ಮಂಗಳವಾರ, ನವೆಂಬರ್ 19, 2019
26 °C

ಮಂಗಳೂರು | 10 ಕೆ.ಜಿ. ಗಾಂಜಾ ವಶ: ಕೇರಳದ ನಾಲ್ವರ ಬಂಧನ

Published:
Updated:

ಮಂಗಳೂರು: ಅಂತರರಾಜ್ಯ ಮಟ್ಟದ ಮಾದಕವಸ್ತು ಪೂರೈಕೆ ಜಾಲವೊಂದನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಕೇರಳದ ಕಾಸರಗೋಡು ಜಿಲ್ಲೆಯ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ. ಆರೋಪಿಗಳಿಂದ 10 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ, ‘ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕೊಡ್ಲಮೊಗರು ಬಳಿಯ ಮಜಿರ್‌ಪಳ್ಳ ಧರ್ಮನಗರ ನಿವಾಸಿ ಅಬೂಬಕ್ಕರ್‌ ಸಮದ್‌ ಅಲಿಯಾಸ್‌ ಸಮದ್‌ (24), ಕಡಂಬಾರು ಸಮೀಪದ ವರ್ಕಾಡಿ ನಿವಾಸಿ ಮಹಮ್ಮದ್ ಅಸ್ರಫ್‌ ಅಲಿಯಾಸ್‌ ಅಶ್ರಫ್‌ (30), ಕಡಂಬಾರು ಸಮೀಪದ ದುರ್ಗಿಪಳ್ಯ ನಿವಾಸಿ ಮಹಮ್ಮದಿ ಅಫ್ರಿದ್‌ (22) ಮತ್ತು ಮುಕ್ತಾನ ನಿವಾಸಿ ಮಹಮದ್‌ ಅರ್ಷ್ದದ (18) ಎಂಬುವವರನ್ನು ತೊಕ್ಕೊಟ್ಟು ಬಳಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

ಆರೋಪಿಗಳಿಂದ 10 ಕೆ.ಜಿ. ಗಾಂಜಾ, ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಹುಂಡೈ ಐ–20 ಕಾರು ಮತ್ತು ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಅಂತರರಾಜ್ಯ ಮಟ್ಟದಲ್ಲಿ ಕರಾವಳಿಯುದ್ದಕ್ಕೂ ಮಾದಕವಸ್ತು ಪೂರೈಕೆ ಜಾಲ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಕೇಂದ್ರೀಯ ಮಾದಕವಸ್ತು ನಿಗ್ರಹ ಬ್ಯೂರೊ ನೆರವು ಪಡೆದು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು.

ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಟಿ.ಕೋದಂಡರಾಮ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮೋಹನ ಕೆ.ವಿ., ಕಾನ್‌ಸ್ಟೆಬಲ್‌ಗಳಾದ ಸುನೀಲ್ ಕುಮಾರ್‌, ಗಿರೀಶ್‌, ರವಿಚಂದ್ರ, ರೆಜಿ, ರಾಜಾರಾಮ್‌, ದಯಾನಂದ, ದಾಮೋದರ ಮಹೇಶ್‌, ಮಹಮ್ಮದ್ ಶರೀಫ್‌ ಮತ್ತು ಮಹಮ್ಮದ್ ಇಕ್ಬಾಲ್‌ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವಿವರ ನೀಡಿದರು.

ಪ್ರತಿಕ್ರಿಯಿಸಿ (+)