ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟು ಬಿಡದ ಬಿಜೆಪಿ–ಸೇನಾ: ಈ ಪಕ್ಷಗಳ ಸಖ್ಯವೇ ಪರ್ಯಾಯಕ್ಕೂ ಅಡ್ಡಿ?

Last Updated 5 ನವೆಂಬರ್ 2019, 20:01 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿ ಜತೆಗಿನ ಸಖ್ಯ ಕಡಿದುಕೊಂಡಿರುವುದಾಗಿ ಶಿವಸೇನಾ ಘೋಷಿಸಿದರೆ ಮಹಾರಾಷ್ಟ್ರದಲ್ಲಿ ರಾಜಕೀಯ ಪರ್ಯಾಯದ ಬಗ್ಗೆ ಯೋಚಿಸಬಹುದು ಎಂದು ಎನ್‌ಸಿಪಿ ಮಂಗಳವಾರ ಹೇಳಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಸೇನಾ ಪ್ರತಿನಿಧಿಯಾಗಿ ಇರುವ ಅರವಿಂದ ಸಾವಂತ್‌ ಅವರೂ ರಾಜೀನಾಮೆ ನೀಡಬೇಕು ಎಂಬುದು ಎನ್‌ಸಿಪಿಯ ಬೇಡಿಕೆ ಎಂದು ಮೂಲಗಳು ಹೇಳಿವೆ.

ವಿಧಾನಸಭೆಯ ಚುನಾವಣೆಯ ಫಲಿತಾಂಶ ಅ.24ರಂದು ಪ್ರಕಟವಾಗಿದೆ. ಬಿಜೆಪಿ–ಸೇನಾ ಮೈತ್ರಿಕೂಟಕ್ಕೆ ಸರಳ ಬಹುಮತವೂ ಇದೆ. ಆದರೆ, ಅಧಿಕಾರ ಹಂಚಿಕೆಯಲ್ಲಿನ ಭಿನ್ನಮತದಿಂದಾಗಿ ಸರ್ಕಾರ ರಚನೆ ಸಾಧ್ಯವಾಗಿಲ್ಲ. ಹಾಗಾಗಿ, ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಮುಖ್ಯಮಂತ್ರಿ ಹುದ್ದೆಯನ್ನು ಸೇನಾಕ್ಕೆ ಬಿಜೆಪಿ ನೀಡದಿದ್ದರೆ ಬೇರೆ ಆಯ್ಕೆಗಳು ಇವೆ. ಬಿಜೆಪಿ ಮತ್ತು ಎನ್‌ಡಿಎ ಜತೆಗೆ ಯಾವ ಸಂಬಂಧವೂ ಇಲ್ಲ ಎಂಬುದನ್ನು ಸೇನಾ ಘೋಷಿಸಬೇಕು’ ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಹೇಳಿದ್ದಾರೆ.

ಪಕ್ಷಾಂತರಕ್ಕೆ ಎಚ್ಚರಿಕೆ: ಸೇನಾ ಶಾಸಕರನ್ನು ಪಕ್ಷಾಂತರ ಮಾಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದರೆ ಚೆನ್ನಾಗಿರುವುದಿಲ್ಲ ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್‌ ಹೇಳಿದ್ದಾರೆ.

‘ಪಕ್ಷಾಂತರದ ಆಟಕ್ಕೆ ಬಿಜೆಪಿ ಮುಂದಾದರೆ ಚೆನ್ನಾಗಿರುವುದಿಲ್ಲ. ಚುನಾವಣೆಗೆ ಮುನ್ನ ಬಿಜೆಪಿಗೆ ಹೋದವರು ಮಾತೃಪಕ್ಷಕ್ಕೆ ಮರಳಲು ಸಿದ್ಧರಿದ್ದಾರೆ. ಕೆಲವರು ಈಗಾಗಲೇ ಸಂಪರ್ಕದಲ್ಲಿಯೂ ಇದ್ದಾರೆ. ಪಕ್ಷಾಂತರ ಶುರುವಾದರೆ ಬಿಜೆಪಿಯಲ್ಲಿ 25–30 ಶಾಸಕರಷ್ಟೇ ಉಳಿಯಬಹುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪಟ್ಟು ಬಿಡದ ಬಿಜೆಪಿ–ಸೇನಾ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತ ಹೊಂದಿರುವ ಬಿಜೆಪಿ–ಶಿವಸೇನಾ, ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ಪಟ್ಟನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ಬಿಜೆಪಿ–ಸೇನಾ ಸರ್ಕಾರ ಶೀಘ್ರ ರಚನೆಯಾಗಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ.

ಶಿವಸೇನಾ ತನ್ನ ಬೇಡಿಕೆಯನ್ನು ಮಂಗಳವಾರವೂ ಪುನರುಚ್ಚರಿಸಿದೆ. ‘ಮುಖ್ಯಮಂತ್ರಿಯಾಗಿ ಸೇನಾದವರೇ ಇರಲಿದ್ದಾರೆ. ಇದು ಖಚಿತ. ಪ್ರಮಾಣವಚನ ಸ್ವೀಕಾರ ಯಾರೊಬ್ಬರ ಏಕಸ್ವಾಮ್ಯ ಅಲ್ಲ’ ಎಂದು ಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಆಪ್ತ ಸಂಜಯ ರಾವುತ್‌ ಹೇಳಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ?

ಸರ್ಕಾರ ರಚನೆ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ಮಹಾರಾಷ್ಟ್ರವು ಅಲ್ಪಕಾಲ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಬಹುದು ಎಂದು ಅಲ್ಲಿನ ರಾಜಕೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಇದೇ 9ರಂದು ಈಗಿನ ಸರ್ಕಾರದ ಅವಧಿ ಪೂರ್ಣಗೊಳ್ಳಲಿದೆ. ಅದಕ್ಕೆ ಮೊದಲು ಹೊಸ ಸರ್ಕಾರ ರಚನೆ ಆಗದೇ ಇದ್ದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದಲ್ಲದೆ ಬೇರೆ ಆಯ್ಕೆ ರಾಜ್ಯಪಾಲರಿಗೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT