ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಪ್ರದೇಶ: ಸಂಸತ್‌ ಭವನ ಹೋಲುವ ದೇಗುಲ

Last Updated 29 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಮುರೈನ, ಮಧ್ಯಪ್ರದೇಶ: ನವದೆಹಲಿಯಲ್ಲಿರುವ ಸಂಸತ್‌ ಭವನವನ್ನು ಹೋಲುವಂತಹ ಅಥವಾ ಅದರ ಪ್ರತಿಕೃತಿಯಂತೆ ಕಾಣುವ ದೇಗುಲವೊಂದು ಇಲ್ಲಿನ ಚಂಬಲ್‌ ಕಣಿವೆ ವ್ಯಾಪ್ತಿಯಲ್ಲಿ ಕಂಡು ಬಂದಿದ್ದು, ಸಂಸತ್‌ ಭವನದ ವಾಸ್ತುಶಿಲ್ಪ ಶೈಲಿಗೆ ಈ ದೇಗುಲವೇ ಸ್ಫೂರ್ತಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುರೈನದ ಮಿತಾವಲಿ ಗ್ರಾಮದಲ್ಲಿರುವ ಚೌಸಟ್‌ ಯೋಗಿನಿ ದೇಗುಲ ಸಂಸತ್‌ ಭವನದಂತೆಯೇ ಕಾಣುತ್ತಿದೆ. ಆದರೆ, ಸಂಸತ್‌ ಭವನಕ್ಕೆ ಈ ದೇಗುಲವೇ ಸ್ಫೂರ್ತಿ ಎಂಬ ವಾದವನ್ನು ಕೆಲವು ಪ್ರಾಕ್ತನಶಾಸ್ತ್ರಜ್ಞರು ಒಪ್ಪಿಕೊಂಡಿಲ್ಲ.

ಶಿವನ ದೇಗುಲವಾಗಿರುವ ಇದು ಈಗ ರಾಜಕೀಯ ನಾಯಕರ ಗಮನವನ್ನೂ ಸೆಳೆಯುತ್ತಿದೆ. 200 ಮೀಟರ್ ಎತ್ತರ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ.

ಸಂಸತ್‌ ಭವನ ಪ್ರವೇಶಿಸುವ ಕನಸು ಕಾಣುತ್ತಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಮುರೈನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ನರೇಂದ್ರಸಿಂಗ್‌ ತೋಮರ್‌ ಕೂಡ ಇದಕ್ಕೆ ಹೊರತಲ್ಲ.

‘ಮುರೈನ್‌ನಲ್ಲಿ ಚೌಸಟ್‌ ಯೋಗಿನಿ ದೇಗುಲ ಮಾತ್ರವಲ್ಲ, ಇಂತಹ ಹಲವು ಐತಿಹಾಸಿಕ ಮಹತ್ವದ ಸ್ಥಳಗಳು ಈ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಈ ಪ್ರದೇಶವನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಸ್ತಾವವೂ ಇದೆ’ ಎಂದು ತೋಮರ್‌ ಹೇಳುತ್ತಾರೆ.

‘ಜಿಲ್ಲೆಯ ಮಿತಾವಲಿ ಮತ್ತು ಪಧಾವಲಿ ಗ್ರಾಮಗಳಲ್ಲಿ 1,000 ವರ್ಷಗಳ ಹಿಂದಿನ ಕಾಲಕ್ಕೆ ಸೇರಿದ ಐತಿಹಾಸಿಕ ಮಹತ್ವದ ಸ್ಥಳಗಳು, ದೇಗುಲಗಳು ಇವೆ. ಆದರೆ, ವಿದೇಶಿಗರ ದಾಳಿ ವೇಳೆ ಈ ಸ್ಮಾರಕಗಳಿಗೆ ಹಾನಿಯಾಗಿದೆ’ ಎನ್ನುತ್ತಾರೆ ಭಾರತೀಯ ಪ್ರಾಕ್ತನಶಾಸ್ತ್ರ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್‌.

ಡಕಾಯಿತಿ, ದರೋಡೆ ಪ್ರಕರಣಗಳಿಂದ ಕುಖ್ಯಾತಿ ಗಳಿಸಿದ್ದ ಚಂಬಲ್‌ ಕಣಿವೆ ಪ್ರದೇಶ, ಈಗ ವಾಸ್ತುಶಿಲ್ಪ ಶ್ರೀಮಂತಿಕೆಯ ಕಾರಣದಿಂದ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT