ಸೋಮವಾರ, ನವೆಂಬರ್ 18, 2019
28 °C

ರಾಷ್ಟ್ರೀಯತೆ–ಸ್ಥಳೀಯ ಸಮಸ್ಯೆಗಳ ಹಣಾಹಣಿ

Published:
Updated:

ವಿಶೇಷಾಧಿಕಾರ ಮರಳಿಸುವ ಧೈರ್ಯವಿದೆಯೇ: ಮೋದಿ

ಜಲಗಾಂವ್‌ (ಪಿಟಿಐ): ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸವಾಲೆಸೆದಿದ್ದಾರೆ. ‘ಧೈರ್ಯವಿದ್ದರೆ, 370ನೇ ವಿಧಿಯ ಅಡಿಯಲ್ಲಿನ ವಿಶೇಷಾಧಿಕಾರ ಪುನಃ ಜಾರಿಗೊಳಿಸುವುದಾಗಿ ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ’ ಎಂದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಆಯೋಜಿಸಿದ್ದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಕಾಶ್ಮೀರವು ತುಂಡು ಭೂಮಿಯಲ್ಲ, ಅದು ಭಾರತದ ಕಿರೀಟ. ಇನ್ನು ನಾಲ್ಕು ತಿಂಗಳೊಳಗೆ ಅಲ್ಲಿಯ ಜನಜೀವನ ಸಹಜ ಸ್ಥಿತಿಗೆ ಬರಲಿದೆ’ ಎಂದರು.

ವಿಶೇಷಾಧಿಕಾರ ರದ್ದತಿಯ ವಿಚಾರವನ್ನು ವಿರೋಧಪಕ್ಷದವರು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ ಮೋದಿ, ‘ಕಾಂಗ್ರೆಸ್‌, ಎನ್‌ಸಿಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ಅಚ್ಚರಿ ಮೂಡಿಸುತ್ತವೆ. ಜಮ್ಮು ಕಾಶ್ಮೀರದ ಬಗ್ಗೆ ಭಾರತದ ಪ್ರಜೆಗಳು ತಾಳಿರುವ ಭಾವನೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಇವರು ನೆರೆ ರಾಷ್ಟ್ರದ ನಾಯಕರ ಧಾಟಿಯಲ್ಲಿಯೇ ಮಾತನಾಡುತ್ತಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಧೈರ್ಯವಿದ್ದರೆ ‘ನಾವು ಅಧಿಕಾರಕ್ಕೆ ಬಂದರೆ 370ನೇ ವಿಧಿಯನ್ನು ಪುನಃ ಜಾರಿಮಾಡುತ್ತೇವೆ’ ಎಂದು ಘೋಷಿಸಲಿ. ವಿರೋಧಪಕ್ಷದವರು ಒಂದುವೇಳೆ ಅಂಥ ಧೈರ್ಯ ಮಾಡಿದರೆ ಅವರಿಗೆ ಭವಿಷ್ಯವೇ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ದಣಿದ ಮಿತ್ರರು ಪರಸ್ಪರರಿಗೆ ನೆರವಾಗಬಲ್ಲರೇ ವಿನಾ ಜನರ ಕನಸುಗಳನ್ನು ನನಸಾಗಿಸಲು ನೆರವಾಗಲಾರರು’ ಎಂದು ಎನ್‌ಸಿಪಿ– ಕಾಂಗ್ರೆಸ್‌ ನಾಯಕರ ಹೆಸರನ್ನು ಉಲ್ಲೇಖಿಸದೆಯೇ ಮೋದಿ ಟೀಕಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಅವರು ಇತ್ತೀಚೆಗಷ್ಟೇ ‘ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು ದಣಿದಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು.

ದೇವೇಂದ್ರ ಫಡಣವೀಸ್‌ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ ಮೋದಿ, ‘ಈ ಸರ್ಕಾರವು ರಾಜ್ಯದಲ್ಲಿ ಕೋಮು ಸೌಹಾರ್ದ ಕಾಪಾಡುವುದರ ಜೊತೆಗೆ ರೈತರು ಹಾಗೂ ಉದ್ಯಮಿಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

ಸಮಸ್ಯೆ ಮರೆಮಾಚುತ್ತಿರುವ ಮೋದಿ: ರಾಹುಲ್‌

ಲಾತೂರ್ (ಮಹಾರಾಷ್ಟ್ರ): ‘ದೇಶದ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬೇರೆ–ಬೇರೆ ಮಾತುಗಳನ್ನಾಡುತ್ತಾರೆ. ಮಾಧ್ಯಮಗಳೂ ನಿಜವನ್ನು ಮರೆಮಾಚುತ್ತಿವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಡಿಮೆ ಸ್ಥಾನ ಗಳಿಸಿದ್ದರ ಹೊಣೆ ಹೊತ್ತು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದೇ ಮೊದಲ ಬಾರಿ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಂಗವಾಗಿ ರಾಜ್ಯದ ಲಾತೂರ್‌ ಮತ್ತು ಮುಂಬೈನಲ್ಲಿ ಆಯೋಜಿಸಲಾಗಿದ್ದ ಮೂರು ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದ್ದಾರೆ. ಮಾತಿನುದ್ದಕ್ಕೂ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

‘ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಇದೆಯೇ? ರೈತರ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆಯೇ? ಮಹಾರಾಷ್ಟ್ರದ ರೈತರ ಸಾಲಮನ್ನಾ ಆಗಿದೆಯೇ? ಒಳ್ಳೆಯ ದಿನಗಳು ಬಂದಿವೆಯೇ?’ ಎಂದು ಲಾತೂರ್‌ನಲ್ಲಿ ರಾಹುಲ್ ಗಾಂಧಿ ಮಾತು ಆರಂಭಿಸಿದರು.

‘ಏನು ಕೆಲಸ ಮಾಡುತ್ತಿದ್ದೀಯಾ ಎಂದು ಯುವಕರನ್ನು ಕೇಳಿ. ಏನೂ ಇಲ್ಲ ಎಂಬ ಉತ್ತರ ಬರುತ್ತದೆ. ಪರಿಸ್ಥಿತಿ ಹೇಗಿದೆ ಎಂದು ರೈತರನ್ನು ಕೇಳಿ. ಮೋದಿ ಎಲ್ಲಾ ಹಾಳುಮಾಡಿದ್ದಾರೆ ಎಂಬ ಉತ್ತರ ಬರುತ್ತದೆ’ ಎಂದು ರಾಹುಲ್ ಟೀಕಿಸಿದರು.

‘ನೋಟು ರದ್ದತಿಯ ಮೂಲಕ ಬಡಜನರ ಜೇಬಿನಲ್ಲಿದ್ದ ಹಣವನ್ನು ಕಸಿದುಕೊಂಡು, ದೇಶದ 15–20 ಶ್ರೀಮಂತರ ಜೇಬಿಗೆ ತುಂಬಿದರು. ಈ ಸರ್ಕಾರ ಬಂದಾಗಿನಿಂದ ದೇಶದ 15–20 ಶ್ರೀಮಂತರ ₹ 5.5 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಅಂಬಾನಿ, ಅದಾನಿ ಅವರ ಸಾಲ ಮನ್ನಾ ಆಗಿದೆ. ಇದೇ ನೋಟು ರದ್ದತಿಯ ಹಿಂದಿನ ಉದ್ದೇಶ’ ಎಂದು ರಾಹುಲ್ ಆರೋಪಿಸಿದರು.

‘ಆದರೆ ಮೋದಿ ಅವರು ಬಂದು, ದೇಶದಲ್ಲಿ ಭ್ರಷ್ಟಾಚಾರವಿದೆ. ಇದನ್ನು ಹೋಗಲಾಡಿಸಲು ನೋಟುರದ್ದತಿ ಮಾಡಬೇಕು ಎಂದಿದ್ದರು. ಅಣ್ಣತಮ್ಮಂದಿರೇ, ನೋಟು ರದ್ದತಿಯ ನಂತರ ಕಪ್ಪುಹಣವೇನಾದರೂ ಕಡಿಮೆ ಆಗಿದೆಯೇ’ ಎಂದು ರಾಹುಲ್ ಪ್ರಶ್ನಿಸಿದರು.

‘ರಾಕೆಟ್‌ನಿಂದ ಹೊಟ್ಟೆ ತುಂಬದು’

‘ದೇಶದಲ್ಲಿ 40 ವರ್ಷಗಳ ಹಿಂದೆ ಇದ್ದ ಪ್ರಮಾಣದಷ್ಟು ನಿರುದ್ಯೋಗ ಈಗ ಮತ್ತೆ ತಲೆದೋರಿದೆ. ಇಲ್ಲೇ 2,000 ಕಾರ್ಖಾನೆಗಳು ಬಾಗಿಲು ಹಾಕಿವೆ. ದೇಶದ ಆಟೊಮೊಬೈಲ್ ಉದ್ಯಮವು ನೆಲಕಚ್ಚಿದೆ. ಆದರೆ ಈ ಸಮಸ್ಯೆಗಳನ್ನು ಮರೆಮಾಚಲು ಮೋದಿ ಅವರು ಕಾಶ್ಮೀರದ ವಿಚಾರ ಮಾತನಾಡುತ್ತಾರೆ, 370ನೇ ವಿಧಿ ಬಗ್ಗೆ ಮಾತನಾಡುತ್ತಾರೆ, ಚಂದ್ರನ ಬಗ್ಗೆ ಮಾತನಾಡುತ್ತಾರೆ’ ಎಂದು ರಾಹುಲ್ ಲೇವಡಿ ಮಾಡಿದರು.

‘ಮೋದಿ ಅವರೇ, ಚಂದ್ರನಲ್ಲಿಗೆ ರಾಕೆಟ್‌ ಕಳುಹಿಸಿದರೆ, ನಿರುದ್ಯೋಗಿ ಯುವಕರ ಹೊಟ್ಟೆ ತುಂಬುತ್ತದೆ ಅಂದುಕೊಂಡಿದ್ದೀರಾ’ ಎಂದು ರಾಹುಲ್ ಪ್ರಶ್ನಿಸಿದರು.

‘ಮೋದಿ ಅವರು ಭಾರತದಲ್ಲೇ ತಯಾರಿಸಿ ಎಂದರು. ಆದರೆ ಇಂದು ಹಿಂದುಸ್ಥಾನದಲ್ಲಿ ಮಾರಾಟವಾಗುವ ಬಹುತೇಕ ಎಲ್ಲಾ ವಸ್ತುಗಳ ಮೇಲೆ ‘ಮೇಡ್‌ ಇನ್ ಚೀನಾ’ ಎಂದು ಅಚ್ಚಾಗಿರುತ್ತದೆ. ಭಾರತದಲ್ಲಿ ತಯಾರಿಸಿ ಎಂಬುದು ಏನಾಯಿತು ಎಂದು ಕೇಳಿದರೆ, ‘ಎಲ್ಲವೂ ಖತಂ ಎಂಬುದೇ ಉತ್ತರ’ ಎಂದು ರಾಹುಲ್ ಲೇವಡಿ ಮಾಡಿದರು.

***

ಹಲವು ಪ್ರಧಾನಿಗಳು ಬಂದು ಹೋಗಿದ್ದಾರೆ. 370ನೇ ವಿಧಿ ರದ್ದತಿಯ ಧೈರ್ಯ ಯಾರೂ ತೋರಲಿಲ್ಲ. ಆದರೆ, 56 ಇಂಚಿನ ಎದೆಯ ವ್ಯಕ್ತಿ ಒಂದೇ ಏಟಿಗೆ ಅದನ್ನು ರದ್ದು ಮಾಡಿದರು

–ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

***

ಕಾಂಗ್ರೆಸ್‌ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ನಾವು ದೇಶ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದೇವೆ. ಬಿಜೆಪಿ ಏನು ಮಾಡಿದೆ ಎಂಬುದನ್ನು ಅವರು ಹೇಳಬೇಕು

–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡ

***

ಹಲವು ‌ಸಮಸ್ಯೆಗಳನ್ನು ಮಹಾರಾಷ್ಟ್ರ ಎದುರಿಸುತ್ತಿದೆ. ಆದರೆ, ರಾಜ್ಯಕ್ಕೆ ಸಂಬಂಧವೇ ಇಲ್ಲದ ವಿಚಾರಗಳನ್ನು ಎತ್ತುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ನಡೆಯುತ್ತಿದೆ.

–ರಾಜ್‌ ಠಾಕ್ರೆ, ಎಂಎನ್‌ಎಸ್‌ ಮುಖ್ಯಸ್ಥ

***

ರಫೇಲ್‌ ಒಪ್ಪಂದದಲ್ಲಿ ಅಕ್ರಮ ಎಸಗಿದ್ದೇವೆ ಎಂಬುದು ಬಿಜೆಪಿ ಸರ್ಕಾಕ್ಕೆ ಕಾಡುತ್ತಿರಬೇಕು. ಹೀಗಾಗಿಯೇ ಮೊದಲ ಯುದ್ಧವಿಮಾನ ಪಡೆಯಲು ರಕ್ಷಣಾ ಸಚಿವರು ಫ್ರಾನ್ಸ್‌ಗೆ ಹೋಗಿದ್ದು‌

–ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ

***

ಪಕ್ಷದ ನಾಯಕರ ಭಾರಿ ಮನವೊಲಿಕೆ ಬಳಿಕ ರಾಹುಲ್‌ ಗಾಂಧಿ ಅವರು ಪ್ರಚಾರಕ್ಕೆ ಬಂದಿದ್ದಾರೆ. ಆದರೆ, ಅವರು ಎಲ್ಲೆಲ್ಲಿ ಪ್ರಚಾರ ಮಾಡಿ ದ್ದಾರೋ ಅಲ್ಲೆಲ್ಲ ಅವರ ಪಕ್ಷ ಸೋತಿದೆ

–ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

***

ಅಂಬೇಡ್ಕರ್‌ ವಿರೋಧವಿದ್ದರೂ ಕಾಂಗ್ರೆಸ್‌ ಪಕ್ಷವು ಸಂವಿಧಾನಕ್ಕೆ 370ನೇ ವಿಧಿ ಸೇರಿಸಿತು. ಅದರ ರದ್ದತಿಯು ಅಂಬೇಡ್ಕರ್‌ ಮತ್ತು ಶಿವಾಜಿಗೆ ಸಲ್ಲಿಸಿದ ಗೌರವ

–ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)