ಕುಂಭಮೇಳ: 1 ಕೋಟಿ ಮಂದಿಯಿಂದ ಪವಿತ್ರ ಸ್ನಾನ

ಶನಿವಾರ, ಮಾರ್ಚ್ 23, 2019
21 °C

ಕುಂಭಮೇಳ: 1 ಕೋಟಿ ಮಂದಿಯಿಂದ ಪವಿತ್ರ ಸ್ನಾನ

Published:
Updated:
Prajavani

ಅಲಹಾಬಾದ್‌: ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿ ದಿನವಾದ ಸೋಮವಾರ (ಮಾರ್ಚ್‌ 4) ನಡೆದಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರದಲ್ಲಿ 1ಕೋಟಿ ಮಂದಿ ಮಿಂದೆದ್ದರು.

ಕೊನೆಯ ಸ್ನಾನದ  ಮೂಲಕ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ ಬಿತ್ತು.

‘ಮಕರಸಂಕ್ರಾಂತಿಯಿಂದ (ಜನವರಿ 15) ಆರಂಭವಾದ ಕುಂಭಮೇಳದಲ್ಲಿ ಈವರೆಗೆ 22 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದರು. ಕೊನೆಯ ದಿನದಂದು 1.10 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ’ ಎಂದು ಕುಂಭಮೇಳದ ಅಧಿಕಾರಿ ವಿಜಯ್‌ ಕಿರಣ್‌ ಆನಂದ್‌ ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಭಾನುವಾರ ಮಧ್ಯರಾತ್ರಿಯ ಹೊತ್ತಿಗೆ ಅಪಾರ ಸಂಖ್ಯೆಯಲ್ಲಿ ಬಂದ ಯಾತ್ರಾರ್ಥಿಗಳು, ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಎಲ್ಲ ಸ್ನಾನ ಘಟ್ಟಗಳು ಭಕ್ತರಿಂದ ತುಂಬಿತುಳುಕಿದವು. ಸಣ್ಣ ಪ್ರಮಾಣದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೇ ಭಕ್ತರು ಪವಿತ್ರ ಸ್ನಾನ ಮಾಡಿದರು. ‘ಹರ ಹರ ಮಹಾದೇವ’ ಘೋಷಣೆಗಳು ಮುಗಿಲು ಮುಟ್ಟಿದ್ದವು. 

ಮಹಾಶಿವರಾತ್ರಿಯು ಶಿವನ ಭಕ್ತರಿಗೆ ಅತ್ಯಂತ ಮಹತ್ವದ ದಿನ. ಅದು ಸಹ ಶಿವನ ಸ್ಮರಣೆಯ ದಿನ ಎಂದೇ ಹೇಳಲಾಗುವ ಸೋಮವಾರವೇ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಶಿವಲಿಂಗಕ್ಕೆ ರುದ್ರಾಭಿಷೇಕ ಸಹ ನಡೆಯಿತು. 

ಈಗಾಗಲೇ ಕುಂಭಮೇಳದಲ್ಲಿ ಮಕರ ಸಂಕ್ರಾಂತಿ (ಜ. 15), ಮೌನಿ ಅಮವಾಸ್ಯೆ (ಫೆಬ್ರುವರಿ 4), ವಸಂತ ಪಂಚಮಿ (ಫೆಬ್ರುವರಿ 10), ಪೌಶ್‌ ಪೂರ್ಣಿಮೆ (ಜ. 21) ಹಾಗೂ ಮಘಿ ಪೂರ್ಣಿಮೆ (ಫೆ. 19) ದಿನದಂದು ನಡೆದ ಪವಿತ್ರ ಸ್ನಾನದಲ್ಲಿ ಕೋಟ್ಯಂತರ ಭಕ್ತರು ಪಾಲ್ಗೊಂಡಿದ್ದರು. 

ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆಯಿದ್ದ ಕಾರಣ, ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಯಾವುದೇ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !