ಎನ್‌ಸಿಪಿ ಮುಂದೆ ಅಗಾಧ ಸವಾಲು

ಬುಧವಾರ, ಜೂನ್ 26, 2019
23 °C
ಪವಾರ್‌ ನೇತೃತ್ವದ ಪಕ್ಷಕ್ಕೆ 20 ವರ್ಷ ಪೂರ್ಣ

ಎನ್‌ಸಿಪಿ ಮುಂದೆ ಅಗಾಧ ಸವಾಲು

Published:
Updated:
Prajavani

ಮುಂಬೈ: ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಶರದ್‌ ಪವಾರ್‌ ಅವರು ಸ್ಥಾಪಿಸಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಗೆ (ಎನ್‌ಸಿಪಿ) ಇಪ್ಪತ್ತು ವರ್ಷಗಳು ತುಂಬಿವೆ. ಆದರೆ ಈ ಸಂದರ್ಭವನ್ನು ಸಂಭ್ರಮಿಸಲಾಗದಂಥ ಸ್ಥಿತಿಯಲ್ಲಿ ಪಕ್ಷ ಇದೆ. ಎನ್‌ಸಿಪಿಗೆ ಈಗ ಬೆಟ್ಟದಷ್ಟು ಸವಾಲುಗಳು ಎದುರಾಗಿವೆ.

‘ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅಧಿಕೃತವಾಗಿ ಪಡೆ ಯುವ ಸಲುವಾಗಿ ಪಕ್ಷವು ಕಾಂಗ್ರೆಸ್‌ನಲ್ಲಿ ವಿಲೀನಗೊಳ್ಳಲು ಚಿಂತನೆ ನಡೆಸುತ್ತಿದೆ’ ಎಂಬ ಸುದ್ದಿಯು ಈಚೆಗೆ ದಟ್ಟವಾಗಿ ಹಬ್ಬಿತ್ತು.

ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಪವಾರ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿಮಾಡಿ ಮಾತುಕತೆ ನಡೆಸಿದ್ದರಿಂದ ಈ ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿದ್ದವು. ಆದರೆ, ‘ಇದು ಬರಿಯ ಊಹಾಪೋಹ’ ಎಂದು ವಿಲೀನ ಸಾಧ್ಯತೆ ತಳ್ಳಿಹಾಕಿದ್ದಾರೆ.

ಮುಂದಿನ ಸೆಪ್ಟೆಂಬರ್‌– ಅಕ್ಟೋಬರ್‌ ವೇಳೆಗೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯದೆ. ಈ ಚುನಾವಣೆ ಪವಾರ್‌ ಮುಂದಿರುವ ದೊಡ್ಡ ಸವಾಲು. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ತಲಾ ನಾಲ್ಕು ಸ್ಥಾನಗಳನ್ನು ಗೆಲ್ಲಲು ಮಾತ್ರ ಎನ್‌ಸಿಪಿಗೆ ಸಾಧ್ಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ, ಮೋದಿ– ಶಾ ಜೋಡಿಯ ಪ್ರಭಾವದ ಜೊತೆಗೆ ದೇವೆಂದ್ರ ಫಡಣವೀಸ್‌ ನೇತೃತ್ವದ ರಾಜ್ಯ ಸರ್ಕಾರದ ಪ್ರಭಾವವನ್ನೂ ಎದುರಿಸಬೇಕಾದ ಸವಾಲು ಪಕ್ಷಕ್ಕಿದೆ.

ಪವಾರ್‌, ಲೋಕಸಭೆಯ ಮಾಜಿ ಸ್ಪೀಕರ್‌ ಪಿ.ಎ. ಸಂಗ್ಮಾ ಹಾಗೂ ತಾರೀಖ್‌ ಅನ್ವರ್‌ ಅವರನ್ನು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿದ ಕಾರಣಕ್ಕೆ 1999ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಮೂವರು ಸೇರಿ ಎನ್‌ಸಿಪಿಯನ್ನು ಸ್ಥಾಪಿಸಿದ್ದರು. ಅದೇ ವರ್ಷ ನಡೆದ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡೇ ಈ ಪಕ್ಷ ಸ್ಪರ್ಧೆಗೆ ಇಳಿದಿತ್ತು. ಆ ವರ್ಷ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಈ ಮೈತ್ರಿ ಯಶಸ್ವಿಯಾಗಿತ್ತು. 1999ರಿಂದ 2014ರವರೆಗಿನ 15 ವರ್ಷ ಈ ಮೈತ್ರಿ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದೆ. ಅತ್ತ ಕೆಂದ್ರದಲ್ಲೂ 2004ರಿಂದ 2014ರವರೆಗೆ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಆಡಳಿತ ನಡೆಸಿತು. ಯುಪಿಎ ಮೈತ್ರಿಕೂಟದಲ್ಲಿ ಎನ್‌ಸಿಪಿ ಪ್ರಮುಖ ಪಕ್ಷವಾಗಿತ್ತು. ಮೈತ್ರಿಯ ಪರಿಣಾಮ ಪವಾರ್‌ ಅವರು ಕೆಂದ್ರದಲ್ಲಿ ಕೃಷಿ ಸಚಿವರೂ ಆದರು.

ಈಗ ಪಿ.ಎ. ಸಂಗ್ಮಾ ಇಲ್ಲ. ಎನ್‌ಸಿಪಿ ರಚನೆಯಲ್ಲಿ ಕೈ ಜೋಡಿಸಿದ್ದ ತಾರೀಖ್‌ ಅನ್ವರ್‌ ಪುನಃ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಪವಾರ್‌ ಜೊತೆ ಉಳಿದಿರುವ ನಾಯಕರೆಂದರೆ ಕೇಂದ್ರದ ಮಾಜಿ ಸಚಿವ ಪ್ರಫುಲ್‌ ಪಟೇಲ್‌ ಮಾತ್ರ. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪವಾರ್‌ ಮೊಮ್ಮಗ ಪಾರ್ಥ ಪವಾರ್‌ ಸೋತಿರುವುದರಿಂದ ಪಕ್ಷ ಆಘಾತಕ್ಕೆ ಒಳಗಾಗಿದೆ. ಪವಾರ್‌ ಮೊಮ್ಮಕ್ಕಳು, ಸಂಬಂಧಿಕರೇ ಪಕ್ಷದ ಎರಡನೇ ಸಾಲಿನ ನಾಯಕರಾಗಿದ್ದು, ಪಕ್ಷವನ್ನು ಉಳಿಸಲು ಸಾಕಷ್ಟು ಬೆವರು ಸುರಿಸುತ್ತಿದ್ದಾರೆ.

ಮೈತ್ರಿಯೇ ಪವಾರ್‌ ಶಕ್ತಿ

‘ಎನ್‌ಸಿಪಿ ಮುಂದೆ ಈಗ ಇರುವ ಸವಾಲುಗಳು ಗಂಭೀರವಾದವು’ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ. ಕೆಲವು ಶಾಸಕರೂ ಸೇರಿದಂತೆ ಎನ್‌ಸಿಪಿಯ ಹಲವು ಹಿರಿಯ ಮುಖಂಡರು ಬಿಜೆಪಿಯ ಜೊತೆ ಹಾಗೂ ಕೆಲವರು ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ ಅಘಾಡಿ ಪಕ್ಷದ ಸಂಪರ್ಕದಲ್ಲಿದ್ದಾರೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಎನ್‌ಸಿಪಿಯು ಸ್ವತಂತ್ರವಾಗಿ ಸ್ಪರ್ಧಿಸಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ.

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದಾಗ 71 ಸ್ಥಾನಗಳನ್ನು ಪಡೆದಿತ್ತು.  ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆಲವು ಮುಖಂಡರೇ ಪವಾರ್‌ ಅವರಿಗೆ ಸವಾಲೊಡ್ಡುವ ಸಾಧ್ಯತೆ ಇದೆ ಎಂದು ಅಕೋಲ್ಕರ್‌ ವಿಶ್ಲೇಷಿಸುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !