ಒಡಿಶಾದ ಪುರಿಯಿಂದ ಸ್ಪರ್ಧಿಸ್ತಾರಾ ಮೋದಿ: ಏನಿದು ಬಿಜೆಪಿ ಲೆಕ್ಕಾಚಾರ

7

ಒಡಿಶಾದ ಪುರಿಯಿಂದ ಸ್ಪರ್ಧಿಸ್ತಾರಾ ಮೋದಿ: ಏನಿದು ಬಿಜೆಪಿ ಲೆಕ್ಕಾಚಾರ

Published:
Updated:

2019ರ ಸಾರ್ವತ್ರಿಕ ಚುನಾವಣೆ ಬಿಸಿ ಒಂದು ವರ್ಷದ ಮೊದಲೇ ರಾಷ್ಟ್ರಕ್ಕೆ ತಟ್ಟಿದೆ. ಬಿಜೆಪಿಯೇ ಗದ್ದುಗೆ ಏರುತ್ತಾ? ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತವೆಯೇ? ಅಥವಾ ಇವೆರಡರ ಬದಲಿಗೆ ಉಳಿದೆಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ತೃತೀಯ ರಂಗ ರೂಪುಗೊಳ್ಳಬಹುದೆ? ಹೀಗೆ ರಾಷ್ಟ್ರ ರಾಜಕಾರಣದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಬಿಜೆಪಿಯ ತಾರಾ ಪ್ರಚಾರಕ ಮತ್ತು ಪಕ್ಷದ ಮೇಲೆ ಬಿಗಿ ಹಿಡಿತ ಹೊಂದಿರುವ ನಾಯಕ ನರೇಂದ್ರ ಮೋದಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಚರ್ಚೆಯೂ ಚಾಲ್ತಿಗೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಒಲವು ಒಡಿಶಾ ರಾಜ್ಯದ ಪುರಿ ಲೋಕಸಭಾ ಕ್ಷೇತ್ರದ ಮೇಲೆ ಇದೆ ಎಂಬ ಮಾತು ಚಾಲ್ತಿಗೆ ಬಂದಿದೆ. 2017ರ ಏಪ್ರಿಲ್‌ನಲ್ಲಿ ಭುವನೇಶ್ವರದಲ್ಲಿ ಬಿಜೆಪಿ ನಡೆಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಮೊದಲ ಬಾರಿಗೆ ಇಂಥ ಅನುಮಾನಗಳಿಗೆ ಇಂಬು ನೀಡಿತು. ‘ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದಿಂದ ಸ್ಪರ್ಧಿಸಲು ಒಲವು ತೋರುತ್ತಿದ್ದಾರೆಯೇ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸ್ವತಃ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಯಾವೊಂದು ಉತ್ತರವನ್ನೂ ಕೊಟ್ಟಿರಲಿಲ್ಲ.

ಮೋದಿ ಅವರು 2015 ರ ಏಪ್ರಿಲ್‌ನಲ್ಲಿ ರೌರ್‌ಕೇಲಾ, 2016ರ ಏಪ್ರಿಲ್‌ನಲ್ಲಿ ಪುರಿ, ಪರದೀಪ್, ಬರ್ಗರ್‌, 2016ರ ಜೂನ್‌ನಲ್ಲಿ ಬಲೇಶ್ವರ್, 2017ರ ಏಪ್ರಿಲ್‌ನಲ್ಲಿ ಭುವನೇಶ್ವರ್, 2018ರ ಮೇ ತಿಂಗಳಲ್ಲಿ ಕಟಕ್‌ಗೆ ನಿರಂತರವಾಗಿ ಭೇಟಿ ನೀಡಿದ್ದರು. ಈ ಬೆಳವಣಿಗೆ ಗಮನಿಸಿದರೆ ಮೋದಿ ಅವರು 2019ರ ಚುನಾವಣೆಯಲ್ಲಿ ಒಡಿಶಾದಿಂದ ಸ್ಪರ್ಧಿಸಲು ಮೊದಲಿನಿಂದಲೂ ಸಜ್ಜಾಗುತ್ತಿದ್ದರಾ? ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ.

ಒಡಿಶಾಗೆ ಕೇವಲ ನರೇಂದ್ರ ಮೋದಿಯವರಷ್ಟೇ ಬಂದು ಹೋಗುತ್ತಿರಲಿಲ್ಲ. ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರೂ ಆಗಾಗ್ಗೆ ಬಂದುಹೋಗುತ್ತಿದ್ದರು. ಒಡಿಶಾದಲ್ಲಿ ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಭಾಗಶ: ಯಶಸ್ಸು ಗಳಿಸಿತ್ತು. ತ್ರಿಪುರದಲ್ಲಿನ ಜಯಮಾಲೆ ಒಡಿಶಾದಲ್ಲಿ ಗೆಲ್ಲಬಹುದು ಎನ್ನುವ ಬಿಜೆಪಿಯ ಆಸೆಗೆ ಬಲ ನೀಡಿದವು.

ಲೋಕಸಭೆ ಚುನಾವಣೆ ವಿಚಾರದಲ್ಲಿ ಅರಿವಿನ ಹೆಜ್ಜೆ ಇಡುತ್ತಿರುವ ಬಿಜೆಪಿ ತನ್ನ ತೆಕ್ಕೆಯಲ್ಲಿರುವ ರಾಜ್ಯಗಳನ್ನು ಬಿಟ್ಟು ಒಡಿಶಾದ ಮೇಲೆ ಕಣ್ಣಿಟ್ಟಿದೆ. ಜತೆಗೆ ನೆರೆ ರಾಜ್ಯಗಳಾದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣದ ಕಡೆ ಸಂಪೂರ್ಣ ಗಮನ ಹರಿಸುತ್ತಿದೆ. ಏಕೆಂದರೆ ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 105 ಲೋಕಸಭಾ ಕ್ಷೇತ್ರಗಳಿವೆ. ಒಡಿಶಾದಲ್ಲಿ ಮೋದಿಮೋಡಿ ಕೆಲಸ ಮಾಡಿದರೆ ಅಕ್ಕಪಕ್ಕದಲ್ಲಿರುವ ಉಳಿದ ರಾಜ್ಯಗಳಲ್ಲಿಯೂ ಪ್ರಭಾವ ವಿಸ್ತರಿಸುವುದು ಸುಲಭವಾಗುತ್ತದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಈ ನಾಲ್ಕೂ ರಾಜ್ಯಗಳಿಂದ ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು.

ಬಿಜೆಪಿಗೆ ಒಡಿಶಾ ಮುಖ್ಯ

ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಈ ನಾಲ್ಕು ರಾಜ್ಯಗಳ ಮೇಲೆ ಬಿಜೆಪಿ ದೃಷ್ಟಿ ನೆಟ್ಟಿದೆ. ಆದರೆ ಈ ರಾಜ್ಯಗಳಲ್ಲಿ ಜಯ ಗಳಿಸುವುದು ಮೋದಿ ಅವರ ಪಾಲಿಗೆ ಹೂವಿನ ಹಾದಿ ಆಗಿಲ್ಲ. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೋದಿಗೆ ಭಾಷೆಯ ತೊಡಕು ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಆಡಳಿತರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ದೊಡ್ಡ ಮಟ್ಟದ ಸವಾಲು ಒಡ್ಡಲಿದೆ. ಇವೆಲ್ಲವನ್ನೂ ಮೀರಿ ಬಿಜೆಪಿ ಪ್ರಾಬಲ್ಯ ಮೆರೆದರೆ ದಕ್ಷಿಣ ಭಾರತದ ಜೊತೆಗೆ ಪೂರ್ವ ಭಾರತವೂ ಬಿಜೆಪಿಯ ತೆಕ್ಕೆಗೆ ಬಂದಂತೆ ಆಗುತ್ತದೆ.

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಒಡಿಶಾ ಮಾತ್ರ ಆಶಾದಾಯಕ ರಾಜ್ಯ ಎನಿಸುತ್ತದೆ. ಏಕೆಂದರೆ ಇಲ್ಲಿನ ಬಿಜೆಡಿ (ಬಿಜು ಜನತಾದಳ) ಪಕ್ಷದೊಂದಿಗೆ ಬಿಜೆಪಿ ಎರಡು ಬಾರಿ ಮೈತ್ರಿ ಸಾಧಿಸಿತ್ತು. ಅಲ್ಲದೇ ಕಳೆದ ಬಾರಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯೂ ಬಿಜೆಡಿಯಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ಪಡೆದಿತ್ತು. ನೋಟು ಅಪಮೌಲ್ಯೀಕರಣ ಹಾಗೂ ಎನ್‌ಆರ್‌ಸಿಯಂಥ ಸಮಸ್ಯೆಗಳ ನಡುವೆಯೂ ಬಿಜೆಪಿ ಸಾಧನೆ ಗಮನಾರ್ಹ ಎನಿಸುವಂತಿತ್ತು.

ಆದರೆ ನವೀನ್‌ ಪಟ್ನಾಯಕ್ ವಿರುದ್ಧದ ಸೆಣೆಸಾಟ ಅಷ್ಟು ಸುಲಭವಲ್ಲ. ಅವರ ತಂತ್ರ ಮತ್ತು ಜನಪ್ರಿಯತೆಯನ್ನು ಮೀರಿದ ಸಾಧನೆ ಮಾಡಲು ಪ್ರಬಲ ಅಭ್ಯರ್ಥಿಯ ಅವಶ್ಯಕತೆ ಇದೆ. ಹಾಗಾಗಿ ಬಿಜೆಪಿಯು 2019ರ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಅವರ ಗೆಲುವಿನ ಓಟಕ್ಕೆ ತಡೆಹಾಕಲು ಪ್ರಧಾನಿ ಮೋದಿ ಅವರು ಒಡಿಶಾದಿಂದ ಚುನಾವಣೆ ಎದುರಿಸಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಂತೆ ಇದೆ. ಒಡಿಶಾ ರಾಜ್ಯದಲ್ಲಿ ಬಿಜೆಪಿಗೆ ಕರಾವಳಿ ಮತ್ತು ಪಶ್ಚಿಮ ಒಡಿಶಾಗಳಲ್ಲಿ ತುಸು ಆಶಾಭಾವನೆ ಇದೆ. ಮೋದಿ ಇಲ್ಲಿ ಸಂಸದರಾಗಿ ಹೊರಹೊಮ್ಮುವುದಕ್ಕಿಂತ ರಾಜ್ಯ ವ್ಯಾಪ್ತಿ ಪ್ರಾಬಲ್ಯ ಸಾಧಿಸುವುದು ದೊಡ್ಡ ಸವಾಲು ಎನಿಸಿದೆ.

ಬಿಜೆಡಿ ಜೊತೆಗೆ ಮೈತ್ರಿ ಇದ್ದ ಕಾಲದಲ್ಲಿ ಬಿಜೆಪಿಯು ಪಶ್ಚಿಮ ಒಡಿಶಾದಲ್ಲಿ ಕೆಲ ಸ್ಥಾನಗಳನ್ನು ಗೆಲ್ಲುತ್ತಿತ್ತು. ಈಗ ಒಂದುವೇಳೆ ಮೋದಿ ಇದೇ ಭಾಗದಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿದರೆ ಪಶ್ಚಿಮ ಒಡಿಶಾದ ಜೊತೆಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಜಯದ ಮುದ್ರೆ ಒತ್ತಬಹುದು. ಇದು ಸಾಧ್ಯವಾದರೆ ಕಾಂಗ್ರೆಸ್ ಅದನ್ನು ಎದುರಿಸುವುದು ಕಷ್ಟ. ಬಿಜೆಡಿ ರಾಜ್ಯದ ಇತರ ಕ್ಷೇತ್ರಗಳಲ್ಲಿ ನಿರಾಯಾಸ ಜಯ ಗಳಿಸಲಿದೆ. ಲೋಕಸಭೆ ಚುನಾವಣೆಯ ಜೊತೆಜೊತೆಗೆ ಅಥವಾ ಆಜುಬಾಜಿನಲ್ಲಿ ವಿಧಾನಸಭೆ ಚುನಾವಣೆಯೂ ನಡೆದರೆ ನವೀನ್ ಪಟ್ನಾಯಕ್ ಏಕಾಂಗಿಯಾಗಿ ಅಥವಾ ಬಿಜೆಪಿ ಜೊತೆಗೆ ಮೈತ್ರಿಯೊಂದಿಗೆ ಅಧಿಕಾರ ಹಿಡಿಯಬಲ್ಲರು.

ಬಿಜೆಪಿ ಮತ್ತು ಬಿಜೆಡಿ ಚುನಾವಣಾ ಪೂರ್ವ ಮೈತ್ರಿಗೆ  ಒಲವು ತೋರದಿದ್ದರೂ ಈ ಎರಡು ಪಕ್ಷಗಳ ನಡುವಿನ ಬಾಂಧವ್ಯ ಹಳಸುವುದಿಲ್ಲ. ಅಗತ್ಯಬಿದ್ದರೆ ಬಿಜೆಡಿ ಕೇಂದ್ರದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಒಂದು ವೇಳೆ ಚುನಾವಣೆಗೆ ಮೊದಲೇ ಮೈತ್ರಿ ಮಾಡಿಕೊಂಡರೆ, ಎರಡೂ ಪಕ್ಷಗಳ ಟಿಕೆಟ್ ವಂಚಿತರು ಕಾಂಗ್ರೆಸ್‌ನತ್ತ ಜಾರುವ ಸಾಧ್ಯತೆ ಇರುವುದರಿಂದ ಚುನಾವಣೆ ನಂತರದ ಮಾತುಕತೆಗೆ ಎರಡೂ ಪಕ್ಷಗಳು ಒಲವು ತೋರುತ್ತಿವೆ.

ಆದರೆ ಬಿಜೆಪಿಯು ಇದೀಗ ಒಡಿಶಾದ ಪಶ್ಚಿಮ ಭಾಗದ ಬದಲು ಕರಾವಳಿಯತ್ತ ಕಣ್ಣು ನೆಟ್ಟಿದೆ. ಬಿಜೆಡಿಯನ್ನು ಮಣಿಸಿ, ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಆಕಾಂಕ್ಷೆ ಬಿಜೆಪಿ ಪಾಳಯದಲ್ಲಿದೆ. ಪುರಿ, ಭುವನೇಶ್ವರ ಅಥವಾ ಕಟಕ್ ಲೋಕಸಭಾ ಕ್ಷೇತ್ರಗಳಿಂದ ಮೋದಿ ಅವರನ್ನು ಕಣಕ್ಕಿಳಿಸುವ ತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ. ಇದು ಕಾರ್ಯರೂಪಕ್ಕೆ ಬಂದರೆ ಬಿಜೆಡಿಯೊಂದಿಗೆ ಮೈತ್ರಿಗೆ ಧಕ್ಕೆಯೊದಗುತ್ತದೆ. ಬಿಜೆಡಿ ಕಾಂಗ್ರೆಸ್‌ಗೆ ಹತ್ತಿರವಾಗುವ ಸಾಧ್ಯತೆ ಇರುತ್ತದೆ. ಒಂದುವೇಳೆ ಬಿಜೆಪಿ ತನ್ನ ಲೆಕ್ಕಾಚಾರದಂತೆ ಕರಾವಳಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೆ ಕೇಂದ್ರದಲ್ಲಿಯೂ ಬಿಜೆಡಿಯೊಂದಿಗೆ ಮೈತ್ರಿಯ ಸಾಧ್ಯತೆ ದೂರವಾಗುತ್ತದೆ.

ಪುರಿ ಲೋಕಸಭಾ ಕ್ಷೇತ್ರ ಮತ್ತು ಮೋದಿ

ಮೋದಿ ಅವರ ಸ್ಪರ್ಧೆಗೆ ಒಡಿಶಾದ ಕರಾವಳಿ ಭಾಗದಲ್ಲಿರುವ ಪುರಿ ಲೋಕಸಭಾ ಕ್ಷೇತ್ರ ಸೂಕ್ತ ಎನ್ನುವ ಮಾತುಗಳ ಹಿಂದೆ ಇರುವ ಲೆಕ್ಕಾಚಾರವನ್ನು ಹೀಗೆ ವಿವರಿಸಬಹುದು. ಹೀಗೆ ಮಾಡುವುದರಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿಗೆ ಧಾರ್ಮಿಕ ಅಸ್ತ್ರವೊಂದು ಸಿಕ್ಕಂತೆ ಆಗುತ್ತದೆ. ಒಂದೆಡೆ ಕಾಶಿ ವಿಶ್ವನಾಥನ ಸನ್ನಿಧಾನವಿರುವ ವಾರಣಾಸಿ ಮತ್ತೊಂದೆಡೆ ಜಗನ್ನಾಥ ದೇವರ ನೆಲೆ ಎನಿಸಿದ ಪುರಿ. ಮೋದಿ ಅವರು ದೇಶ ಬೆಸೆಯಲು ಧರ್ಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಬಿಂಬಿಸಲು ಸಾಧ್ಯವಾದೀತು ಎನ್ನುವ ಲೆಕ್ಕಾಚಾರ ಚಾಲ್ತಿಯಲ್ಲಿದೆ.

ಪುರಿ ಕಾರ್ಯತಂತ್ರವು ಒಂದು ಗಂಭೀರ ಸಮಸ್ಯೆ ಎದುರಿಸುತ್ತಿದೆ. ಬಿಜೆಪಿ 1991, 1996, 1998, 1999, 2009ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಸಾಧಿಸಿದೆ. ಆದರೆ ಪುರಿ ಬಿಜೆಪಿಗೆ ಹೊಸ ಕ್ಷೇತ್ರ. 1989ರಿಂದ ಈವರೆಗೆ ಬಿಜೆಡಿ ಇಲ್ಲಿ ಸತತ ಜಯ ದಾಖಲಿಸಿದೆ.

ಮಾಜಿ ಮುಖ್ಯಮಂತ್ರಿ ಜೆಬಿ ಪಟ್ನಾಯಕ್ ಅವರು ಮಾಜಿ ಪ್ರಧಾನಿ ನರಸಿಂಹ ರಾವ್ ಅವರನ್ನು 1990ರಲ್ಲಿ ಒಡಿಶಾದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಆಗ ರಾವ್ ಗೆದ್ದಿದ್ದು ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಬ್ರಹ್ಮಾಪುರ ಲೋಕಸಭಾ ಕ್ಷೇತ್ರದಿಂದ. ಪುರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಚಿಲಿಕ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯು 2014ರಲ್ಲಿ ಗೆದ್ದಿತ್ತು. ರಾಣಪುರ ವಿಧಾನಸಭಾ ಕ್ಷೇತ್ರದಲ್ಲೂ ಜಯದ ಸಿಹಿ ಸವಿದಿತ್ತು. ಆದರೆ ಇನ್ನೆರಡು ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿತ್ತು. ಇದರಿಂದ ಬಿಜೆಪಿ ಜಯದ ಅಸ್ತಿತ್ವವನ್ನು ಭಾಗಶಃ ಮಾತ್ರ ಮುಟ್ಟಿದಂತಾಗಿದೆ.

ಮೋದಿ ಅವರು ಪುರಿಯಲ್ಲಿ  ಅಭ್ಯರ್ಥಿಯಾಗಿ ನಿಂತಲ್ಲಿ ಇವರನ್ನು ಎದುರಿಸಲು ಬಿಜೆಡಿ ತನ್ನ ಸಂಘಟನೆ ಬಲಪಡಿಸಿಕೊಳ್ಳುವ ಆಲೋಚನೆ ಮಾಡುತ್ತದೆ. ಹೊಸಬರನ್ನು ಅಭ್ಯರ್ಥಿಯಾಗಿ ಘೋಷಿಸಬಹುದು. ಆಡಳಿತ ವಿರೋಧಿ ಅಲೆ, ಮಾಧ್ಯಮಗಳ ನಿರ್ವಹಣೆಗಾಗಿ ರಾಜ್ಯಸಭಾ ಸದಸ್ಯ ಸೌಮ್ಯ ರಂಜನ್ ಪಟ್ನಾಯಕ್ ಅವರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಬಹುದು. ಕಾಂಗ್ರೆಸ್‌ ಕಾರ್ಯಕರ್ತರ ಜೊತೆಗೂ ಸೌಮ್ಯ ರಂಜನ್ ಉತ್ತಮ ಸಂಬಂಧ ಹೊಂದಿದ್ದಾರೆ. ಚುನಾವಣೆಗಳ ರಣತಂತ್ರ ಹೆಣೆಯುವುದರಲ್ಲಿ ನಿಪುಣರೆನಿಸಿದ ಪ್ರಫುಲ್ಲ ಘಾಂಡಿಯಾ ಮತ್ತು ಪ್ರಸನ್ನ ಆಚಾರ್ಯ ಅವರನ್ನು ಬಿಜೆಡಿ ಪುರಿಯತ್ತ ಗಮನ ಹರಿಸಲು ಸೂಚಿಸಬಹುದು.

ಲೋಕಸಭೆ–ವಿಧಾನಸಭೆ ಚುನಾವಣೆಗಳು ಹಿಂದೆಮುಂದೆ ನಡೆಯುವ ಸಾಧ್ಯತೆ ಇರುವ ಒಡಿಶಾದಲ್ಲಿ ದಿನದಿಂದ ದಿನಕ್ಕೆ ರಾಜಕಾರಣ ಕಣ ರಂಗೇರುತ್ತಿದೆ. ಬಿಜೆಪಿಯ ನಡೆಯನ್ನು ಬಿಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕುತೂಹಲದಿಂದ ಎದುರು ನೋಡುತ್ತಿವೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !