ಮಿಜೋರಾಂ: ಕಣ ಸ್ವಚ್ಛತೆಗೆ ಜನ ವೇದಿಕೆ ಪಣ

7
ಚುನಾವಣಾ ಅಕ್ರಮ ತಡೆಗೆ ಸಮಾಜವೇ ಮುಂದಾಳು: ಮಿಜೋರಾಂನ ಆದರ್ಶ

ಮಿಜೋರಾಂ: ಕಣ ಸ್ವಚ್ಛತೆಗೆ ಜನ ವೇದಿಕೆ ಪಣ

Published:
Updated:

ಗುವಾಹಟಿ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಮಾಡುವ ಖರ್ಚಿಗೆ ನಿಯಂತ್ರಣ ಇರಬೇಕು, ಪ್ರಚಾರ ಪರಿಸರ ಸ್ನೇಹಿಯಾಗಿರಬೇಕು, ಹಣ, ತೋಳ್ಬಲ ಪ್ರದರ್ಶನ ಇಲ್ಲದೆಯೇ ಜನತಂತ್ರದ ಹಬ್ಬ ನಡೆಯಬೇಕು ಎಂಬುದು ಚುನಾವಣಾ ಆಯೋಗದ ಬಯಕೆ. ಅದಕ್ಕಾಗಿ ಆಯೋಗ ಸಾಕಷ್ಟು ಕೆಲಸ ಮಾಡುತ್ತಿದೆ. ಇದೇ 28ರಂದು ಮತದಾನ ನಡೆಯಲಿರುವ ಪುಟ್ಟ ರಾಜ್ಯ ಮಿಜೋರಾಂ ಈ ನಿಟ್ಟಿನಲ್ಲಿ ಗಮನಾರ್ಹವಾದ ಹೆಜ್ಜೆ ಇಟ್ಟಿದೆ.

ಇಲ್ಲಿನ ಪ್ರಭಾವಿ ಚರ್ಚುಗಳು ಮತ್ತು ಎನ್‌ಜಿಒಗಳು ಜತೆಯಾಗಿ ಮಿಜೋರಾಂ ಜನ ವೇದಿಕೆ (ಎಂಪಿಎಫ್‌) ಅನ್ನು 2006ರಲ್ಲಿ ರೂಪಿಸಿವೆ. ಈ ವೇದಿಕೆಯು ಎಲ್ಲ ರಾಜಕೀಯ ಪಕ್ಷಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ಅಭ್ಯರ್ಥಿಗಳು ಹಣದ ಆಮಿಷ ಒಡ್ಡಬಾರದು, ಧ್ವನಿವರ್ಧಕ ಬಳಸಬಾರದು, ಮೆರವಣಿಗೆ ಮಾಡಬಾರದು, ಅಷ್ಟೇ ಅಲ್ಲ ಮತದಾರರಿಗೆ ತಿಂಡಿ ತಿನಿಸು ಕೊಟ್ಟು ಓಲೈಸುವುದಕ್ಕೂ ಅವಕಾಶ ಇಲ್ಲ. 

2018ರಲ್ಲಿ ಈ ಒಪ್ಪಂದವನ್ನು ನವೀಕರಿಸಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ನಕಾರಾತ್ಮಕ ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಹೊಸ ಒಪ್ಪಂದದಲ್ಲಿ ಸೇರಿಸಲಾಗಿದೆ. ಹಾಗೆಯೇ, ಪ್ರಚಾರದ ಭಾಗವಾಗಿ ಮನರಂಜನಾ ಕಾರ್ಯಕ್ರಮಗಳು ಮತ್ತು ಪ್ರಸಿದ್ಧ ವ್ಯಕ್ತಿಗಳನ್ನು ಪ್ರಚಾರಕ್ಕೆ ಕರೆಸುವುದರ ಮೇಲೆಯೂ ನಿಷೇಧ ಹೇರಲಾಗಿದೆ. 

‘ಹಣ ಹಂಚುವುದನ್ನು ತಡೆಯಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಅಭ್ಯರ್ಥಿಯು ಮನೆ ಮನೆ ಪ್ರಚಾರ ಬಯಸಿದರೆ ಅವರೊಂದಿಗೆ ನಮ್ಮ ಪ್ರತಿನಿಧಿಗಳು ಹೋಗುತ್ತಾರೆ. ಯಾವುದೇ ಅಭ್ಯರ್ಥಿ ನಿಯಮ ಉಲ್ಲಂಘಿಸಿದರೆ ಅದನ್ನು ಸಾರ್ವಜನಿಕ ಸಭೆ ನಡೆಸಿ ಘೋಷಿಸಲಾಗುತ್ತದೆ. ಇದು ಅವರ ಗೆಲುವಿನ ಸಾಧ್ಯತೆ ಮೇಲೆ ಪರಿಣಾಮ ಬೀರುತ್ತದೆ. ಚುನಾವಣಾ ಆಯೋಗದ ಜತೆಗೂ ನಿಕಟವಾಗಿ ಕೆಲಸ ಮಾಡಲಾಗುತ್ತಿದೆ. ಯಾವುದೇ ನಿಯಮ ಉಲ್ಲಂಘನೆಯಾದ ತಕ್ಷಣ ಆಯೋಗಕ್ಕೆ ಮಾಹಿತಿ ನೀಡುತ್ತೇವೆ’ ಎಂದು ಎಂಪಿಎಫ್‌ನ ಪ್ರಧಾನ ಕಾರ್ಯದರ್ಶಿ ಡಾ. ಆರ್‌. ಲಾಲ್‌ಬಿಯಾಕ್‌ಮಾವಿಯಾ ತಿಳಿಸಿದ್ದಾರೆ. 

ಈ ಬಾರಿ ಮಿಜೋರಾಂನಲ್ಲಿ ತುರುಸಿನ ಸ್ಪರ್ಧೆ ಇದೆ. ಈವರೆಗೆ ಒಂದು ಕ್ಷೇತ್ರದಲ್ಲಿಯೂ ಗೆದ್ದಿಲ್ಲದ ಬಿಜೆಪಿ ಎಲ್ಲ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಕ್ರೈಸ್ತ ವಿರೋಧಿ ಎಂಬುದು ಕಾಂಗ್ರೆಸ್‌ ಪ್ರಚಾರದ ಪ್ರಮುಖ ಅಂಶ. ಮಿಜೋರಾಂ ಕ್ರೈಸ್ತರೇ ಬಹುಸಂಖ್ಯೆಯಲ್ಲಿರುವ ರಾಜ್ಯವಾಗಿರುವುದರಿಂದ ಈ ರೀತಿಯ ಪ್ರಚಾರ ಫಲ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. 

ಮತದಾರರನ್ನು ಸೆಳೆಯಲು ಬಿಜೆಪಿ ಹಣ ನೀಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ, ಬಿಜೆಪಿ ಇದನ್ನು ಅಲ್ಲಗಳೆದಿದೆ. 

**

ಏನೇನು ನಿಯಮಗಳು?

* ಮತದಾನ ಕೇಂದ್ರಕ್ಕೆ ಅಥವಾ ಪ್ರಚಾರ ಕಾರ್ಯಕ್ರಮಕ್ಕೆ ಬರಲು ಮತದಾರರಿಗೆ ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡುವಂತಿಲ್ಲ

* ನಗದು ಅಥವಾ ವಸ್ತು ರೂಪದ ಉಡುಗೊರೆ ಕೊಡುವಂತಿಲ್ಲ

* ಅಭ್ಯರ್ಥಿಗಳು ಮತ್ತು ಪಕ್ಷಗಳ ಬ್ಯಾನರ್‌, ಭಿತ್ತಿಪತ್ರಗಳ ಸಂಖ್ಯೆಗೆ ಮಿತಿ ಇದೆ

* ಅಭ್ಯರ್ಥಿ ಆಯ್ಕೆ, ಚುನಾವಣಾ ವೆಚ್ಚ, ಪ್ರಚಾರ, ಸುರಕ್ಷತೆ, ಪ್ರಣಾಳಿಕೆಗಳ ಬಗ್ಗೆಯೂ ನಿಯಮ ರೂಪಿಸಲಾಗಿದೆ

* ಎಂಪಿಎಫ್‌ ನಿಯಮಗಳು ಪಕ್ಷೇತರ ಅಭ್ಯರ್ಥಿಗಳಿಗೂ ಅನ್ವಯ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !