ನಗರ ನಕ್ಸಲರಿಂದ ಬಸ್ತಾರ್‌ನಲ್ಲಿ ಶಾಂತಿಭಂಗ: ಮೋದಿ ಆರೋಪ

7

ನಗರ ನಕ್ಸಲರಿಂದ ಬಸ್ತಾರ್‌ನಲ್ಲಿ ಶಾಂತಿಭಂಗ: ಮೋದಿ ಆರೋಪ

Published:
Updated:

ಜಗದಾಲ್‌ಪುರ್ (ಛತ್ತೀಸಗಡ): ‘ಹವಾನಿಯಂತ್ರಿಕ ಕೊಠಡಿಗಳಲ್ಲಿ ಕುಳಿತಿರುವ, ವಿದೇಶಗಳಲ್ಲಿ ವಿದ್ಯಾಭ್ಯಾಸ ಪಡೆದಿರುವ, ಐಷಾರಾಮಿ ಕಾರುಗಳಲ್ಲಿ ತಿರುಗುವ ನಗರ ನಕ್ಸಲರು ಬಸ್ತಾರ್‌ ವಲಯದಲ್ಲಿ ಶಾಂತಿ ಕದಡುತ್ತಿದ್ದಾರೆ. ರಿಮೋಟ್ ಕಂಟ್ರೋಲ್‌ನಂತೆ ಕೆಲಸ ಮಾಡುತ್ತಾ ಆದಿವಾಸಿಗಳ ಬದುಕು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದರು.

ಬಸ್ತಾರ್ ಜಿಲ್ಲೆಯ ಕೇಂದ್ರ ಸ್ಥಾನ ಜಗದಾಲ್‌ಪುರದಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಶಾಂತಿಯ ದಾರಿಯಲ್ಲಿ ನಡೆಯುವುದು ನಮ್ಮ ಉದ್ದೇಶ. ನಿಮ್ಮ ಕನಸನ್ನು ನನಸು ಮಾಡಲು ನಮ್ಮ ಬೆವರು ಹರಿಸುತ್ತೇವೆ. ಅದೇ  ನಮ್ಮ ಪುರುಷಾರ್ಥ, ನಮ್ಮ ಸಂಕಲ್ಪ. ಬನ್ನಿ ಹೊಸ ಬಸ್ತಾರ್ ಕಟ್ಟೋಣ, ಛತ್ತೀಸಗಡ ಸುಧಾರಿಸೋಣ ಎಂದು ಭಾವುಕರಾಗಿ ನುಡಿದರು.

ಇಲ್ಲಿನ ಜನರ ಬದುಕನ್ನು ಜಗತ್ತಿನ ಎದುರು ತೆರೆದಿಡಲೆಂದು ಬಂದಿದ್ದ ದೂರದರ್ಶನದ ಪತ್ರಕರ್ತನನ್ನು ನಕ್ಸಲರು ಕೊಂದು ಹಾಕಿದರು. ಆತ ಮಾಡಿದ್ದ ತಪ್ಪಾದರೂ ಏನು? ಅವನೇನು ಹೆಗಲ ಮೇಲೆ ಬಂದೂಕು ಹೊತ್ತು ಬಂದಿರಲಿಲ್ಲ. ಅವನು ತಂದಿದ್ದುದು ಕ್ಯಾಮೆರಾ ಮಾತ್ರ. ನಿರ್ದೋಷಿಗಳ ಹತ್ಯೆ ಮಾಡುವ ಮಾವೋವಾದಿಗಳನ್ನು ಕಾಂಗ್ರೆಸ್‌ ನಾಯಕರು ಅಮಾಯಕರು ಎನ್ನುತ್ತಾರೆ. ಒಬ್ಬ ನಿರ್ದೋಷಿ ಪತ್ರಕರ್ತನ ಹತ್ಯೆ ಮಾಡಿದವರನ್ನು ಕ್ರಾಂತಿಕಾರಿ ಎಂದರೆ ಈ ದೇಶ ನಿಮ್ಮನ್ನು ಕ್ಷಮಿಸುವುದು ಅಂದುಕೊಂಡಿದ್ದೀರಾ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಬಸ್ತಾರ್‌ನಲ್ಲಿ ವಿಶ್ವವಿದ್ಯಾಲಯ ಆರಂಭವಾಗಬೇಕು. ಸುಕ್ಮಾ, ದಂತೇವಾಡ, ಬಿಜಾಪುರದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಸಿಗುವಂತೆ ಆಗಬೇಕು. ದೇಶದಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಸರ್ಕಾರಗಳು ಆದಿವಾಸಿಗಳ ಕಲ್ಯಾಣಕ್ಕಾಗಿ ಏನೂ ಮಾಡಲಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಆದಿವಾಸಿಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನೇ ರೂಪಿಸಿತು.  ಪ್ರತ್ಯೇಕ ಸಚಿವರನ್ನು ನೇಮಿಸಿ ಬಜೆಟ್ ಕೊಟ್ಟರು ಎಂದು ನೆನಪಿಸಿಕೊಂಡರು.

ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಕಾಂಗ್ರೆಸ್ ನಾಯಕರಿಗೆ ಆದಿವಾಸಿಗಳ ಸಮಸ್ಯೆ ಅರ್ಥವಾಗಲ್ಲ. ಆದಿವಾಸಿಗಳ ಬಗ್ಗೆ ಆಡಿಕೊಂಡು ನಗುತ್ತಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಆದಿವಾಸಿಗಳಿಗೆ ಅವಮಾನ ಆಗುತ್ತಲೇ ಇರುತ್ತದೆ ಎಂದು ಟೀಕಿಸಿದರು.

ಬಸ್ತಾರ್‌ನ ಹಲವು ಹಳ್ಳಿಗಳಿಗೆ ನನ್ನ ಗೆಳೆಯ ಬಲಿರಾಂ ಕಶ್ಯಪ್ ನನ್ನನ್ನು ಕರೆದೊಯ್ದಿದ್ದರು. ಇಲ್ಲಿನ ರೊಟ್ಟಿ ತಿಂದಿದ್ದೇನೆ ನಾನು. ಆದಿವಾಸಿಗಳ ಸಂಕಷ್ಟ ತಿಳಿದಿರುವ ಕಾರಣದಿಂದಲೇ ನಾವು ಪರಿಸರ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತಂದು ಆದಿವಾಸಿಗಳು ಅರಣ್ಯ ಉತ್ಪನ್ನ ಸಂಗ್ರಹಿಸಲು ಅನುಕೂಲ ಮಾಡಿಕೊಟ್ಟಿದ್ಧೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಇಂಥ ಬೆಳವಣಿಗೆಯನ್ನು ನಿರೀಕ್ಷಿಸಲು ಆಗುತ್ತಿರಲಿಲ್ಲ ಎಂದರು.

ನಮ್ಮ ಮಂತ್ರವೇ ‘ಎಲ್ಲರ ಜೊತೆಗೆ, ಎಲ್ಲರ ವಿಕಾಸ. ಆದರೆ ಸುಳ್ಳು ಹೇಳುವುದೇ ಅವರ ಮಂತ್ರವಾಗಿದೆ. 12ನೇ ತಾರೀಖು ಮತದಾನ ಇದೆ. ಚುನಾವಣೆಯನ್ನು ರಕ್ತರಂಜಿತ ಮಾಡಲು ಯತ್ನಿಸುವವರಿಗೆ ಮತ ಹಾಕಿ ಉತ್ತರ ಕೊಡಿ. ಪ್ರಜಾಪ್ರಭುತ್ವವೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲದು. ಬಂದೂಕಿನ ರಸ್ತೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ’ ಎಂದು ವಿವರಿಸಿದರು. 

ಛತ್ತೀಸಗಡದಲ್ಲಿ ನ.12 ಮತ್ತು ನ.20ರಂದು ಮತದಾನ ನಡೆಯಲಿದೆ. ಮಾವೋವಾದಿಗಳ ಪ್ರಭಾವ ಇರುವ ಬಸ್ತಾರ್‌ ಪ್ರದೇಶದಲ್ಲಿ ಮೊದಲ ಹಂತದಲ್ಲಿಯೇ ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !