈಬಿ ಈಡೆನ್‌ ಹಾಗೂ ಇತರರು ಮಧ್ಯಪ್ರವೇಶಿಸಿದರು. ಈ ಹಂತದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವುದನ್ನು ಮನಗಂಡ ಸ್ಪೀಕರ್‌ ಓಂ ಬಿರ್ಲಾ ಅವರು, ಸದಸವನ್ನು ಮಧ್ಯಾಹ್ನ 1ಗಂಟೆ ವರೆಗೆ ಮುಂದೂಡಿದರು.

‘ಕೆಲವು ಕಾಂಗ್ರೆಸ್‌ ಸಂಸದರು ಸಚಿವ ಹರ್ಷವರ್ಧನ್‌ ಮೇಲೆ ಹಲ್ಲೆ ಮಾಡಲು ಮುಂದಾದರು’ ಎಂದು ಬಿಜೆಪಿ ದೂರಿದೆ. ಇನ್ನೊಂದೆಡೆ, ‘ಪ್ರಶ್ನೆಗೆ ಉತ್ತರ ನೀಡುವ ಬದಲಾಗಿ ಹರ್ಷವರ್ಧನ್‌ ಅವರು ರಾಹುಲ್‌ ಗಾಂಧಿ ಅವರನ್ನು ಟೀಕಿಸಿದರು’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಭೋಜನ ವಿರಾಮದ ನಂತರ ಮತ್ತೆ ಕಲಾಪ ಆರಂಭಗೊಂಡಿತಾದರೂ, ಬಿಜೆಪಿ ಮತ್ತು ಕಾಂಗ್ರೆಸ್‌ ಸಂಸದರ ನಡುವಿನ ವಾಕ್ಸಮರ ಮತ್ತೆ ಆರಂಭವಾಯಿತು. ಆಗಲೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು. ಮತ್ತೆ ಸದನ ಸೇರಿದರೂ, ಕೋಲಾಹಲ ನಿಲ್ಲದ ಕಾರಣ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಮೋದಿ, ಆಜಾದ್‌ ಬಳಸಿದ ಪದಗಳಿಗೆ ಕಡತದಿಂದ ಕೊಕ್‌

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ರಾಜ್ಯಸಭೆಯಲ್ಲಿ ಬಳಿಸಿದ ಪದಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ.

ರಾಜ್ಯಸಭೆಯಲ್ಲಿ ಉತ್ತರಿಸುವಾಗ ಪ್ರಧಾನಿ ಮೋದಿ, ‘ಎನ್‌ಪಿಆರ್‌ ಕುರಿತು ನೀವು ಏಕೆ ಸುಳ್ಳು ಹೇಳುತ್ತಿದ್ದೀರಿ’ ಎಂದು ಹೇಳಿದ್ದರು. ಅದೇ ರೀತಿ ಗುಲಾಂ ನಬಿ ಆಜಾದ್ ಅವರು, ‘ಬಿಜೆಪಿ ಈ ದೇಶದ ಜನರ ದಾರಿ ತಪ್ಪಿಸುತ್ತಿದೆ’ ಎಂದಿದ್ದರು.

‘ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ನಿರ್ದೇಶನದಂತೆ ಪ್ರಧಾನಿ ಮಾತುಗಳಿಂದ ‘ಸುಳ್ಳು’ ಹಾಗೂ ಆಜಾದ್‌ ಅವರ ಮಾತುಗಳಿಂದ ‘ದಾರಿ ತಪ್ಪಿಸು’ ಎಂಬ ಪದಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ರಾಹುಲ್‌ಗೆ ಮತ್ತೆ ಮೋದಿತಿರುಗೇಟು

‘ತಾಯಂದಿರು ಹಾಗೂ ಸಹೋದರಿಯರ ಭಾರಿ ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದದ ರಕ್ಷಾಕವಚ ಇರುವುದರಿಂದ ಯಾವ ಕೋಲಿನಿಂದಲೂ ನನಗೆ ತೊಂದರೆಯಾಗದು’ ಎಂದು ಪ್ರಧಾನಿ ಮೋದಿ ಮತ್ತೊಮ್ಮೆ ಪರೋಕ್ಷವಾಗಿ ರಾಹುಲ್‌ ಗಾಂಧಿಯನ್ನು ಕುಟುಕಿದ್ದಾರೆ.

ಬೊಡೊ ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ ಅಸ್ಸಾಂನ ಕೊಕ್ರಝಾರ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಈ ರೀತಿ ಹೇಳಿದ್ದಾರೆ. ಗುರುವಾರವಷ್ಟೇ, ಅವರು ಲೋಕಸಭೆಯಲ್ಲಿ ‘ಟ್ಯೂಬ್‌ಲೈಟ್‌’ ಎಂಬ ಪದ ಬಳಸಿ ರಾಹುಲ್‌ಗೆ ಕುಟುಕಿದ್ದರು.

ದೆಹಲಿ ಚುನಾವಣೆ ರ‍್ಯಾಲಿಯಲ್ಲಿ ಇತ್ತೀಚೆಗೆ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಪ್ರಧಾನಿ ಅವರ ಮಾತುಗಳನ್ನು ಕೇಳುತ್ತಿದ್ದರೆ, ಇನ್ನು ಆರು ತಿಂಗಳಲ್ಲಿ ಅವರು ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತದೆ. ಈ ದೇಶದ ಯುವಕರು ಅವರಗೆ ಕೋಲಿನಿಂದ ಹೊಡೆಯುತ್ತಾರೆ. ಯುವಕರಿಗೆ ಉದ್ಯೋಗ ನೀಡದಿದ್ದರೆ ಈ ದೇಶ ಮುನ್ನಡೆಯದು ಎಂಬುದನ್ನು ಮನವರಿಕೆ ಮಾಡಲಿದ್ದಾರೆ’ ಎಂದು ಹೇಳಿದ್ದರು.

ಮೋದಿ ಪ್ರಧಾನಿ ರೀತಿ ವರ್ತಿಸುತ್ತಿಲ್ಲ: ರಾಹುಲ್‌

‘ಟ್ಯೂಬ್‌ಲೈಟ್‌’ ಪದ ಬಳಸಿ ತಮ್ಮವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದ ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಶುಕ್ರವಾರ ತಿರುಗೇಟು ನೀಡಿದ್ದು, ‘ಮೋದಿ ಒಬ್ಬ ಪ್ರಧಾನಿ ರೀತಿ ವರ್ತಿಸುತ್ತಿಲ್ಲ’ ಎಂದಿದ್ದಾರೆ.

‘ಲೋಕಸಭೆಯಲ್ಲಿ ಶುಕ್ರವಾರ ಗದ್ದಲ ಮಾಡಿದ್ದರು ಸಹ ಪೂರ್ವನಿಯೋಜಿತ. ಈ ಸರ್ಕಾರವನ್ನು ಪ್ರಶ್ನೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಬಿಜೆಪಿ ಸದನದಲ್ಲಿ ಗದ್ದಲ ಮಾಡಿದೆ‌’ ಎಂದೂ ರಾಹುಲ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT