ಸ್ಪೇನ್‌ನಿಂದ ಭಾರತೀಯ ಬಾಲಕಿ ಕರೆತರಲು ಕ್ರಮ

7

ಸ್ಪೇನ್‌ನಿಂದ ಭಾರತೀಯ ಬಾಲಕಿ ಕರೆತರಲು ಕ್ರಮ

Published:
Updated:

ನವದೆಹಲಿ: ಸ್ಪೇನ್‌ನಲ್ಲಿ ದತ್ತು ಪೋಷಕರಿಂದ ಪರಿತ್ಯಕ್ತಗೊಂಡಿರುವ ಮಧ್ಯಪ್ರದೇಶದ 13 ವರ್ಷದ ಬಾಲಕಿಯನ್ನು ಭಾರತಕ್ಕೆ ಮರಳಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ. 

ಪ್ರಸ್ತುತ, ಬಾಲಕಿ ಸ್ಪೇನ್‌ನ ಝರ್ಗೋಜಾದಲ್ಲಿರುವ ಸರ್ಕಾರಿ ನಿವಾಸದಲ್ಲಿ ವಾಸಿಸುತ್ತಿದ್ದಾಳೆ. 

‘ತಕ್ಷಣವೇ ಬಾಲಕಿಯನ್ನು ಸಂಪರ್ಕಿಸಿ ಆಕೆಯನ್ನು ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಕ್ರಮ ಜರುಗಿಸಿ. ಆಕೆ ಭಾರತಕ್ಕೆ ಮರಳಲು ಬಯಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ ನಿಮ್ಮ ಜತೆ ಸಂಪರ್ಕದಲ್ಲಿದೆ’ ಎಂದು ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರಿಗೆ ಮೇನಕಾ ಗಾಂಧಿ ಪತ್ರದ ಮೂಲಕ ತಿಳಿಸಿದ್ದಾರೆ. 

ಸ್ಪೇನ್‌ ದಂಪತಿ ಭೋಪಾಲ್‌ನ ದತ್ತು ಕೇಂದ್ರ ‘ಉಡಾನ್’ನಿಂದ ಬಾಲಕಿಯನ್ನು ದತ್ತು ಪಡೆದಿದ್ದರು. ಆ ವೇಳೆ ಕೇಂದ್ರದವರು ಬಾಲಕಿಗೆ 7 ವರ್ಷ ಎಂದು ಮಾಹಿತಿ ನೀಡಿದ್ದರು. ಆದರೆ ಈ ಮಾಹಿತಿ ಸುಳ್ಳಾಗಿತ್ತು ಎಂದು ತಿಳಿದ ಬಳಿಕ ಆಕೆಯನ್ನು ದಂಪತಿ ಹೊರಹಾಕಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ವರದಿಗೆ ಪ್ರತಿಕ್ರಿಯಿಸಿರುವ ಮೇನಕಾ, ‘ಬಾಲಕಿಯನ್ನು ವಾಪಸ್‌ ಭಾರತಕ್ಕೆ ಕರೆಸಿಕೊಳ್ಳಲಾಗುವುದು. ಬಳಿಕ ಸ್ಥಳೀಯ ಸಂಸ್ಥೆಗೆ ಆಕೆಯ ಜವಾಬ್ದಾರಿ ವಹಿಸಲಾಗುವುದು. ಆದರೆ ಬಾಲಕಿಯ ಈಗಿನ ಸ್ಥಿತಿ ಕುರಿತು ನನಗೆ ಕಳವಳವಾಗುತ್ತಿದೆ’ ಎಂದು ಮೇನಕಾ ಹೇಳಿದ್ದಾರೆ. 

ನಿಯಮ ಉಲ್ಲಂಘನೆ: ‘ಈ ದತ್ತು ಕೇಂದ್ರ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಹಾಗೂ ಷೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದೆ ಇರುವ ಆರೋಪಗಳನ್ನು ಎದುರಿಸುತ್ತಿದೆ’ ಎಂದು ಮೇನಕಾ ತಿಳಿಸಿದ್ದಾರೆ. 

‘ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಸಚಿವಾಲಯದ ಎದುರು ಹಾಜರಾಗುವಂತೆ ದತ್ತು ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಅಪೂರ್ವ ಶರ್ಮಾ ಅವರಿಗೆ ಸೂಚಿಸಲಾಗಿದೆ’ ಎಂದು ಡಬ್ಲ್ಯುಸಿಡಿ ಅಧಿಕಾರಿ ತಿಳಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !