ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌19 | ಸಾವಿನ ಸಂಖ್ಯೆ 3ಕ್ಕೆ ಏರಿಕೆ: ಸೋಂಕು ತಡೆಗೆ ಬಿರುಸು ಕ್ರಮ

ಸೋಂಕಿತರ ಸಂಖ್ಯೆ 137: ಗುಣಮುಖರಾದವರು 14
Last Updated 18 ಮಾರ್ಚ್ 2020, 1:30 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌19 ಪೀಡಿತ 64 ವರ್ಷದ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಮಂಗಳವಾರ ಮೃತರಾಗಿದ್ದಾರೆ. ಇದರೊಂದಿಗೆ ಭಾರತದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ.ಮೃತ ವ್ಯಕ್ತಿಗೆ ಬೇರೆ ಆರೋಗ್ಯ ಸಮಸ್ಯೆಗಳೂ ಇದ್ದವು. ಹಾಗಾಗಿ, ಅವರು ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದಾರೆ ಎಂಬುದನ್ನು ತಕ್ಷಣಕ್ಕೆ ದೃಢಪಡಿಸಿಲ್ಲ. ದೇಶದಲ್ಲಿ 137 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯು 40ಕ್ಕೆ ಏರಿದೆ.

ದೇಶದಲ್ಲಿ ಸೋಂಕು ಪತ್ತೆಯಾದವರಲ್ಲಿ 24 ಮಂದಿ ವಿದೇಶಿಯರೂ ಇದ್ದಾರೆ. ಕೇರಳದಲ್ಲಿ 26 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕರ್ನಾಟಕದಲ್ಲಿ 11, ಲಡಾಖ್‌ನಲ್ಲಿ ಆರು, ಜಮ್ಮು–ಕಾಶ್ಮೀರದಲ್ಲಿ ಮೂರು ಮತ್ತು ತೆಲಂಗಾಣದಲ್ಲಿ ಐದು ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ಗೆ ಬಲಿಯಾದ ಕಲ್ಬುರ್ಗಿಯ 76 ವರ್ಷದ ವ್ಯಕ್ತಿಯು ಸೌದಿ ಅರೇಬಿಯಾದಿಂದ ಹಿಂದಿರುಗಿದ್ದರು. ಮುಂಬೈಯಲ್ಲಿ ಮೃತಪಟ್ಟ ವ್ಯಕ್ತಿಯು ದುಬೈಗೆ ಹೋಗಿದ್ದರು. ಸೋಂಕು ದೃಢಪಟ್ಟ 14 ಮಂದಿ ಈವರೆಗೆ ಸೋಂಕುಮುಕ್ತರಾಗಿದ್ದಾರೆ.

ಸೋಂಕು ಹರಡುವಿಕೆಯನ್ನು ತಡೆಯುವ ಕ್ರಮಗಳು ಮಂಗಳವಾರದ ಹೊತ್ತಿಗೆ ಇನ್ನಷ್ಟು ಬಿರುಸು ಪಡೆದಿವೆ. ಐರೋಪ್ಯ ಒಕ್ಕೂಟ, ಟರ್ಕಿ ಮತ್ತು ಬ್ರಿಟನ್‌ನಿಂದ ಬರುವವರಿಗೆ ನಿಷೇಧ ಹೇರುವ ನಿರ್ಧಾರವನ್ನು ಸೋಮವಾರವೇ ತೆಗೆದುಕೊಳ್ಳಲಾಗಿದೆ. ಇದು ಬುಧವಾರದಿಂದ ಜಾರಿಗೆ ಬರಲಿದೆ. ಅದರೊಂದಿಗೆ, ಅಫ್ಗಾನಿಸ್ತಾನ, ಫಿಲಿಪ್ಪೀನ್ಸ್‌ ಮತ್ತು ಮಲೇಷ್ಯಾದಿಂದ ಬರುವವರಿಗೆ ತಕ್ಷಣದಿಂದಲೇ ಪ್ರವೇಶ ನಿಷೇಧಿಸಲಾಗಿದೆ.

ಈವರೆಗೆ ಎಂದೂ ಕೇಳರಿಯದ ‘ಅಂತರ ಕಾಯ್ದುಕೊಳ್ಳಿ’ ಎಂಬುದು ಕೊರೊನಾ ಸೋಂಕು ತಡೆ ದಿಸೆಯಲ್ಲಿ ವೇದವಾಕ್ಯವಾಗಿದೆ. ಸಾರ್ವಜನಿಕ ಸ್ಥಳಗಳು, ತಾಜ್‌ಮಹಲ್‌ನಂತಹ ಪ್ರವಾಸಿ ತಾಣಗಳಲ್ಲಿ ಇತರರಿಂದ ದೂರ ಇರಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ದೇಶದಾದ್ಯಂತ ಸಾರ್ವಜನಿಕ ಸ್ಥಳಗಳು, ಪ್ರವಾಸಿ ತಾಣಗಳ ಮೇಲೆ ನಿರ್ಬಂಧ ಹೇರಲಾಗಿದೆ. ಮುಂದಿನ ಕೆಲ ದಿನಗಳನ್ನು ಪ್ರತ್ಯೇಕವಾಗಿಯೇ ಕಳೆಯಲು, ಮನೆಯಿಂದಲೇ ಕೆಲಸ ಮಾಡಲು ಅಥವಾ ಆನ್‌ಲೈನ್‌ ಮೂಲಕ ಕಲಿಕೆ ಮುಂದುವರಿಸಲು ಸಾವಿರಾರು ಮಂದಿ ಸಜ್ಜಾಗಿದ್ದಾರೆ.

ಕೊರೊನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಸಂಸದರು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಮೊಟಕು ಮಾಡುವ ಪ್ರಶ್ನೆಯೇ ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂಸದರು ಕೆಲಸ ಮಾಡುತ್ತಿರಬೇಕು ಎಂದು ಅವರು ಹೇಳಿದ್ದಾರೆ.

ಬಹಳಷ್ಟು ರಾಜ್ಯಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು, ಸಿನಿಮಾ ಮಂದಿರಗಳು ಬಂದ್‌ ಆಗಿವೆ. ವಸತಿ ಸಮುಚ್ಚಯಗಳಲ್ಲಿ ಸಂದರ್ಶಕರ ಸಂಖ್ಯೆಗೆ ನಿರ್ಬಂಧ ಹೇರಲಾಗಿದೆ. ಹಲವು ಕಚೇರಿಗಳು ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಮದುವೆಗಳು ಕೂಡ ಅನಿರ್ದಿಷ್ಟಾವಧಿ ಮುಂದೂಡಿಕೆಯಾದ ಪ್ರಕರಣಗಳು ಇವೆ.

ಉತ್ತರ ಪ್ರದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಏಪ್ರಿಲ್‌ 2ರವರೆಗೆ ರಜೆ ಘೋಷಿಸಲಾಗಿದೆ. ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.ಜನರು ಅನಗತ್ಯ ಪ್ರಯಾಣ ಮಾಡಲೇಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕರೆ ಕೊಟ್ಟಿದ್ದಾರೆ. ಜನರು ಅನಗತ್ಯವಾಗಿ ಪ್ರಯಾಣಿಸುವುದು ಮುಂದುವರಿದರೆ ಮುಂಬೈ ನಗರದ ರೈಲು ಮತ್ತು ಬಸ್‌ ಸೇವೆಗಳನ್ನು ಬಂದ್‌ ಮಾಡುವ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಸ್ಥಳೀಯ ಸಂಪರ್ಕದ ವ್ಯಕ್ತಿಗಳಿಗೆ ಹರಡುತ್ತಿದೆ

* ಕೊರೊನಾ–2 ವೈರಸ್‌ ಭಾರತದಲ್ಲಿ ಸಾಮುದಾಯಿಕವಾಗಿ ಹರಡುತ್ತಿದೆ ಎಂಬುದಕ್ಕೆ ಈವರೆಗೆ ಪುರಾವೆ ಸಿಕ್ಕಿಲ್ಲ. ಸ್ಥಳೀಯ ಸಂಪರ್ಕದ ವ್ಯಕ್ತಿಗಳ ನಡುವೆ ಮಾತ್ರ ಸೋಂಕು ಹರಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ

* ಕೇಂದ್ರ ರೈಲ್ವೆಯು 23 ರೈಲುಗಳನ್ನು ರದ್ದುಪಡಿಸಿದೆ. ‍ಪ್ರಯಾಣಿಕರು ಇಲ್ಲ ಮತ್ತು ಸೋಂಕು ತಡೆ ಕ್ರಮ ಎಂದು ಇದಕ್ಕೆ ಕಾರಣ ಕೊಡಲಾಗಿದೆ

* ಪ್ರತಿ ವಿಮಾನವನ್ನು ಕನಿಷ್ಠ 24 ತಾಸುಗಳಿಗೆ ಒಮ್ಮೆ ಸ್ವಚ್ಛಗೊಳಿಸಬೇಕು, ಸೋಂಕು ನಿವಾರಕಗಳನ್ನು ಸಿಂಪಡಿಸಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ

* ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಗೋಏರ್‌ ರದ್ದುಪಡಿಸಿದೆ. ಸಿಬ್ಬಂದಿಗೆ ಆವರ್ತನೆಯಲ್ಲಿ ವೇತನರಹಿತ ರಜೆ ಪಡೆಯುವ ಅವಕಾಶ ನೀಡಿದೆ

* ಎಲ್ಲ ಸಚಿವಾಲಯಗಳ ಕಚೇರಿಗಳಲ್ಲಿ ಜ್ವರ ಪತ್ತೆ ಸಾಧನಗಳನ್ನು ಅಳವಡಿಸಲು ಮತ್ತು ಸಂದರ್ಶಕರ ನಿತ್ಯದ ಭೇಟಿಯನ್ನು ಅಮಾನತು ಮಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ

* ಭಾರತಕ್ಕೆ ಬರುವ ವಿಮಾನಗಳು ರದ್ದಾದ ಕಾರಣ ಕೇರಳದ 300 ವಿದ್ಯಾರ್ಥಿಗಳು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಉಳಿದಿದ್ದಾರೆ. ಅವರೆಲ್ಲವರೂ ಫಿಲಿಪ್ಪೀನ್ಸ್‌, ಕಾಂಬೋಡಿಯಾ ಮತ್ತು ಮಲೇಷ್ಯಾದಿಂದ ಅಲ್ಲಿಗೆ ಬಂದವರು

* ವೀಸಾ ಮತ್ತು ಪ್ರಯಾಣ ನಿರ್ಬಂಧಗಳಿಗೆ ಸಂಬಂಧಿಸಿ 24x7 ಸಹಾಯವಾಣಿಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ದೂರವಾಣಿ (011-24300666) ಮತ್ತು ಇಮೇಲ್‌ (support.covid19-boi@gov.in) ಮೂಲಕ ಮಾಹಿತಿ ಪಡೆಯಬಹುದು

* ಕೋವಿಡ್‌ನಿಂದಾಗಿ ಮೃತಪಟ್ಟ ವ್ಯಕ್ತಿಗಳ ದೇಹವನ್ನು ಹೇಗೆ ನಿರ್ವಹಿಸಬೇಕು ಎಂಬ ಮಾರ್ಗದರ್ಶಿಸೂತ್ರವನ್ನು ಕೇಂದ್ರ ಸಿದ್ಧಪಡಿಸಿದೆ

ಕೋವಿಡ್ ಅಂಕಿಅಂಶ

ವಿಶ್ವದ ವಿವಿಧೆಡೆ ಈವರೆಗೆ 7,497 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 1,89,160 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 80,643 ಸೋಂಕಿತರು ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT