ಸೋಮವಾರ, ನವೆಂಬರ್ 18, 2019
25 °C

ದೆಹಲಿ| ಮೃಗಾಲಯದ ಪಂಜರ ಹೊಕ್ಕು ಸಿಂಹಕ್ಕೆ ಮುಖಾಮುಖಿಯಾಗಿ ಕುಳಿತ ಮಾನಸಿಕ ಅಸ್ವಸ್ಥ!

Published:
Updated:

ನವದೆಹಲಿ: ದೆಹಲಿ ಮೃಘಾಲಯದ ಸಿಂಹದ ಪಂಜರದೊಳಗೆ ಹಾರಿದ ವ್ಯಕ್ತಿಯೊಬ್ಬ, ಸಿಂಹದ ಬಳಿಗೆ ಹೋಗಿ ಮುಖಾಮುಖಿಯಾಗಿ ಕುಳಿತು ಆತಂಕ ಮೂಡಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಮೃಗಾಲಯದ ಸಿಬ್ಬಂದಿ ಆತನನ್ನು ಪಂಜರದಿಂದ ಹೊರತಂದಿದ್ದಾರೆ. ಸಂಭವಿಸಬಹುದಾದ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 

ಬಿಹಾರ ಮೂಲದ ರೆಹಾನ್‌ ಖಾನ್‌ (28) ಈ ದುಸ್ಸಾಹಸ ಮಾಡಿದ ವ್ಯಕ್ತಿ. ಆತ ಮಾನಸಿಕ ಅಸ್ವಸ್ಥ ಎಂದು ದೆಹಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

‘ಗುರುವಾರ ಬೆಳಗ್ಗೆ ಮೃಗಾಲಯಕ್ಕೆ ಬಂದಿದ್ದ ರೆಹಾನ್‌ ಖಾನ್‌ ಸಿಂಹವಿದ್ದ ಎತ್ತರದ ಕಬ್ಬಿಣದ ಪಂಜರವನ್ನೇರಿ ನಂತರ ಒಳಗೆ ಪ್ರವೇಶಿಸಿದ್ದಾನೆ. ಸಿಬ್ಬಂದಿ ತಡೆಯಲೆತ್ನಿಸಿದರೂ ಆತ ಎಲ್ಲರಿಂದ ತಪ್ಪಿಸಿಕೊಂಡು ಬೋನಿನೊಳಕ್ಕೆ ಹೋಗಿದ್ದ.  ಅಲ್ಲದೆ, ಸಿಂಹದ ಎದುರಿಗೇ ಹೋಗಿ ಕುಳಿತಿದ್ದಾನೆ. ಪಂಜರದೊಳಗೆ ಬಂದ ರೆಹಾನ್‌ನನ್ನು ಸಿಂಹ ಕೆಲ ಕಾಲ ದಿಟ್ಟಿ ನೋಡಿದೆ. ಅಷ್ಟೊತ್ತಿಗೆ ಆತನನ್ನು ರಕ್ಷಿಸಲಾಗಿದೆ,’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮೃಘಾಲಯದ ವಕ್ತಾರ ರಿಯಾಜ್‌ ಅಹ್ಮದ್‌ ಖಾನ್‌, ’ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದಾವಿಸಲಾಯಿತು. ಆತನಿಗೆ ಏಣಿ ನೀಡಲು ಪ್ರಯತ್ನಿಸಲಾಯಿತಾದರೂ,  ಆತ ನಮ್ಮ ಕೂಗನ್ನು ಕೇಳಿಸಿಕೊಳ್ಳಲಿಲ್ಲ. ನಂತರ ಸಿಂಹಕ್ಕೆ ಅರಿವಳಿಕೆ ನೀಡಿ ಆತನನ್ನು ರಕ್ಷಿಸಲಾಯಿತು,‘ ಎಂದು ತಿಳಿಸಿದ್ದಾರೆ. 
ರೆಹಾನ್‌ ಅತ್ಯಂತ ಅದೃಷ್ಟಶಾಲಿ. ಯಾವುದೇ ಅವಘಡವಿಲ್ಲದೇ ಆತನ್ನನ್ನು ರಕ್ಷಿಸಿರುವುದು ಸೋಜಿಗದ ಸಂಗತಿ ಎಂದು ಪ್ರಾಣಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಪ್ರತಿಕ್ರಿಯಿಸಿ (+)