ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಗೆಲುವಿನ ತೂಗುಯ್ಯಾಲೆ!

Last Updated 11 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಭೋಪಾಲ್‌: ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ತೂಗುಯ್ಯಾಲೆ ಕೊನೆಯ ಕ್ಷಣದವರೆಗೂ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು.

ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ತುರುಸಿನ ಪೈಪೋಟಿಗೆ ಮಧ್ಯ ಪ್ರದೇಶ ಮತ ಎಣಿಕೆ ಸಾಕ್ಷಿಯಾಯಿತು.

ಮಂಗಳವಾರ ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. ವಿಜಯಮಾಲೆ ಒಮ್ಮೆ ಬಿಜೆಪಿಯತ್ತ ವಾಲಿದರೆ, ಮರುಕ್ಷಣದಲ್ಲಿ ಕಾಂಗ್ರೆಸ್‌ ನತ್ತ ವಾಲುತ್ತಿತ್ತು. ಯಾರು ಗೆಲ್ಲಬಹುದು ಎಂದು ಊಹಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಕ್ಷಣ, ಕ್ಷಣಕ್ಕೂ ಬದಲಾಗುತ್ತಿದ್ದ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಪತ್ರಿಕೆ ಮುದ್ರಣಕ್ಕೆ ಹೋಗುವ ಕ್ಷಣದವರೆಗೂ ದೊರೆಯಲಿಲ್ಲ. ಎರಡೂ ಪಕ್ಷಗಳ ನಡುವೆ ಕೂದಲೆಳೆಯ ಅಂತರವಿದ್ದ ಕಾರಣ ಗೆಲುವು ಯಾರದ್ದು ಎನ್ನುವುದು ಕೊನೆಯ ಕ್ಷಣದವರೆಗೂ ನಿಗೂಢವಾಗಿತ್ತು.

ಮ್ಯಾಜಿಕ್‌ ನಂಬರ್ ತಲುಪದ ಪಕ್ಷಗಳು:ಮಧ್ಯ ಪ್ರದೇಶದ 230 ವಿಧಾನಸಭಾ ಸ್ಥಾನಗಳ ಪೈಕಿ ಸರಳ ಬಹುಮತ ಪಡೆಯುವ 116 ಮ್ಯಾಜಿಕ್‌ ನಂಬರ್‌ನತ್ತ ಎರಡೂ ಪಕ್ಷಗಳು ದಾಪುಗಾಲು ಹಾಕಿದ್ದವು. ಇನ್ನೇನು ಮ್ಯಾಜಿಕ್‌ ನಂಬರ್‌ ತಲುಪಬೇಕು ಎನ್ನುವಷ್ಟರಲ್ಲಿ ಓಟ ನಿಲ್ಲಿಸಿದವು.

ಈ ಸುದ್ದಿ ಅಚ್ಚಿಗೆ ಹೋಗುವ ವೇಳೆಗೆ ಕಾಂಗ್ರೆಸ್‌ 114 ಮತ್ತು ಬಿಜೆಪಿ 109 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಎರಡು ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಮತ್ತು ಐದು ಸ್ಥಾನಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದರು.

ಯಾರೂ ನಿರೀಕ್ಷಿಸದ ಈ ಅಚ್ಚರಿಯ ಬೆಳವಣಿಗೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಮೂಕ ಪ್ರೇಕ್ಷಕರಾಗಿದ್ದು ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಭೋಪಾಲ್‌ನಲ್ಲಿ ಬಿಡಾರ ಹೂಡಿರುವ ಎರಡೂ ಪಕ್ಷಗಳ ನಾಯಕರು ರಣತಂತ್ರ ರೂಪಿಸುತ್ತಿದ್ದು ತುರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಕೈ ಹಿಡಿದ ವಿಂಧ್ಯ

2013ರಲ್ಲಿ 165ರಷ್ಟಿದ್ದ ಬಿಜೆಪಿಯ ಬಲ 109ಕ್ಕೆ ಕುಸಿದಿದೆ. ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ ಚೇತರಿಸಿಕೊಂಡಿದೆ. ಕಳೆದ ಬಾರಿ 58 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಈ ಬಾರಿ 114 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ವಿಂಧ್ಯ ಪ್ರದೇಶದಲ್ಲಿ ಹೊರತುಪಡಿಸಿ ರಾಜ್ಯದ ಉಳಿದೆಡೆ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ವಿಂಧ್ಯದಲ್ಲಿ ಕಳೆದ ಬಾರಿ 12 ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 6 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇಲ್ಲಿ ಬಿಜೆಪಿ ಬಲ 16ರಿಂದ 22ಕ್ಕೆ ಏರಿದೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಪುಟದ ಶಾಸಕರು ಮತ್ತು 12ಕ್ಕೂ ಹೆಚ್ಚು ಸಚಿವರು ಸೋಲುಂಡಿದ್ದಾರೆ. ಚಂಬಲ್‌, ಬುಂದೇಲಖಂಡ್‌ ಮತ್ತು ಮಾಳ್ವಾದಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಬಿದ್ದಿದೆ.

ಬಿಜೆಪಿ ಭದ್ರಕೋಟೆಗಳಾಗಿದ್ದ ಭೋಪಾಲ್‌, ಜಬಲಪುರ್‌, ಇಂದೋರ್‌, ಗ್ವಾಲಿಯರ್‌ನಂತಹ ದೊಡ್ಡ ನಗರಗಳಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ಮಧ್ಯ ಪ್ರದೇಶದಲ್ಲಿ ಈ ಬಾರಿ ನಗರ ಮತ್ತು ಗ್ರಾಮೀಣ ಭಾಗಗಳ ಮತದಾರ ಕಾಂಗ್ರೆಸ್‌ ಕೈ ಹಿಡಿದಿರುವುದು ಅಚ್ಚರಿಯಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT