ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ಮೌಲ್ವಿ ಹುದ್ದೆಗೆ ಸೇರಲು ‘ದಾರುಲ್ ಉಲೂಮ್‌’ವಿದ್ಯಾರ್ಥಿಗಳಿಗೆ ಆಹ್ವಾನ

ಇಸ್ಲಾಂ ಧಾರ್ಮಿಕ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್‌ಗೆ ಸೇನಾ ಡಿಜಿಪಿ ಭೇಟಿ
Last Updated 24 ಜೂನ್ 2019, 4:04 IST
ಅಕ್ಷರ ಗಾತ್ರ

ಲಖನೌ: ಸೇನಾಪಡೆಯ 150 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೇನೆಯ ಉನ್ನತಮಟ್ಟದ ಅಧಿಕಾರಿಯೊಬ್ಬರು ದೇವಬಂದ್‌ನಲ್ಲಿರುವ ಪ್ರತಿಷ್ಠಿತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆ ‘ದಾರುಲ್ ಉಲೂಮ್‌’ಗೆ ಭೇಟಿ ನೀಡಿದ್ದಾರೆ.

ಸೇನೆಯಲ್ಲಿ ‘ಮೌಲ್ವಿ’ ಹುದ್ದೆಗೆ ಸೇರ್ಪಡೆಯಾಗುವಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಮೇಜರ್ ಜನರಲ್ ಸುಭಾಷ್ ಶರಣ್ ಅವರು ಕರೆ ನೀಡಿದರು.

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಸೇನಾ ನೇಮಕಾತಿ ವಿಭಾಗದ ಎಡಿಜಿ ಆಗಿರುವ ಶರಣ್, ಉಲೂಮ್‌ನ ಮುಖ್ಯಸ್ಥ ಮೌಲಾನಾ ಮುಫ್ತಿ ಅಬ್ದುಲ್ ಖಾಸಿಮ್ ನೊಮಾನಿ ಅವರ ಜೊತೆ ಶನಿವಾರ ಸಂಜೆ ಮಾತುಕತೆ ನಡೆಸಿದರು.

ಶಿಕ್ಷಣ ಸಂಸ್ಥೆಯ ಉತ್ಕೃಷ್ಟ ಸಾಂಸ್ಕೃತಿಕ ಇತಿಹಾಸವನ್ನು ಸ್ಮರಿಸಿದ ಶರಣ್ ಅವರು, ‘ಇಲ್ಲಿ ಶಿಕ್ಷಣ ಪಡೆದು ಹೊರಬರುವ ವಿದ್ಯಾರ್ಥಿಗಳು ಸೇನೆಯ ಮೌಲ್ವಿ ಹುದ್ದೆಗಳಿಗೆ ಸೇರ್ಪಡೆಯಾಗಬಹುದು’ ಎಂದು ತಿಳಿಸಿದರು.

ಶಾಂತಿ ಹಾಗೂ ಭ್ರಾತೃತ್ವ ಮೂಡಿಸಲು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಂಸ್ಥೆ ಮಾಡಿದ ಕಾರ್ಯಕ್ರಮಗಳನ್ನು ನೊಮಾನಿ ಅವರು ಅಧಿಕಾರಿಗೆ ವಿವರಿಸಿದರು.

ಸಂಸ್ಥೆ ಮುಖ್ಯಸ್ಥರಿಗೆ ಭಗವದ್ಗೀತೆಯ ಪ್ರತಿಯೊಂದನ್ನು ಶರಣ್ ಅವರು ನೀಡಿದರು. ನೊಮಾನಿ ಅವರು ದಾರುಲ್ ಉಲೂಮ್‌ನ ಇತಿಹಾಸ ತಿಳಿಸುವ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು.

ದಾರುಲ್ ಉಲೂಮ್‌ ದೇಶವಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರತಿಷ್ಠಿತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆ ಎನಿಸಿಕೊಂಡಿದೆ. ಉತ್ತರ ಪ್ರದೇಶದ ಸಹರನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಮೊಹಮ್ಮದ್ ಖಾಸಿಮ್ ನ್ಯಾನವತಿ ಅವರು 1866ರಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿದ್ದರು.

ಇಸ್ಲಾಂ ಕುರಿತಂತೆ ಸಂಸ್ಥೆಯು ಆಗಾಗ್ಗೆ ಹೊರಡಿಸುವ ‘ಫತ್ವಾ’ಗಳಿಂದ (ಧಾರ್ಮಿಕ ಕಟ್ಟಳೆ) ಇದರ ಹೆಸರು ಹೆಚ್ಚಾಗಿ ಕೇಳಿಬರುತ್ತದೆ. ಶರಿಯತ್ ಕಾನೂನುಗಳನ್ನು ಇದು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಇತ್ತೀಚಿನ ತ್ರಿವಳಿ ತಲಾಖ್ ನಿಷೇಧವನ್ನು ಸಂಸ್ಥೆ ವಿರೋಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT