‘ಪ್ರಗತಿ ವೇಗಕ್ಕೆ ಮಮತಾ ತಡೆ’

ಸೋಮವಾರ, ಏಪ್ರಿಲ್ 22, 2019
31 °C
ಟಿಎಂಸಿ, ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

‘ಪ್ರಗತಿ ವೇಗಕ್ಕೆ ಮಮತಾ ತಡೆ’

Published:
Updated:

ಕೋಲ್ಕತ್ತ: ಸಿಲಿಗುರಿ ಮತ್ತು ಕೋಲ್ಕತ್ತದಲ್ಲಿ ರ್‍ಯಾಲಿ ಆಯೋಜಿಸುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿದ ಮೋದಿ, ಎರಡೂ ಕಡೆ ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು.

‘ಅಭಿವೃದ್ಧಿಯ ವೇಗಕ್ಕೆ ಮಮತಾ ತಡೆ ಒಡ್ಡುತ್ತಿದ್ದಾರೆ ಎಂದ ಮೋದಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಪಶ್ಚಿಮ ಬಂಗಾಳದಲ್ಲಿ ಸರಿಯಾಗಿ ಜಾರಿಯಾಗದಿರಲು ಮುಖ್ಯಮಂತ್ರಿಯೇ ಕಾರಣ’ ಎಂದರು.

‘ಇತರ ರಾಜ್ಯಗಳಲ್ಲಿ ಯಾವ ವೇಗದಲ್ಲಿ ಕೆಲಸ ಮಾಡಿರುವೆನೋ ಅದೇ ವೇಗದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಅಭಿವೃದ್ಧಿಯ ವೇಗಕ್ಕೆ ತಡೆಯೊಡ್ಡುವ ವ್ಯವಸ್ಥೆಯೊಂದು ಈ ರಾಜ್ಯದಲ್ಲಿದೆ. ಇಲ್ಲಿಯ ಜನರು ಅದನ್ನು ‘ದೀದಿ’ ಎಂದು ಕರೆಯುತ್ತಾರೆ. ರಾಜ್ಯದಲ್ಲಿ ಟಿಎಂಸಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಜನರ ಬಡತನದ ಮೇಲೆ ರಾಜಕಾರಣ ಮಾಡುತ್ತಿವೆ ಎಂದು ಮೋದಿ ಟೀಕಿಸಿದರು.

‘ಬಡತನದ ರಾಜಕಾರಣ ಮಾಡುವುದರಲ್ಲಿ ‘ದೀದಿ’ ಹೆಸರುವಾಸಿ. ಬಡತನ ಇಲ್ಲವಾದರೆ ದೀದಿಯ ರಾಜಕೀಯ ಕೊನೆಯಾಗುತ್ತದೆ. ಆ ಕಾರಣಕ್ಕೆ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಅವರು ತಡೆ ಒಡ್ಡುತ್ತಿದ್ದಾರೆ. ಈ ಬಾರಿ ಎಲ್ಲರೂ ಜೊತೆಯಾಗಿ ಚೌಕೀದಾರನ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.

‘ರಾಷ್ಟ್ರೀಯ ಪೌರತ್ವ ನೋಂದಣಿ ‌ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ವಲಸೆ ಬಂದವರು ಭಯಪಡುವ ಅಗತ್ಯವಿಲ್ಲ. ಆದರೆ ನೆನಪಿಡಿ, ನಾನು ಮೋದಿ, ಒಬ್ಬನೇ ಒಬ್ಬ ನುಸುಳುಕೋರನನ್ನೂ ಇಲ್ಲಿರಲು ಬಿಡುವುದಿಲ್ಲ’ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡುತ್ತಾ, ‘ಆ ಪಕ್ಷ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತಳೆದಿದೆ’ ಎಂದು ಆರೋಪಿಸಿದರು. 

ಅವಧಿ ಮುಗಿದ ಪಿಎಂ: ಮಮತಾ

ತಮ್ಮ ವಿರುದ್ಧ ಮೋದಿ ಮಾಡಿರುವ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮಮತಾ, ಮೋದಿ ಅವರನ್ನು ‘ಅವಧಿ ಮುಗಿದ ಪ್ರಧಾನಿ’ ಎಂದಿದ್ದಾರೆ.

ಕೂಚ್‌ಬಿಹಾರ್‌ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ರಾಜ್ಯದ ಜನರಿಗಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ರೈತರ ಆದಾಯ ಮೂರು ಪಟ್ಟು ಹೆಚ್ಚಿದೆ. ಆದರೆ ಮೋದಿ ಅಧಿಕಾರಾವಧಿಯಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

'ಕಾಂಗ್ರೆಸ್‌ ಪ್ರಣಾಳಿಕೆ ಸುಳ್ಳುಗಳ ಕಂತೆ'

ಪಸಿಘಾಟ್‌ (ಅರುಣಾಚಲ ಪ್ರದೇಶ) (ಪಿಟಿಐ): ‘ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಬೂಟಾಟಿಕೆಯ ಕಡತ, ಸುಳ್ಳುಗಳ ಕಂತೆ’ ಎಂದು ಮೋದಿ ಟೀಕಿಸಿದ್ದಾರೆ.

ಭರವಸೆ ಈಡೇರಿಸಿಲ್ಲ: ರಾಹುಲ್‌

ಅರುಣಾಚಲ ಪ್ರದೇಶದಲ್ಲಿ ಮೋದಿ ಮಾಡಿದ್ದ ಭಾಷಣಕ್ಕೆ ಎರಡು ಗಂಟೆಗಳ ಬಳಿಕ ನಾಗಾಲ್ಯಾಂಡ್‌ನ ರ್‍ಯಾಲಿಯೊಂದರಲ್ಲಿ ಪ್ರತಿಕ್ರಿಯೆ ನೀಡಿದ ರಾಹುಲ್‌, ‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಪ್ರತಿ ಬ್ಯಾಂಕ್‌ ಖಾತೆಗೆ 
₹ 15 ಲಕ್ಷ ವರ್ಗಾವಣೆಯಂಥ ಭರವಸೆಗಳನ್ನು ಈಡೇರಿಸಲು ವಿಫಲರಾದ ಮೋದಿ, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಮೂಲಕ ಉದ್ಯಮಿ ಅನಿಲ್‌ ಅಂಬಾನಿಗೆ ₹30 ಸಾವಿರ ಕೋಟಿ ಕೊಟ್ಟಿದ್ದಾರೆ’ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !