ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸೇನೆಗೆ ದುಃಸ್ವಪ್ನವಾದ ಮಿಗ್‌!

ದಶಕಗಳಿಂದ ಭಾರತದ ಗಡಿ ಕಾಯುತ್ತಿರುವ ಆಪತ್ಬಾಂಧವ ರಷ್ಯಾ ನಿರ್ಮಿತ ಯುದ್ಧವಿಮಾನ
Last Updated 2 ಮಾರ್ಚ್ 2019, 18:58 IST
ಅಕ್ಷರ ಗಾತ್ರ

ನವದೆಹಲಿ: ಅರ್ಧ ಶತಮಾನದ ಹಿಂದೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಇನ್ನಿಲ್ಲದಂತೆ ಕಾಡಿದ್ದ ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನ ಮಿಗ್‌–21 ಈಗಲೂ ಆ ದೇಶವನ್ನು ದುಃಸ್ವಪ್ನದಂತೆ ಕಾಡುತ್ತಿವೆ.

1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ವಾಯುಪಡೆಯ ಮಿಗ್‌–21 ಯುದ್ಧ ವಿಮಾನ
ಗಳು ಢಾಕಾದ ಗವರ್ನರ್‌ ನಿವಾಸವನ್ನು ಸುತ್ತುವರಿದಿದ್ದವು. ಮಿಗ್‌ ವಿಧ್ವಂಸಕಾರಿ ದಾಳಿಗೆ ಬೆದರಿದ 93 ಸಾವಿರ ಯೋಧರ ಪಾಕಿಸ್ತಾನ ಭಾರತಕ್ಕೆ ಶರಣಾಗಿತ್ತು.

ಅಂದು ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಮಿಗ್‌ ಯುದ್ಧ ವಿಮಾನಗಳು ಸೇವೆಯಿಂದ ತೆರೆಯ ಮರೆಗೆ ಸರಿಯುವ ಕಾಲ ಸಮೀಪಿಸುತ್ತಿದ್ದರೂ ಅವುಗಳ ಮಾರಕ ಹೊಡೆತ, ದಾಳಿಯ ತೀವ್ರತೆ ಮತ್ತು ದಾಳಿಯ ಸಾಮರ್ಥ್ಯ ಇನ್ನೂ ಕಡಿಮೆಯಾಗಿಲ್ಲ.

ಮಿಗ್‌–21 ಯುದ್ಧ ವಿಮಾನಗಳು ಈಗಲೂ ನೆರೆಯ ರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಮಿಗ್‌–21 ಬೈಸನ್‌ (ಕಾಡುಕೋಣ) ಇತ್ತೀಚೆಗೆ ಪಾಕಿಸ್ತಾನದ ಅತ್ಯಾಧುನಿಕ ಎಫ್‌–16 ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದೆ. ಅಲ್ಲಿ ದೊರೆತ ಅವಶೇಷಗಳು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಕಟ್ಟಿ ಹಾಕಲು ಭಾರತಕ್ಕೆ ಸೂಕ್ತ ಪುರಾವೆ ಒದಗಿಸಲಿವೆ.

ಭಾರತ ಹೊಡೆದು ಉರುಳಿಸಿದ ಎಫ್‌–16 ಬತ್ತಳಿಕೆಯಲ್ಲಿದ್ದ ಅಮೆರಿಕ ನಿರ್ಮಿತ ಎಐಎಂ–120 ಸಿ–5 ಕ್ಷಿಪಣಿಯ ಚೂರುಗಳನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಪೂರ್ವ ಭಾಗದಲ್ಲಿ ದೊರೆತ ಕ್ಷಿಪಣಿ ಅವಶೇಷ, ಎಲೆಕ್ಟ್ರಾನಿಕ್‌ ಚಿಪ್‌ ಬೋರ್ಡ್‌ ತುಂಡುಗಳನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ. ಎಎಂಆರ್‌ಎಎಎಂ ಕ್ಷಿಪಣಿಯನ್ನು ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳು ಬಳಸುತ್ತವೆ.

ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಬಳಸಬೇಕಾಗಿದ್ದ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳನ್ನು ಪಾಕಿ
ಸ್ತಾನ ಸೇನೆಯು ಭಾರತದ ವಿರುದ್ಧ ಬಳಸುತ್ತಿದೆ ಎಂದು ನಿರೂಪಿಸಲು ಈ ಪುರಾವೆಗಳು ಸಹಾಯವಾಗಲಿವೆ. ಇದು ಸಾಧ್ಯವಾದದ್ದು ಮತ್ತದೇ ‘ಮಿಗ್‌–21’ನಿಂದ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದ ‘ಎಫ್‌–16’ ಮಹತ್ವದ ಎಲೆಕ್ಟ್ರಾನಿಕ್‌ ಹೆಗ್ಗುರುತುಗಳು ಭಾರತೀಯ ಸೇನೆಯ ವಶದಲ್ಲಿವೆ.

ಅಮೆರಿಕ ಮೊದಲ ಬಾರಿಗೆ 1990ರಲ್ಲಿ 40 ಎಫ್‌–16 ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಆಡಳಿತ ಎರಡನೇ ಹಂತದಲ್ಲಿ ಜಾರ್ಜ್‌ ಬುಷ್‌ 36 ಎಫ್‌–16 ಯುದ್ಧ ವಿಮಾನ ಮತ್ತು ಕ್ಷಿಪಣಿಗಳನ್ನು ಪೂರೈಸಿತ್ತು.

ಭಯೋತ್ಫಾದನೆಯನ್ನು ನಿಯಂತ್ರಿಸಲು ಮಾತ್ರ ಈ ಶಸ್ತಾಸ್ತ್ರಗಳನ್ನು ಬಳಸುವಂತೆ ಅಮೆರಿಕವು ಪಾಕಿಸ್ತಾನಕ್ಕೆ ಕಟ್ಟುನಿಟ್ಟಿನ ಷರತ್ತು ವಿಧಿಸಿತ್ತು. ಆದರೆ, ಈ ಷರತ್ತುಗಳನ್ನು ಉಲ್ಲಂಘಿಸಿರುವ ಪಾಕಿಸ್ತಾನವು ಭಾರತದ ಮೇಲಿನ ದಾಳಿಗೆ ಅಮೆರಿಕ ನಿರ್ಮಿತ ವಿಮಾನ, ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿದೆ.

ಭಾರತಕ್ಕೆ ಈ ಪುರಾವೆಗಳನ್ನು ಒದಗಿಸಿದ್ದು ಮಿಗ್‌–21 ಯುದ್ಧ ವಿಮಾನಗಳು.

ಮಿಗ್‌–21 ಬೈಸನ್‌ ಮತ್ತು ಎಫ್‌–16 ಯುದ್ಧ ವಿಮಾನಗಳ ನಡುವಿನ ವೈಮಾನಿಕ ಕಾಳಗದಲ್ಲಿ ಬಹುತೇಕ ಮಿಗ್‌ ಮೇಲುಗೈ ಸಾಧಿಸಿವೆ. ಅಮೆರಿಕ ನಿರ್ಮಿತ ಯುದ್ಧ ವಿಮಾನಗಳ ಮೇಲೆ ರಷ್ಯಾ ನಿರ್ಮಿತ ಯುದ್ಧ ವಿಮಾನಗಳು ಮೇಲುಗೈ ಸಾಧಿಸಿರುವ ನಿದರ್ಶನ ಇರುವುದು ಇದೊಂದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT