ಒಡೆದು ಆಳುವುದೇ ಕಾಂಗ್ರೆಸ್‌ ಸಂಪ್ರದಾಯ: ನರೇಂದ್ರ ಮೋದಿ ಟೀಕೆ

7
ರಾಜಸ್ಥಾನದಲ್ಲಿ ಚುನಾವಣಾ ಕಾವು ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ

ಒಡೆದು ಆಳುವುದೇ ಕಾಂಗ್ರೆಸ್‌ ಸಂಪ್ರದಾಯ: ನರೇಂದ್ರ ಮೋದಿ ಟೀಕೆ

Published:
Updated:
Deccan Herald

ಅಜ್ಮೀರ್‌: ‘ಅಧಿಕಾರಕ್ಕೇರಲು ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುವುದು ಮತ್ತು ಒಡೆದು ಆಳುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಒಂದು ತಿಂಗಳಿರುವಂತೆ ಶನಿವಾರ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಆರಂಭಿಸಿದ ಅವರು, ‘ವೋಟ್‌ ಬ್ಯಾಂಕ್‌ ರಾಜಕಾರಣ ಎನ್ನುವುದು ಈಗ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ಅಧಿಕಾರಿಗಳನ್ನೂ ಒಡೆದು ಆಳುತ್ತಿದ್ದಾರೆ. ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮವಾಗುತ್ತಿದೆ’ ಎಂದರು.

‘ಬಜೆಟ್‌ನಲ್ಲಿ ಅನುದಾನ ನೀಡುವ ವೇಳೆಯೂ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ. ಹೀಗಾಗಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು. 

ಪ್ರಧಾನಿಯಾದರೂ ಬಿಜೆಪಿ ಕಾರ್ಯಕರ್ತ:  ‘ನಾನು ರಾಷ್ಟ್ರಕ್ಕೆ ಅಥವಾ ವಿಶ್ವಕ್ಕೇ ಪ್ರಧಾನಿಯಾಗಬಹುದು. ಆದರೆ, ಎಂದಿಗೂ ನಾನು ಬಿಜೆಪಿ ಕಾರ್ಯಕರ್ತ’ ಎಂದು ಮೋದಿ ಹೇಳಿದರು. 

‘ಈಗಲೂ ಪಕ್ಷದ ಕಾರ್ಯಕರ್ತ ಮತ್ತು ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಆಹ್ವಾನ ನೀಡಿದರೂ, ಎರಡೂ ಕಾರ್ಯಕ್ರಮವನ್ನು ಸಮಾನವಾಗಿಯೇ ಸ್ವೀಕರಿಸಿ ಸಂತಸದಿಂದಲೇ ಹಾಜರಾಗುತ್ತೇನೆ’ ಎಂದರು.

 ಕಪ್ಪು ಬಟ್ಟೆ ಧರಿಸಿದವರಿಗೆ ನಿರ್ಬಂಧ
ಉಪಚುನಾವಣೆಯಲ್ಲಿ ಅಜ್ಮೀರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿದ್ದರಿಂದ ಮೋದಿಯವರ ಈ ರ‍್ಯಾಲಿ ಮಹತ್ವ ಪಡೆದುಕೊಂಡಿತ್ತು. ಎರಡು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಈ ರ‍್ಯಾಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರತಿಭಟನೆ ಸಾಧ್ಯತೆ ಇದ್ದುದರಿಂದ ಕಪ್ಪು ಬಟ್ಟೆ ಧರಿಸಿದ್ದ ಯಾರನ್ನೂ ಸಮಾವೇಶ ಸ್ಥಳಕ್ಕೆ ಬಿಡಲಿಲ್ಲ.

**
ಮಧ್ಯಪ್ರದೇಶದಲ್ಲಿ ರಾಹುಲ್‌ ರೋಡ್‌ ಶೋ; ‘ನರ್ಮದಾ ಭಕ್ತ’ ಪೋಸ್ಟರ್‌ಗಳಿಂದ ಕಾರ್ಯಕರ್ತರ ಸ್ವಾಗತ
ಜಬಲ್ಪು‌ರ್‌: ಮಧ್ಯಪ್ರದೇಶದ ಜನತೆ ಅತ್ಯಂತ ಭಕ್ತಿಯಿಂದ ಪೂಜಿಸುವ ನರ್ಮದಾ ನದಿಗೆ ಗೌರವ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ರೋಡ್‌ ಶೋಗೆ ಚಾಲನೆ ನೀಡಿದರು.

ಜಬಲ್ಪು‌ರ್‌ ಜಿಲ್ಲೆಯಲ್ಲಿ 8 ಕಿಲೋ ಮೀಟರ್‌ ರೋಡ್‌ ಶೋ ಆರಂಭಿಸಿದ ರಾಹುಲ್‌ ಅವರನ್ನು ಬೆಂಬಲಿಗರು ದಾರಿಯುದ್ದಕ್ಕೂ ‘ನರ್ಮದಾ ಭಕ್ತ’ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಿ ಸ್ವಾಗತಿಸಿದರು.

ದುಮ್ನಾ ವಿಮಾನ ನಿಲ್ದಾಣದಿಂದ ನರ್ಮದಾ ನದಿ ದಂಡೆ ‘ಉಮಾ ಘಾಟ್‌’ಗೆ ವಿಮಾನದಲ್ಲಿ ಬಂದಿಳಿದ ರಾಹುಲ್‌ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ‘ಜೈ ನರ್ಮದೆ’ ಎನ್ನುವ ಘೋಷಣೆಗಳ ಮಧ್ಯೆ ಪೂಜೆ ಮತ್ತು ಆರತಿ ಮಾಡಿದರು. ವೇದಿಕೆಯಲ್ಲಿದ್ದ ಬಾಲಕಿಯೊಬ್ಬಳಿಗೆ ಕಾಣಿಕೆಯೊಂದನ್ನು ಇದೇ ಸಂದರ್ಭದಲ್ಲಿ ನೀಡಿದರು. ಕಾರ್ಯಕರ್ತರೊಬ್ಬರು ಹಳದಿ ಲಕೋಟೆಯೊಂದನ್ನು ಸಹ ಬಾಲಕಿಗೆ ನೀಡಿದರು.

ಬಳಿಕ, ಅಬ್ದುಲ್‌ ಹಮೀದ್‌ ಚೌಕ್‌ನಿಂದ ರೋಡ್‌ ಶೋ ಆರಂಭಿಸಿದರು. ಮೂರು ವಿಧಾನಸಭಾ ಕ್ಷೇತ್ರಗಳಾದ ಜಬಲ್ಪು‌ರ್‌ ಪಶ್ಚಿಮ, ಜಬಲ್ಪು‌ರ್‌ ಉತ್ತರ ಮಧ್ಯ ಹಾಗೂ ಜಬಲ್ಪು‌ರ್‌ ಪೂರ್ವ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಯಲಿದೆ. ಪ್ರಸ್ತುತ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಮಾನಸ ಸರೋವರ ಯಾತ್ರೆಯಿಂದ ಹಿಂತಿರುಗಿದ ಬಳಿಕ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾಗ ರಾಹುಲ್‌ ಅವರನ್ನು ‘ಶಿವ ಭಕ್ತ’ ಎಂದು ಬಿಂಬಿಸಲಾಗಿತ್ತು. ಸತ್ನಾ ಮತ್ತು ರೆವಾ ಜಿಲ್ಲೆಗಳಿಗೆ ಭೇಟಿ ನೀಡಿದ ಬಳಿಕ ‘ರಾಮ ಭಕ್ತ ರಾಹುಲ್‌’ ಎಂದು ಘೋಷಣೆಗಳನ್ನು ಕೂಗಲಾಗಿತ್ತು.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !