ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ; ಸರಳ ನೀತಿಗೆ ಆಗ್ರಹಿಸಿ ಪ್ರತಿಭಟನೆ

Last Updated 16 ಏಪ್ರಿಲ್ 2019, 18:16 IST
ಅಕ್ಷರ ಗಾತ್ರ

ನವದೆಹಲಿ: ಗಣಿಗಾರಿಕೆಗೆ ಸಂಬಂಧಿಸಿದಂತೆ ಸರಳ ಮತ್ತು ತಾರತಮ್ಯರಹಿತ ನೀತಿ ರೂಪಿಸುವಂತೆ ಆಗ್ರಹಿಸಿ ರಾಜ್ಯದ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಗಣಿ ಅವಲಂಬಿತರು ಮಂಗಳವಾರ ಇಲ್ಲಿನ ಜಂತರ್‌– ಮಂತರ್‌ ಬಳಿ ಪ್ರತಿಭಟನೆ ನಡೆಸಿದರು.

ಗಣಿ ಅವಲಂಬಿತರ ವೇದಿಕೆ ಅಡಿ ನಡೆದ ಈ ಪ್ರತಿಭಟನೆಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಅವಲಂಬಿಸಿರುವ ನೂರಾರು ಜನ ಭಾಗವಹಿಸಿದ್ದರು.

ಕಬ್ಬಿಣದ ಅದಿರಿನ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಸ್ಥಳೀಯರ ಲಾರಿಗಳಿಗೂ ಅದಿರು ಸಾಗಣೆಗೆ ನಿರಂತರ ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಕೋರಿದರು.

ಗಣಿ ಪ್ರದೇಶ ಒಳಗೊಂಡಿರುವ ಜಿಲ್ಲೆಗಳು ಬರಪೀಡಿತವಾಗಿವೆ. ಅಲ್ಲಿನ ಶೇ 25ರಷ್ಟು ಜನ ಕೃಷಿಯಲ್ಲಿ ತೊಡಗಿದ್ದರೆ, ಶೇ 75ರಷ್ಟು ಜನ ಗಣಿಗಾರಿಕೆಗೆ ಸಂಬಂಧಿಸಿದ ವಿವಿಧ ವಲಯಗಳನ್ನು ಅವಲಂಬಿಸಿದ್ದಾರೆ. ಆದರೆ, ಗಣಿಗಾರಿಕೆ ಕ್ಷೇತ್ರದಲ್ಲಿನ ಅನಿಶ್ಚಿತತೆಯಿಂದಾಗಿ ಅನೇಕರು ನಿರುದ್ಯೋಗಿಗಳಾಗಿದ್ದಾರೆ ಎಂದು ವೇದಿಕೆಯ ವಕ್ತಾರ ಎಸ್‌.ರಾಜಕುಮಾರ್‌ ಅವರು ದೂರಿದರು.

ಸುಪ್ರೀಂ ಕೋರ್ಟ್‌ ಗಣಿಗಾರಿಕೆಗೆ ಅನುಮತಿ ನಿಡಿದ್ದರೂ ಇ–ಹರಾಜು ಪ್ರಕ್ರಿಯೆ, ಅದಿರು ಉತ್ಪಾದನೆಗೆ ಹೇರಿರುವ ಮಿತಿ ಮತ್ತು ಇತರ ನಿರ್ಬಂಧಗಳಿಂದಾಗಿ ಅವಲಂಬಿತರಿಗೆ ಸಾಕಷ್ಟು ಸಮಸ್ಯೆ ತಲೆದೋರಿದೆ. ಕೇಂದ್ರ ಸರ್ಕಾರ, ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT