ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ– ಪ್ರಶಾಂತ್‌ ಕಿಶೋರ್ ಭೇಟಿ

ಟಿಎಂಸಿ ಪರ ಕೆಲಸ ಮಾಡುವ ಸಾಧ್ಯತೆ
Last Updated 7 ಜೂನ್ 2019, 1:22 IST
ಅಕ್ಷರ ಗಾತ್ರ

ಕೋಲ್ಕತ್ತ: ಚುನಾವಣಾ ತಜ್ಞ ಪ್ರಶಾಂತ್‌ ಕಿಶೋರ್‌ (ಪಿಕೆ) ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಪರವಾಗಿ ಅವರು ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ.

ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ಜೊತೆಗೆ ಬಂದು ಮಮತಾ ಅವರನ್ನು ಭೇಟಿಮಾಡಿದ ಪಿಕೆ, ಸುಮಾರು ಎರಡು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ‘ಮಮತಾ ಬಯಸುವುದಾದರೆ ಮುಂದಿನ ದಿನಗಳಲ್ಲಿ ಅವರ ಜೊತೆ ಕೆಲಸ ಮಾಡಲು ಸಿದ್ಧ’ ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರಶಾಂತ್‌ ಅವರ ಸೇವೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ಸದ್ಯದಲ್ಲೇ ಅಧಿಕೃತ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ’ ಎಂದು ಟಿಎಂಸಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ ಪಕ್ಷದಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.

‘ಟಿಎಂಸಿ ಜೊತೆ ಕೆಲಸ ಮಾಡಲು ಕಿಶೋರ್‌ ಒಪ್ಪಿಕೊಂಡರೆ ಅವರಿಗೆ ಮೂರು ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದು. ಮೊದಲನೆಯದು, ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಹಿನ್ನಡೆಯಾಗಲು ಕಾರಣವೇನು ಎಂಬುದನ್ನು ಪತ್ತೆಮಾಡುವುದು, ಎರಡನೆಯದು; ಮುಂದಿನ ವಿಧಾನಸಭಾ ಚುನಾವಣೆಗಾಗಿ ಟಿಎಂಸಿಯ ಕಾರ್ಯಯೋಜನೆಗಳನ್ನು ರೂಪಿಸುವುದು ಮತ್ತು ಮೂರನೆಯದಾಗಿ; ಟಿಎಂಸಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಹಿಡಿಯುವುದು.

ಟಿಎಂಸಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಕಠಿಣ ಸ್ಪರ್ಧೆ ಒಡ್ಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದ ಬಳಿಕ, ‘2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಮ್ಮ ಮುಂದಿನ ಗುರಿಯಾಗಲಿದೆ’ ಎಂಬ ಹೇಳಿಕೆಯನ್ನುಬಿಜೆಪಿ ನಾಯಕರು ನೀಡಿದ್ದರು.

2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಪರವಾಗಿ ಯೋಜನೆ ರೂಪಿಸಿದ್ದ ಪ್ರಶಾಂತ್‌ ಕಿಶೋರ್‌, ಮೋದಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2015ರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪರ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT