ಭಾನುವಾರ, ಮೇ 16, 2021
22 °C

ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧಿಸಿ ಮದ್ರಾಸ್‌ ಹೈಕೋರ್ಟ್ ಆದೇಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧಿಸಿರುವ ಮದ್ರಾಸ್‌ ಹೈ ಕೋರ್ಟ್‌, ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಸಂಬಂಧಿಸಿದಂತೆ ಜನವರಿ 31ರೊಳಗೆ ಸೂಕ್ತ ಕಾನೂನು ನಿಯಮಾವಳಿಗಳ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಸೋಮವಾರ ಸೂಚನೆ ನೀಡಿದೆ.

ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಕಾನೂನುಬದ್ಧಗೊಳಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ  ಕಾಯ್ದೆ ತಿದ್ದುಪಡಿಗೆ ಈಗಾಗಲೇ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ’ದೇಶದಲ್ಲಿ ಫಾರ್ಮಸಿಗಳು ನಿಯಮಾವಳಿಗಳ ಅನುಸಾರ ಪರವಾನಗಿ ಪಡೆದ ಬಳಿಕವಷ್ಟೇ ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧ ಮಾರಾಟಕ್ಕೆ ಅವಕಾಶವಿದೆ. ನಿಯಮಾವಳಿಗಳು ಇನ್ನೂ ಕರಡು ಹಂತದಲ್ಲಿದ್ದು, ಅಂತಿಮಗೊಳ್ಳಬೇಕಿದೆ‘ ಎಂಬುದನ್ನು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಪ್ರಸ್ತಾಪಿಸಿದರು. 

ಕೇಂದ್ರ ಸರ್ಕಾರ ಆನ್‌ಲೈನ್‌ ಮಾರಾಟಕ್ಕೆ ಕಾನೂನುಬದ್ಧ ನಿಯಮ ಜಾರಿಗೊಳಿಸುವವರೆಗೂ, ಆನ್‌ಲೈನ್‌ ಔಷಧ ಮಾರಾಟ ಮಾಡುತ್ತಿರುವ ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕೆಂದು ತಮಿಳುನಾಡು ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಕೆ.ಕೆ.ಸೆಲ್ವನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.  

ಇ–ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಲು ‘ಔಷಧ ಮತ್ತು ಸೌಂದರ್ಯವರ್ಧಕ ನಿಯಂತ್ರಣ ಕಾಯ್ದೆ(1945)’ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸದ್ಯ ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವುದು ಕಾನೂನುಬದ್ಧವಲ್ಲ. ದೇಶದಲ್ಲಿ 3,500 ವೆಬ್‌ಸೈಟ್‌ಗಳ ಮೂಲಕ ಔಷಧ ಮಾರಾಟ ನಡೆಸಲಾಗುತ್ತಿದೆ ಎನ್ನಲಾಗಿದೆ. 

ಆರೋಗ್ಯ ಸಚಿವಾಲಯದ ಅಧಿಸೂಚನೆಯಲ್ಲಿ ಏನಿದೆ?

* ಇ–ಫಾರ್ಮಸಿಯಲ್ಲಿ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ ಔಷಧಗಳ ಮಾರಾಟಕ್ಕೆ ಅವಕಾಶ ಇಲ್ಲ

* ಶೆಡ್ಯೂಲ್‌ 10 ಪಟ್ಟಿಯಲ್ಲಿ ಸೂಚಿಸಲಾಗಿರುವ ಉಪಶಮನಕಾರಿ, ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಮಾತ್ರೆಗಳ ಮಾರಾಟಕ್ಕೆ ನಿರ್ಬಂಧ

* ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ವೈದ್ಯರ ಸಲಹಾ ಚೀಟಿಯನ್ನು ದಾಖಲೆಯಂತೆ ಕಾಪಾಡುವುದು ಕಡ್ಡಾಯ

* ವೈದ್ಯರ ಚೀಟಿ, ವೈದ್ಯರು ಮತ್ತು ರೋಗಿಯ ಮಾಹಿತಿಗಳನ್ನು ಪರಿಶೀಲಿಸುವ ಹೊಣೆ ಆನ್‌ಲೈನ್‌ ಔಷಧ ಮಾರಾಟ ಸಂಸ್ಥೆಗಳದ್ದಾಗಿರುತ್ತದೆ

* ಔಷಧ ಮಾರಾಟದ ಸಮಗ್ರ ಮಾಹಿತಿಯನ್ನು ಇ–ಫಾರ್ಮಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು