ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒದಲ್ಲಿ ಮಾನವ ಸಂಪನ್ಮೂಲ ಕೊರತೆ: ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿ

Last Updated 17 ಫೆಬ್ರುವರಿ 2020, 5:20 IST
ಅಕ್ಷರ ಗಾತ್ರ

ನವದೆಹಲಿ:ಮಾನವ ಸಂಪನ್ಮೂಲ ಕೊರತೆಯಿಂದಾಗಿ ಹೊಸ ಯೋಜನೆಗಳನ್ನು ಸಾಕಾರಗೊಳಿಸುವುದುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸವಾಲಾಗಿ ಪರಿಣಮಿಸಿದೆ. ಸಂಸ್ಥೆಯ ಉನ್ನತ ಅಧಿಕಾರಿಗಳಿಗೂ ಇದುತಲೆನೋವಾಗಿ ಪರಿಣಮಿಸಿದೆ.

436 ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯು ಹಲವು ತಿಂಗಳುಗಳಿಂದ ನರೇಂದ್ರ ಮೋದಿ ಸರ್ಕಾರದ ಮುಂದಿದೆ. ಹೆಚ್ಚುತ್ತಲೇ ಇರುವ ಸಂಶೋಧನಾ ಕೆಲಸಗಳಿಗಾಗಿ ಹೆಚ್ಚುವರಿ ಮಾನವ ಸಂಪನ್ಮೂಲ ಹೊಂದುವ ಅಗತ್ಯವಿದೆ.

ಸದ್ಯ 52 ಪ್ರಯೋಗಾಲಯಗಳನ್ನು ಹೊಂದಿರುವ ಡಿಆರ್‌ಡಿಒದಲ್ಲಿ ಮುಂದಿನ ಪೀಳಿಗೆಯ ಕ್ಷಿಪಣಿಗಳಿಂದ ಹಿಡಿದು ಮಾನವರಹಿತ ಯುದ್ಧದ ಡ್ರೋನ್‌ಗಳವರೆಗೆ ಹಲವಾರು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಮಾನವ ಸಂಪನ್ಮೂಲ ಕೊರತೆಯು ಉನ್ನತಮಟ್ಟದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

7,353 ವಿಜ್ಞಾನಿಗಳು ಅಗತ್ಯವಿರುವ ಡಿಆರ್‌ಡಿಒದಲ್ಲಿ ಈಗ7,107 ವಿಜ್ಞಾನಿಗಳಷ್ಟೇ ಇದ್ದಾರೆ. 2010ರ ಏಪ್ರಿಲ್‌ನಲ್ಲಿ ಮಾನವ ಸಂಪನ್ಮೂಲ ಯೋಜನಾ ಮಂಡಳಿಯು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ 4,966 ವಿಜ್ಞಾನಿಗಳನ್ನು ನೇಮಿಸಿಕೊಳ್ಳಲು ಶಿಫಾರಸು ಮಾಡಿತ್ತು.

ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಕೇಂದ್ರ ಹಣಕಾಸು ಸಚಿವಾಲಯವು ಕೇವಲ 1,316 ಹುದ್ದೆಗಳಿಗೆ ಅನುಮತಿ ನೀಡಿತ್ತು. ಇದನ್ನೂ ಮತ್ತೂ ಕಡಿತಗೊಳಿಸಿದ ವೆಚ್ಚಇಲಾಖೆಯು ಮೊದಲ ಹಂತದಲ್ಲಿ ಕೇವಲ 436 ಹುದ್ದೆಗಳ ಸೃಷ್ಟಿಗೆ ಸೀಮಿತಗೊಳಿತು. ಆದಾಗ್ಯೂ, ಈ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಗೆಪ್ರಧಾನಿ ನೇತೃತ್ವದ ಸಚಿವ ಸಂಪುಟ ಭದ್ರತಾ ಸಮಿತಿಯು ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ ಎಂದು ಉನ್ನತ ಮೂಲಗಳು ಪ್ರಜಾವಾಣಿ ಸಹೋದರ ಸಂಸ್ಥೆ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಡಿಆರ್‌ಡಿಒ ವಕ್ತಾರರು ನಿರಾಕರಿಸಿದ್ದಾರೆ.

ಡಿಆರ್‌ಡಿಒದ ವೈಜ್ಞಾನಿಕ ಮಾನವ ಸಂಪನ್ಮೂಲವನ್ನು ಇತ್ತೀಚಿನ ವರ್ಷಗಳಲ್ಲಿ7,255ಕ್ಕೆ ನಿಗದಿಪಡಿಸಲಾಗಿದೆ. 2014 ಮತ್ತು 2018ರ ಅವಧಿಯಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಸುಮಾರು 142 ವಿಜ್ಞಾನಿಗಳು ಡಿಆರ್‌ಡಿಒ ತೊರೆದಿದ್ದಾರೆ.

‘ಅಗ್ನಿ IV’ ಮತ್ತು ‘ಅಗ್ನಿ V’ಖಂಡಾಂತರ ಕ್ಷಿಪಣಿ, ನಿರ್ಭಯ್ ಕ್ರೂಸ್ ಕ್ಷಿಪಣಿ, ಜಲಾಂತರ್ಗಾಮಿಯಿಂದ ಉಡಾಯಿಸಬಲ್ಲ ಕೆ -15 ಕ್ಷಿಪಣಿ, ಆಂಟಿ-ಟ್ಯಾಂಕ್ ನಾಗ್ ಕ್ಷಿಪಣಿ, ವಾಯುಗಾಮಿ ರೆಡಾರ್ ಎಡಬ್ಲ್ಯುಎಸಿಎಸ್, ಅರ್ಜುನ್ ಬ್ಯಾಟಲ್ ಟ್ಯಾಂಕ್ ಮತ್ತು ತೇಜಸ್ ಲಘು ಯುದ್ಧ ವಿಮಾನ ಸೇರಿದಂತೆ ಡಿಆರ್‌ಡಿಒದ ವಿವಿಧ ಲ್ಯಾಬ್‌ಗಳಲ್ಲಿ 93 ಪ್ರಮುಖ ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ ಎಂದು 2018ರ ರಕ್ಷಣಾ ಸ್ಥಾಯಿ ಸಂಸದೀಯ ಸಮಿತಿ ವರದಿಯಲ್ಲೇ ಹೇಳಲಾಗಿತ್ತು.

ಈಗಿನ 30 ಪ್ರಮುಖ ಯೋಜನೆಗಳ (ಪ್ರತಿಯೊಂದಕ್ಕೂ 100 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚ) ಪೈಕಿ, 6ರ ವೆಚ್ಚ ಪರಿಷ್ಕರಣೆ ಮತ್ತು 16ರ ಸಮಯ ಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ.ಇದನ್ನು ಹೊರತುಪಡಿಸಿದರೆ 12 ಯೋಜನೆಗಳು ಐದು ವರ್ಷಗಳಿಗೂ ಹಿಂದಿನವು. ಅಲ್ಲದೆ, 11 ನೇ ಪಂಚವಾರ್ಷಿಕ ಯೋಜನೆಯಲ್ಲಿ (ಏಪ್ರಿಲ್ 2002ರಿಂದ ಮಾರ್ಚ್ 2007ರವರೆಗೆ) ಅನುಮೋದಿಸಲಾದ 17 ಪ್ರಮುಖ ಯೋಜನೆಗಳಲ್ಲಿ ಯಾವುದೂ ಇನ್ನೂ ಪೂರ್ಣಗೊಂಡಿಲ್ಲ. ಹೀಗಿದ್ದರೂ ಹಲವು ಸಂಸದೀಯ ಸಮಿತಿಗಳು ಡಿಆರ್‌ಡಿಒದ ಬಹುತೇಕ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಅನಿಯಮಿತ ವಿಳಂಬ ಆಗುತ್ತಿರುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT