ಮಿ–ಟೂ ಅಟಾಟೋಪ: ಸಚಿವ ಅಕ್ಬರ್‌ ತಲೆದಂಡಕ್ಕೆ ಒತ್ತಡ

7
ಭೂತಕಾಲದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಾಮಾಜಿಕ ಜಾಲತಾಣ ಅಭಿಯಾನದ ಮೂಲಕ ಬಯಲಿಗೆ

ಮಿ–ಟೂ ಅಟಾಟೋಪ: ಸಚಿವ ಅಕ್ಬರ್‌ ತಲೆದಂಡಕ್ಕೆ ಒತ್ತಡ

Published:
Updated:

ನವದೆಹಲಿ: ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧದ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಮೌನ ತಾಳಿದೆ. ಆದರೆ, ಆರೋಪಗಳ ಬಗ್ಗೆ ಅಕ್ಬರ್‌ ಅವರು ತೃಪ್ತಿಕರವಾದ ವಿವರಣೆ ಕೊಡಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ಒತ್ತಾಯಿಸಿದೆ. 

ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಕೇಂದ್ರದ ಮೌನ ಸ್ವೀಕಾರಾರ್ಹವಲ್ಲ ಎಂದು ಸಿಪಿಎಂನ ಮಹಿಳಾ ಘಟಕ ಹೇಳಿದೆ. ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲು ಮಹಿಳೆಯರು ಸಾಮಾನ್ಯವಾಗಿ ಹೆದರುತ್ತಾರೆ. ಹಾಗಾಗಿ ಈಗ ಕೇಳಿ ಬಂದಿರುವ ಎಲ್ಲ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಪುನರುಚ್ಚರಿಸಿದ್ದಾರೆ. 

ಅಕ್ಬರ್‌ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ವಕ್ತಾರ ಜೈಪಾಲ್‌ ರೆಡ್ಡಿ ಆಗ್ರಹಿಸಿದ್ದಾರೆ. ಕನಿಷ್ಠ ಐವರು ಮಹಿಳೆಯರು ಅಕ್ಬರ್‌ ವಿರುದ್ಧ ಅಸಭ್ಯ ವರ್ತನೆಯ ಆಪಾದನೆ ಮಾಡಿದ್ದಾರೆ. 

ಅಕ್ಬರ್‌ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್‌ ಒವೈಸಿ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. 

ಕೇಂದ್ರ ಸಚಿವ ಸಂಪುಟ ಸಭೆಯ ಮಾಹಿತಿ ನೀಡಲು ಸಚಿವ ರವಿಶಂಕರ್‌ ಪ್ರಸಾದ್‌ ಅವರು ನಡೆಸಿದ ಮಾಧ್ಯಮಗೋಷ್ಠಿಯಲ್ಲಿಯೂ ಅಕ್ಬರ್‌ ಬಗ್ಗೆ ಪ್ರಶ್ನೆಗಳು ತೂರಿ ಬಂದವು. ಆದರೆ ಈ ಪ್ರಶ್ನೆಗಳಿಗೆ ಪ್ರಸಾದ್‌ ಉತ್ತರಿಸಲಿಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೂ ಅಕ್ಬರ್‌ ಬಗೆಗಿನ ಪ್ರಶ್ನೆಗಳನ್ನು ಮಂಗಳವಾರ ತಳ್ಳಿ ಹಾಕಿದ್ದರು. 

ಸೊಂಟ ಹಿಡಿದೆಳೆದಿದ್ದ ರಣತುಂಗ: ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಈಗ ಶ್ರೀಲಂಕಾದ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರ ವಿರುದ್ಧ ಭಾರತೀಯ ವಿಮಾನ ಪರಿಚಾರಿಕೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸುದೀರ್ಘ ಪೋಸ್ಟ್‌ ಪ್ರಕಟಿಸಿರುವ ಅವರು ತಮ್ಮ ಮೇಲಾದ ಹಲವು ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ.

ಕೆಲ ವರ್ಷದ ಹಿಂದೆ ರಣತುಂಗ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಹೋಟೆಲೊಂದರಲ್ಲಿ ತಮ್ಮ ಸೊಂಟ ಹಿಡಿದೆಳೆದಿದ್ದರು ಎಂದು ಮಹಿಳೆ ಹೇಳಿದ್ದಾರೆ. ಆಗ ಹೋಟೆಲ್‌ನ ಸ್ವಾಗತ ಕೌಂಟರ್‌ಗೆ ಓಡಿ ಹೋಗಿ ದೂರು ಕೊಟ್ಟರೆ ಅವರು ‘ಇದು ನಿಮ್ಮ ಖಾಸಗಿ ವಿಚಾರ’ ಎಂದರು ಎಂದು ಮಹಿಳೆ ದೂರಿದ್ದಾರೆ. 

ದೂರು ಕೊಡಿ: ಮಹಿಳಾ ಆಯೋಗ

ಲೈಂಗಿಕ ದೌರ್ಜನ್ಯದ ಸಂತ್ರಸ್ತರಲ್ಲಿ ಹೆಚ್ಚಿನವರು ಆರೋಪಿಗಳ ಹೆಸರು ಬಹಿರಂಗಪಡಿಸಿ ಅವಮಾನಿಸುವುದರ ಆಚೆಗೆ ಹೋಗುವುದೇ ಇಲ್ಲ. ಹಾಗಾಗಿ ಆರೋಪಿಗಳ ವಿರುದ್ಧ ದೂರು ದಾಖಲಾಗುವುದಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. 

ಸಂತ್ರಸ್ತೆಯರು ಸಂಬಂಧಪಟ್ಟವರಿಗೆ ಲಿಖಿತ ದೂರು ಸಲ್ಲಿಸುವಂತೆ ಆಯೋಗವು ಪ್ರೋತ್ಸಾಹ ನೀಡಿದೆ. 

‘ಕೆಲಸದ ಸ್ಥಳಗಳಲ್ಲಿಯೂ ಸೇರಿ ಎಲ್ಲೆಡೆ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ರಕ್ಷಣೆಯ ಖಾತರಿಗೆ ಆಯೋಗವು ಬದ್ಧವಾಗಿದೆ. ಮಹಿಳೆಯರ ಖಾಸಗಿತನದ ಮೇಲೆ ನಡೆಯುವ ಆಕ್ರಮಣವನ್ನು ಮಹಿಳೆಯರಿಗೆ ಸಂವಿಧಾನವು ನೀಡಿರುವ ಹಕ್ಕುಗಳ ಉಲ್ಲಂಘನೆ ಎಂದೇ ಪರಿಗಣಿಸಲಾಗುವುದು. ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಯೋಗ ಹೇಳಿದೆ. 

ಕೆಟ್ಟ ಸಂಸ್ಕೃತಿ: ವೈರಮುತ್ತು ಪ್ರತಿಕ್ರಿಯೆ

ಚೆನ್ನೈ: ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ್‌ ತಮ್ಮ ವಿರುದ್ಧ ಮಾಡಿದ ಅಸಭ್ಯ ವರ್ತನೆ ಆರೋಪವನ್ನು ತಮಿಳು ಚಿತ್ರರಂಗದ ಖ್ಯಾತ ಗೀತರಚನೆಕಾರ ವೈರಮುತ್ತು ತಳ್ಳಿ ಹಾಕಿದ್ದಾರೆ.

‘ಸೆಲೆಬ್ರಿಟಿಗಳು ಮತ್ತು ಗಣ್ಯರ ವಿರುದ್ಧ ಇಂತಹ ಕೀಳು ಅಭಿರುಚಿಯ ಆರೋಪ ಮಾಡುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಇಂತಹ ಕೆಟ್ಟ ಸಂಸ್ಕೃತಿಯೇ ಇತ್ತೀಚೆಗೆ ನಾಗರಿಕ ಸಂಸ್ಕೃತಿಯಾಗಿ ಬೆಳೆದು ನಿಂತಿರುವುದು ವಿಪರ್ಯಾಸ’ ಎಂದು ಅವರು ಬುಧವಾರ ಟ್ವೀಟ್‌ ಮಾಡಿದ್ದಾರೆ.

ನಿರಂತರವಾಗಿ ತಮ್ಮನ್ನು ಅವಮಾನಿಸುವ ಪ್ರಯತ್ನಗಳು ನಡೆಯುತ್ತಿವೆ. ಕಾಲ ಬಂದಾಗ ಸತ್ಯ ಬಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿದೇಶದಲ್ಲಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ  ವೈರಮುತ್ತು ಅವರೊಂದಿಗೆ ಸಹಕರಿಸುವಂತೆ ಸಂಘಟಕರು ತಮ್ಮನ್ನು ಕೋರಿದ್ದರು ಎಂದು ಚಿನ್ಮಯಿ ‘ಮಿ ಟೂ’ ಹ್ಯಾಶ್‌ ಟ್ಯಾಗ್‌ನಲ್ಲಿ ಆರೋಪ ಮಾಡಿದ್ದರು.

ಅನುರಾಗ್‌ ರಾಜೀನಾಮೆ

ಸಿನಿಮಾ ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರು ಮುಂಬೈ ಅಕಾಡೆಮಿ ಆಫ್‌ ಮೂವಿಂಗ್ ಇಮೇಜಸ್‌ (ಎಂಎಎಂಐ) ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯ ಮಾಜಿ ಪಾಲುದಾರ ವಿಕಾಸ್‌ ಬಹ್ಲ್‌ ಅವರ ಬಗ್ಗೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು.

ನೆಸ್‌ ವಿರುದ್ಧದ ಪ್ರೀತಿ ಪ್ರಕರಣ ವಜಾ

ಉದ್ಯಮಿ ನೆಸ್‌ ವಾಡಿಯಾ ವಿರುದ್ಧ ನಟಿ ಪ್ರೀತಿ ಝಿಂಟಾ ನೀಡಿದ್ದ ಲೈಂಗಿಕ ದೌರ್ಜನ್ಯದ ದೂರನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. 2014ರಲ್ಲಿ ಐಪಿಎಲ್‌ ಪಂದ್ಯದ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿತ್ತು ಎಂದು ಪ್ರೀತಿ ಆರೋಪಿಸಿದ್ದರು.

ನೆಸ್‌ ವಾಡಿಯಾ ಅವರು ಐಪಿಎಲ್‌ ತಂಡ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನ ಮಾಲೀಕರಲ್ಲಿ ಒಬ್ಬರಾಗಿದ್ದರು.

ಒಂದು ಕಾಲದಲ್ಲಿ ಪ್ರೀತಿ ಅವರು ನೆಸ್‌ ವಾಡಿಯಾ ಅವರಿಗೆ ನಿಕಟವಾಗಿದ್ದರು. ಈಗ ಪ್ರೀತಿ ಅವರು ಅಮೆರಿಕ ಪ್ರಜೆ ಜೀನ್‌ ಗುಡ್‌ಇನಫ್‌ ಅವರನ್ನು ವಿವಾಹವಾಗಿದ್ದಾರೆ.

ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ ಯೋಚಿಸಿ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠವು ನೆಸ್‌ ಮತ್ತು ಪ್ರೀತಿ ಅವರಿಗೆ ಸೂಚಿಸಿತ್ತು. ಅದರಂತೆ ತಮ್ಮ ವಕೀಲರ ಜತೆಗೆ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಇಬ್ಬರೂ ಚರ್ಚೆ ನಡೆಸಿದ್ದಾರೆ. ‘ಪ್ರಕರಣವನ್ನು ವಜಾ ಮಾಡಲಾಗಿದೆ. ಯಾವುದೇ ವಿವರ ಬಹಿರಂಗಪಡಿಸದಂತೆ ನಮಗೆ ಸೂಚಿಸಿದ್ದಾರೆ’ ಎಂದು ನೆಸ್‌ ವಕೀಲ ಅಬಾದ್‌ ಹೇಳಿದ್ದಾರೆ.

 

 

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !