ಗುರುವಾರ , ಜನವರಿ 23, 2020
23 °C
ಸಂಕ್ರಾಂತಿ

ಸಂಕ್ರಾಂತಿಗೆ ಗಮನ ಸೆಳೆವ ಕಲ್ಲುಗಂಬ

ಅಖಿಲ್‌ ಕಡಿದಾಳ್‌ Updated:

ಅಕ್ಷರ ಗಾತ್ರ : | |

ಚಳಿಗಾಲ ಮುಗಿದು ಬೇಸಿಗೆಗೆ ಮುನ್ನುಡಿ ಬರೆಯುವ ಮಹತ್ವದ ಕಾಲ ಮಕರ ಸಂಕ್ರಾಂತಿ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ) ರಂದು ಉತ್ತರಾಯಣ ಸಂಕ್ರಾಂತಿ ಅಥವಾ ಮಕರ ಸಂಕ್ರಾಂತಿ ಆರಂಭವಾಗುತ್ತದೆ.  

ಕೆಂಪೇಗೌಡ ನಗರದಲ್ಲಿರುವ (ಗವಿಪುರಂ ಗುಟ್ಟಳ್ಳಿ) 17ನೇ ಶತಮಾನದ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿರುವ ಎರಡು ವಿಶಿಷ್ಟ ಕಲ್ಲುಗಂಬಗಳು ಸಂಕ್ರಾಂತಿಯ ಹೊತ್ತಿಗೆ ಗಮನ ಸೆಳೆಯುತ್ತವೆ. ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ಎರಡು ಕಂಬಗಳಗಳು ಎರಡು ಸಂಕ್ರಾಂತಿಯ ಸಂಕೇತಗಳಾಗಿವೆ.

ನಮ್ಮಲ್ಲಿ ಎರಡು ಸಂಕ್ರಾಂತಿಗಳಿಗೆ ಮಹತ್ವವಿದೆ. ಸಾಮಾನ್ಯವಾಗಿ ಎಲ್ಲರಿಗೂ ಮಕರ ಸಂಕ್ರಮಣ ಅಥವಾ ಉತ್ತರಾಯಣ ಸಂಕ್ರಮಣ ಬಗ್ಗೆ ತಿಳಿದಿರುತ್ತದೆ. ಮತ್ತೊಂದು ದಕ್ಷಿಣಾಯನ ಸಂಕ್ರಮಣ ಅಥವಾ ಕರ್ಕಾಟಕ ಸಂಕ್ರಮಣ. ಎರಡಕ್ಕೂ ಸಮಾನ ಮಹತ್ವವಿದೆ.  

ನೆತ್ತಿಯಲ್ಲಿ ಚಪ್ಪಟೆಯಾಕಾರದ ಕಲ್ಲಿನ ಚಕ್ರಗಳಿರುವ ಕಲ್ಲುಗಂಬಗಳನ್ನು ಪುರಾತನ ಕಾಲದ ಜನರು ಮಹತ್ವದ ಋತುಮಾನಗಳನ್ನು ಗುರುತಿಸುವ ಸಾಧನಗಳಂತೆ ಬಳಸುತ್ತಿದ್ದರು. ಸೂರ್ಯಪಾನ ಮತ್ತು ಚಂದ್ರಪಾನ ಎಂದು ಕರೆಯಲಾಗುವ ಚಪ್ಪಟೆ ವರ್ತುಲ ಆಕಾರದ ಎರಡು ಕಲ್ಲಿನ ಚಕ್ರಗಳ ಸುತ್ತಳತೆ ಸುಮಾರು ಎರಡು ಮೀಟರ್‌. ಇವುಗಳ ಅಕ್ಕಪಕ್ಕದಲ್ಲಿ ಡಮರು ಮತ್ತು ತ್ರಿಶೂಲ ಸ್ಥಂಬಗಳಿವೆ.


ಬಸವನಗುಡಿಯ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನ

ಸಂಕ್ರಮಣಗಳಿಗೆ ಅನುಗುಣವಾಗಿ ಒಂದು ಚಕ್ರದ ಛಾಯೆ ಮತ್ತೊಂದರ ಮೇಲೆ ಆವರಿಸುವಂತೆ ಈ ಎರಡು ಕಂಬಗಳನ್ನು ನಿರ್ಮಿಸಲಾಗಿದೆ. ಕಾಲಾನುಕ್ರಮದಲ್ಲಿ ದೇವಸ್ಥಾನ ಕಟ್ಟಡದ ವಿನ್ಯಾಸದಲ್ಲಿ ಆದ ಬದಲಾವಣೆಯಿಂದಾಗಿ ಡಿಸೆಂಬರ್‌ 22ರಂದು ಸಂಭವಿಸುವ ಉತ್ತರಾಯಣ ಸಂಕ್ರಮಣದ ವಾಸ್ತವ ದಿನವನ್ನು ಜನವರಿ 14ರ ಮಕರ ಸಂಕ್ರಾಂತಿಗೆ ಮಾರ್ಪಾಡು ಮಾಡಲಾಗಿದೆ.

ಕಲ್ಲುಗಂಬಗಳ ಹಿಂದಿನ ಕರಾರುವಾಕ್ಕಾದ ವೈಜ್ಞಾನಿಕ ಸತ್ಯಗಳು ನಿಜಕ್ಕೂ ವಿಸ್ಮಯ ಮೂಡಿಸುತ್ತವೆ. ಈ ಎರಡು ಕಂಬಗಳು ನಮ್ಮ ಪುರಾತನ ಜನರಿಗಿದ್ದ ಭೌಗೋಳಿಕ ಮತ್ತು ನಭೋಮಂಡಲದ ಜ್ಞಾನದ ಪ್ರತೀಕಗಳಾಗಿವೆ. ವಿಪರ್ಯಾಸ ಎಂದರೆ ನಂತರದ ವರ್ಷಗಳಲ್ಲಿ ವೈಜ್ಞಾನಿಕ ಸತ್ಯಗಳನ್ನು ಮರೆಮಾಚಲಾಗಿದೆ ಎನ್ನುತ್ತಾರೆ ಜವಾಹರಲಾಲ್‌ ನೆಹರೂ ತಾರಾಲಯದ ಡಾ. ಬಿ.ಎಸ್‌. ಶೈಲಜಾ.      

ಇದೊಂದು ಗುಹಾಂತರ ಶಿವನ ದೇವಾಲಯವಾಗಿದ್ದು, ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ನಂದಿ ವಿಗ್ರಹದ ಕೊಂಬಿನಿಂದ ಹಾಯ್ದು 15 ನಿಮಿಷ ಈಶ್ವರ ಲಿಂಗವನ್ನು ಚುಂಬಿಸುತ್ತವೆ. ಕಾಲಾನುಕ್ರಮದಲ್ಲಿ ಧಾರ್ಮಿಕ ಆಚರಣೆಗಳು ಥಳಕು ಹಾಕಿಕೊಂಡ ಕಾರಣ ವೈಜ್ಞಾನಿಕ ಸತ್ಯಗಳು ನೇಪಥ್ಯಕ್ಕೆ ಸರಿದವು. ಮಕರ ಸಂಕ್ರಾಂತಿಗೆ ಸಿಕ್ಕಷ್ಟು ಪ್ರಚಾರ ಜೂನ್‌ 21ರ ದಕ್ಷಿಣಾಯನ ಅಥವಾ ಕರ್ಕಾಟಕ ಸಂಕ್ರಮಣಕ್ಕೆ ಸಿಗಲಿಲ್ಲ ಎನ್ನುತ್ತಾರೆ.

ನಗರೀಕರಣದಿಂದಾಗಿ ದೇವಸ್ಥಾನದ ಸುತ್ತಮುತ್ತ ನೂರಾರು ಕಟ್ಟಡಗಳು ತೆಲೆಎತ್ತಿವೆ. ಇದರಿಂದ ದೇವಸ್ಥಾನದ ಮೂಲ ಸ್ವರೂಪ ಬದಲಾಗಿದೆ.18–19 ನೇ ಶತಮಾನದಲ್ಲಿ ಬ್ರಿಟಿಷ್‌ ಕಲಾವಿದರಾದ ಥಾಮಸ್‌ ಡೇನಿಯಲ್ಸ್‌ ಹಾಗೂ ಸಹೋದರ ಸಂಬಂಧಿ ವಿಲಿಯಂ ಭಾರತೀಯ ದೇವಸ್ಥಾನಗಳ ವಾಸ್ತುಶಿಲ್ಪ ವಿನ್ಯಾಸದ ಬಗ್ಗೆ ರಚಿಸಿರುವ ಪುಸ್ತಕದಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನದ ಮೂಲ ಸ್ವರೂಪವನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ.

ಭಾರತದ ಉದ್ದಗಲಕ್ಕೂ ಸಂಚರಿಸಿದ್ದ ಈ ಜೋಡಿ ಪ್ರಾಚೀನ ದೇಗುಲಗಳ ವಾಸ್ತು ವಿನ್ಯಾಸಗಳ ಪುಸ್ತಕ ಪ್ರಕಟಿಸಿತ್ತು. 18ನೇ ಶತಮಾನದಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿರುವ ಎರಡು ಚಿತ್ರಗಳು ಗವಿ ಗಂಗಾಧರೇಶ್ವರ ದೇವಸ್ಥಾನದ ಮೂಲ ಸ್ವರೂಪ ಮತ್ತು ವಾಸ್ತವ ಚಿತ್ರಣ ಕಟ್ಟಿಕೊಡುತ್ತವೆ. 

1792ರ ಮೇ ರಂದು ಬೆಂಗಳೂರಿನ ಹೊರವಲಯದಲ್ಲಿದ್ದ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕಲಾವಿದ ಡೇನಿಯಲ್ಸ್‌ ದೇಗುಲದ ಆವರಣದಲ್ಲಿ ವೈಜ್ಞಾನಿಕ ವಿಸ್ಮಯಗಳಿಗೆ ಸಾಕ್ಷಿಯಾಗಿ ನಿಂತಿದ್ದ ಕಲ್ಲುಗಂಬಗಳನ್ನು ಕಂಡು ಮೂಕವಿಸ್ಮಿತನಾಗಿದ್ದ. ಹಲವಾರು ತಿಂಗಳು ಸಂಬಂಧಿಯೊಂದಿಗೆ ಅಲ್ಲಿಯೇ ನಲೆನಿಂತು ಚಿತ್ರಿಸಿರುವ ಕಲಾಕೃತಿ ಹಲವಾರು ವಾಸ್ತವ ಕತೆಗಳನ್ನು ನಮ್ಮೆದುರಿಗೆ ತೆರೆದಿಡುತ್ತವೆ. ಶತಮಾನಗಳ ಇತಿಹಾಸವಿರುವ ಕಲ್ಲುಗಂಬಗಳೇ ಮುಖ್ಯ ಭೂಮಿಕೆಯಲ್ಲಿರುವ ಚಿತ್ರಗಳು ವಾಸ್ತವವನ್ನು ಪತ್ತೆ ಹಚ್ಚಲು ವಿಜ್ಞಾನಿಗಳಿಗೆ ನೆರವಾಗಿವೆ.

ಸೂರ್ಯನ ಕಿರಣಗಳು ಗುಹಾಂತರ ದೇವಾಲಯದೊಳಗಿನ ಈಶ್ವರ ಲಿಂಗವನ್ನು ಸ್ಪರ್ಶಿಸುವ ವೈಜ್ಞಾನಿಕ ಸತ್ಯ ಅರಿಯಲು ಡೇನಿಯಲ್ಸ್‌ ಚಿತ್ರಗಳು ಮಹತ್ವದ ಪಾತ್ರ ವಹಿಸಿವೆ. ಮಕರ ಸಂಕ್ರಮಣದ ಸೂರ್ಯಕಿರಣಗಳು ಡಿಸೆಂಬರ್‌ 22ರಂದು ದೇಗುಲವನ್ನು ಪ್ರವೇಶಿಸುವಂತೆ ಕಲ್ಲುಗಂಬ ನಿರ್ಮಾಣ ಮಾಡಲಾಗಿದೆ. ಆದರೆ, ಕಾಲಾನುಕ್ರಮದಲ್ಲಾದ ಬದಲಾವಣೆ, ದೇವಸ್ಥಾನದ ಮರು ವಿನ್ಯಾಸ ಮತ್ತು ಮಾರ್ಪಾಡುಗಳಿಂದಾಗಿ ಜ.14ರಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುತ್ತಿವೆ ಎನ್ನುವುದು ವಿಜ್ಞಾನಿಗಳ ವಾದ.

ಸೂರ್ಯನ ಕಿರಣಗಳು ಹಾದು ಹೋಗುವ ಕಿಟಕಿಯನ್ನು ನಂತರದ ದಿನಗಳಲ್ಲಿ ದೇವಾಲದಲ್ಲಿ ಅಳವಡಿಸಲಾಗಿದೆ. ದೇಗುಲದ ಒಳ ಆವರಣದಲ್ಲಿರುವ ಚಿಕ್ಕ ಕಿಟಕಿಗಳು ಡೇನಿಯಲ್ಸ್‌ ಕಲಾಕೃತಿಯಲ್ಲಿ ಕಾಣಿಸುವುದಿಲ್ಲ. ದೇವಸ್ಥಾನದ ಹೊರಗಿನ ಕಿಟಕಿಯನ್ನೂ ತೀರಾ ಈಚೆಗೆ ಅಳವಡಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎನ್ನುತ್ತಾರೆ ಡಾ. ಶೈಲಜಾ.    

"ಸೂರ್ಯ ಸಮಭಾಜಕ ವೃತ್ತ ದಾಟುವ ವಿಷವತ್ಸಂಕ್ರಾಂತಿ ಸಂದರ್ಭದಲ್ಲಿ ಮಾರ್ಚ್ 21 ಮತ್ತು ಸೆಪ್ಟೆಂಬರ್‌ 23ರಂದು ಭೂಮಿಯ ಎಲ್ಲ ಕಡೆ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತವೆ. ಸಂಕ್ರಮಣದ ದಿನಗಳಾದ ಡಿಸೆಂಬರ್‌ 22 ಮತ್ತು ಜೂನ್‌ 21ರಂದು ಕ್ರಮವಾಗಿ ದೀರ್ಘ ರಾತ್ರಿ ಮತ್ತು ಕಿರಿದಾದ ರಾತ್ರಿಗಳಿರುತ್ತವೆ" 

-ಡಾ. ಕ್ರಿಸ್ಪಿನ್‌ ಕಾರ್ತಿಕ್‌, ಭಾರತೀಯ ಖಭೌತ ವಿಜ್ಞಾನ ಸಂಸ್ಥೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು