ಶುಕ್ರವಾರ, ಮಾರ್ಚ್ 31, 2023
24 °C

ರಾಷ್ಟ್ರೀಯ ತಂತ್ರಜ್ಞಾನ ದಿನ: ಇತಿಹಾಸದಲ್ಲಿ ಹೆಗ್ಗುರುತಿನ ಕ್ಷಣ ಎಂದ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಉನ್ನತ ನಾಯಕರು ಟ್ವೀಟ್‌ ಮಾಡುವ ಮೂಲಕ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಸ್ಮರಿಸಿದ್ದಾರೆ. 1998ರ ಮೇ, 11ರಂದು ರಾಜಸ್ಥಾನದ ಪೊಖ್ರಾನ್‌ನಲ್ಲಿ ಭಾರತವು ಅಣ್ವಸ್ತ್ರ ಪರೀಕ್ಷೆ ಮಾಡಿತ್ತು. ಇದಲ್ಲದೇ ದೇಶದಲ್ಲಿಯೇ ನಿರ್ಮಾಣಗೊಂಡಿದ್ದ ಹನ್ಸಾ ಹೆಲಿಕಾಪ್ಟರ್‌ ಮತ್ತು ತ್ರಿಶೂಲ್‌ ಕ್ಷಿಪಣಿಗಳ ಯಶಸ್ವಿ ಹಾರಾಟ ನಡೆಸಲಾಗಿತ್ತು. ಆ ಮಹತ್ವದ ದಿನದ ನೆನಪಿಗಾಗಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ‘ರಾಷ್ಟ್ರೀಯ ತಂತ್ರಜ್ಞಾನ ದಿನ’ವನ್ನಾಗಿ ಘೋಷಿಸಿದ್ದರು.   

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳುತ್ತಿರುವ ಎಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ನಮ್ಮ ದೇಶ ನಮಸ್ಕರಿಸುತ್ತದೆ. 1998ರ ಈ ದಿನ ನಮ್ಮ ವಿಜ್ಞಾನಿಗಳು ಮಾಡಿದ ಅಸಾಧಾರಣ ಸಾಧನೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅದು ಭಾರತದ ಇತಿಹಾಸದಲ್ಲಿ ಹೆಗ್ಗುರುತಿನ ಕ್ಷಣ’ ಎಂದು ತಿಳಿಸಿದ್ದಾರೆ. 

ರಾಷ್ಟ್ರೀಯ ತಂತ್ರಜ್ಞಾನ ದಿನದಂದು ನಾಗರಿಕರಿಗೆ ಶುಭಾಶಯ ಕೋರಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ‘1998ರ ಪರಮಾಣು ಪರೀಕ್ಷೆಗಳ ವಾರ್ಷಿಕೋತ್ಸವವನ್ನು ಗುರುತಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ಸಹ ನಾಗರಿಕರಿಗೆ ಶುಭಾಶಯಗಳು. ಈ ಸಂದರ್ಭದಲ್ಲಿ, ರಾಷ್ಟ್ರವನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ದೇಶದ ವೈಜ್ಞಾನಿಕ ಸಮುದಾಯವು ನೀಡಿದ ಕೊಡುಗೆಯನ್ನು ನಾವು ಆಚರಿಸುತ್ತಿದ್ದೇವೆ’ ಎಂದಿದ್ದಾರೆ.

ದೇಶದ ವೈಜ್ಞಾನಿಕ ಸಮುದಾಯಕ್ಕೆ ಶುಭಾಶಯ ಕೋರಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯಂದು ದೇಶದ ವೈಜ್ಞಾನಿಕ ಸಮುದಾಯಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಅತ್ಯಾಧುನಿಕ ಸ್ಥಳೀಯ ರಕ್ಷಣಾ ತಂತ್ರಜ್ಞಾನಗಳನ್ನು ರಾಷ್ಟ್ರಕ್ಕೆ ಒದಗಿಸುವ ವಿಜ್ಞಾನಿಗಳ ಪ್ರಯತ್ನಗಳಿಗೆ ಸಹಕರಿಸಬೇಕೆಂದು ನಾನು ಡಿಆರ್‌ಡಿಒ, ಒಎಫ್‌ಬಿಗಳು, ಡಿಪಿಎಸ್‌ಯುಗಳು, ಕೈಗಾರಿಕೆ ಮತ್ತು ರಕ್ಷಣಾ ಉದ್ಯಮಿಗಳಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ. 

1998ರ ಇಂದಿನ ದಿನವು ಪೋಖ್ರಾನ್‌ ಅಣುಬಾಂಬ್‌ ಪರೀಕ್ಷೆಯನ್ನು ನೆನಪಿಸುವ ವಾರ್ಷಿಕೋತ್ಸವಾಗಿದೆ. ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು