ಮಂಗಳವಾರ, ಮೇ 18, 2021
24 °C

ಭಾರತ್ ಬಂದ್‌ನಿಂದ ಹೊರಗುಳಿದಿದ್ದ ಮಾಯಾವತಿ: ಪ್ರತಿಪಕ್ಷಗಳ ಐಕ್ಯತೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಇಂಧನ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಕರೆ ನೀಡಿದ್ದ ಭಾರತ್‌ ಬಂದ್‌ನಿಂದ ದೂರ ಉಳಿದಿದ್ದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವೂ ತಪ್ಪುಗಳನ್ನು ಎಸಗಿದೆ ಎಂದಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಸಾಂಘಿಕ ಹೋರಾಟ ನಡೆಸಲು ಉದ್ದೇಶಿಸಿರುವ ಪ್ರತಿಪಕ್ಷಗಳ ಐಕ್ಯತೆಗೆ ಇದರಿಂದ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ಹಿಂದಿನ ಯುಪಿಎ ಸರ್ಕಾರಗಳನ್ನು ಟೀಕಿಸಿರುವ ಮಾಯಾವತಿ, ಎರಡೂ ಸರ್ಕಾರಗಳು ಸಮಾನ ಜವಾಬ್ದಾರಿ ಹೊಂದಿವೆ ಎಂದು ದೂರಿದ್ದರು. ‘ಇಂಧನ ದರ ಏರಿಕೆ ಸಂದರ್ಭದಲ್ಲಿ ಸಾಮಾನ್ಯವರ್ಗದ ಜನರು ಹಾಗೂ ರೈತರ ಅಭಿಪ್ರಾಯಗಳನ್ನು ಎರಡೂ ಸರ್ಕಾರಗಳು ಕಡೆಗಣಿಸಿವೆ’ ಎಂದು ಭಾರತ್‌ ಬಂದ್‌ ನಂತರದ ದಿನ ಮಂಗಳವಾರ ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕರೊಬ್ಬರು, ‘ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿರುವ ಸಂದರ್ಭದಲ್ಲಿ, ಇಂತಹ ಬೆಳವಣಿಗೆಗಳು ಸಾರ್ವಜನಿಕರು ಹಾಗೂ ಈಗಾಗಲೇ ನಮ್ಮ ಒಗ್ಗಟ್ಟಿನ ಬಗ್ಗೆ ಸಂಶಯ ಹೊಂದಿರುವ ಆಡಳಿತ ಪಕ್ಷದವರಿಗೆ ತಪ್ಪು ಸಂದೇಶ ರವಾನಿಸುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ನಮ್ಮ ಪಕ್ಷದ ಕಾರ್ಯಕರ್ತರು ಮಾಯಾವತಿ ವರ್ತನೆಯಿಂದ ಬೇಸರಗೊಂಡಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಹೇಳಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿರಿಸಿರುವ ಮಾಯಾವತಿ ಹೆಚ್ಚಿನ ಸೀಟುಗಳನ್ನು ಗಿಟ್ಟಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು