ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ರಾಜ್ಯಗಳಿಗೆ ಹೊಸ ರಾಜ್ಯಪಾಲರು: ಕೇರಳಕ್ಕೆ ಆರಿಫ್‌ಖಾನ್, ತೆಲಂಗಾಣಕ್ಕೆ ತಮಿಳುಸಾಯಿ

ಕಲ್‌ರಾಜ್‌ ಮಿಶ್ರಾ ರಾಜಸ್ಥಾನಕ್ಕೆ ವರ್ಗ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಆದೇಶ
Last Updated 1 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಮೂವರು ಹಿರಿಯ ಮುಖಂಡರು ಮತ್ತು ರಾಜೀವ್‌ ಗಾಂಧಿ ಸಚಿವ ಸಂಪುಟದಿಂದ ಹೊರಗೆ ಬಂದಿದ್ದ ಮುಸ್ಲಿಂ ಸಮುದಾಯದ ಹಿರಿಯ ನಾಯಕ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ತ್ರಿವಳಿ ತಲಾಖ್‌ ನಿಷೇಧದ ವಿಚಾರದಲ್ಲಿ ಖಾನ್‌ ಅವರು ಬಿಜೆಪಿಯನ್ನು ಬೆಂಬಲಿಸಿದ್ದರು.

ಹಿಮಾಚಲ ಪ್ರದೇಶ ರಾಜ್ಯಪಾಲರಾಗಿದ್ದ ಕಲ್‌ರಾಜ್‌ ಮಿಶ್ರಾ ಅವರನ್ನು ರಾಜಸ್ಥಾನಕ್ಕೆವರ್ಗಾಯಿಸಲಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ.

ಖಾನ್‌ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಕೋಶಿಯಾರಿ ಅವರನ್ನು ಮಹಾರಾಷ್ಟ್ರ, ಕೇಂದ್ರದ ಕಾರ್ಮಿಕ ಖಾತೆಯ ಮಾಜಿ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸಾಯಿ ಸೌಂದರ್‌ರಾಜನ್‌ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವಧಿ ಪೂರ್ಣಗೊಂಡಿದ್ದರೂ ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿಲ್ಲ.

2007ರಿಂದಲೂ ರಾಜ್ಯಪಾಲ ಹುದ್ದೆಯಲ್ಲಿದ್ದ ಗುಪ್ತಚರ ಘಟಕದ (ಐ.ಬಿ) ಮಾಜಿ ನಿರ್ದೇಶಕ ಇ.ಎಸ್‌.ಎಲ್‌ ನರಸಿಂಹನ್‌ ಅವರು ಹೊಸ ನೇಮಕದಿಂದಾಗಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹೆಚ್ಚಿನ ರಾಜ್ಯಪಾಲರನ್ನು 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬದಲಾಯಿಸಿತ್ತು. ಆದರೆ, ನರಸಿಂಹನ್‌ ಅವರನ್ನು ರಾಜ್ಯ‍ಪಾಲರನ್ನಾಗಿ ಮುಂದುವರಿಸಿತ್ತು. ತೆಲಂಗಾಣ ರಾಜ್ಯಪಾಲರಾಗಿದ್ದ ಅವರಿಗೆ ಆಂಧ್ರ ಪ್ರದೇಶದ ಹೆಚ್ಚುವರಿ ಹೊಣೆ ಇತ್ತು. ಆದರೆ, ಈ ಹೊಣೆಯಿಂದ ಅವರನ್ನು ಜುಲೈನಲ್ಲಿ ಮುಕ್ತಗೊಳಿಸಲಾಗಿತ್ತು.

ಕಳೆದ ತಿಂಗಳು ಏಳು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಲಾಗಿತ್ತು. ಕಲ್‌ರಾಜ್‌ ಮಿಶ್ರಾ (ಹಿಮಾಚಲ ಪ್ರದೇಶ), ಜಗದೀಪ್‌ ಧನ್ಕರ್‌ (ಪಶ್ಚಿಮ ಬಂಗಾಳ), ರಮೇಶ್‌ ಬೈಸ್‌ (ತ್ರಿಪುರಾ), ಫಗು ಚೌಹಾಣ್‌ (ಬಿಹಾರ) ಮತ್ತು ಆರ್‌.ಎನ್‌. ರವಿ (ನಾಗಾಲ್ಯಾಂಡ್‌) ನೇಮಿಸಲಾಗಿತ್ತು. ರಾಜಸ್ಥಾನ ರಾಜ್ಯಪಾಲರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಕಲ್ಯಾಣ್‌ ಸಿಂಗ್‌ ಅವರ ಅವಧಿ ಪೂರ್ಣಗೊಂಡಿದೆ. ಈ ಸ್ಥಾನಕ್ಕೆ ಕಲ್‌ರಾಜ್‌ ಅವರನ್ನು ನೇಮಿಸಲಾಗಿದೆ.

ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಅಸಿಂಧುಗೊಳಿಸಲು ಕಾನೂನು ತರುವ ಪ್ರಯತ್ನವನ್ನು ವಿರೋಧಿಸಿ ಖಾನ್‌ ಅವರು ರಾಜೀವ್‌ ಸಚಿವ ಸಂಪುಟ ತೊರೆದಿದ್ದರು. ಬಳಿಕ ಅವರು ವಿ.ಪಿ.ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ತ್ರಿವಳಿ ತಲಾಖ್‌ ನಿಷೇಧ ಕಾನೂನಿಗೆ ನೀಡಿದ ಬೆಂಬಲಕ್ಕೆ ಈಗ ಅವರಿಗೆ ಸರ್ಕಾರವು ಪ್ರತಿಫಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುವುದು ಎಂಬ ವದಂತಿ ಹಿಂದೆ ಕೇಳಿ ಬಂದಿತ್ತು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರ ಅವಧಿ ಇದೇ 4ಕ್ಕೆ ಕೊನೆಯಾಗಲಿದೆ. ಅವರಿಗೆ ಬೇರೊಂದು ರಾಜ್ಯದ ರಾಜ್ಯಪಾಲರಾಗಿ ವಿಸ್ತರಣೆ ದೊರೆಯಲಿದೆ ಎಂಬ ವದಂತಿ ಇದೆ. ಆದರೆ, ಅವರನ್ನು ರಾಜ್ಯಪಾಲರನ್ನಾಗಿ ಉಳಿಸಿಕೊಳ್ಳಲಾಗುವುದೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್‌ ಅವರ ಅವಧಿಗೆ ಶನಿವಾರಕ್ಕೆ ಕೊನೆಗೊಂಡಿದೆ. ಅವರಿಂದ ಕೋಶಿಯಾರಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮಿಳುಸಾಯಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯ ಕನಿಮೊಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಅವರು ತೆಲಂಗಾಣ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆರಿಫ್ ಮೊಹಮ್ಮದ್ ಖಾನ್‌ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ.

ವಜುಭಾಯಿ ವಾಲಾ ಮುಂದುವರಿಕೆ ಸಾಧ್ಯತೆ

ಬೆಂಗಳೂರು: ಕೆಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ಭಾನುವಾರ ನೇಮಕ ಮಾಡಿದ್ದು, ರಾಜ್ಯಕ್ಕೆ ರಾಜ್ಯಪಾಲರು ಯಾರು ಎಂಬುದು ಈವರೆಗೂ ನಿರ್ಧಾರವಾಗಿಲ್ಲ. ಆದರೆ ರಾಜ್ಯಪಾಲ ವಜುಭಾಯಿ ವಾಲಾ ಅವರೇ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೊಬ್ಬರು ‘ವಾಲಾ ಅವರೇ ಮುಂದುವರಿಯುವ ಸಾಧ್ಯತೆಗಳಿವೆ’ ಎಂದು ತಿಳಿಸಿದ್ದಾರೆ.

ವಾಲಾ ಅವರ ಐದು ವರ್ಷಗಳ ಅಧಿಕಾರ ಅವಧಿ ಆಗಸ್ಟ್ 31ಕ್ಕೆ ಕೊನೆಗೊಂಡಿದ್ದು, ಹೊಸ ನೇಮಕವೂ ಆಗಿಲ್ಲ ಅಥವಾ ಅವರನ್ನೇ ಮುಂದುವರಿಸುವ ಬಗ್ಗೆಯೂ ಕೇಂದ್ರ ಸರ್ಕಾರ ನಿರ್ಧಾರವನ್ನೂ ಕೈಗೊಂಡಿಲ್ಲ. ಹಾಗಾಗಿ ಪ್ರಸ್ತುತ ಅವರೇ ಮುಂದುವರಿದಿದ್ದಾರೆ.

ರಾಜ್ಯಪಾಲರಿಗೆ 80 ವರ್ಷ ತುಂಬಿದ್ದು, ವಯಸ್ಸಿನ ಮಿತಿಯೂ ಕಾಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಜತೆಗೆ ಸೌಹಾರ್ದ ಸಂಬಂಧ ಹೊಂದಿದ್ದು, ಅವರ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಹಣಕಾಸು ಸಚಿವರು, ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರಲ್ಲದೆ ಕೇಂದ್ರದ ಇತರ ನಾಯಕರೊಂದಿಗೂ ಉತ್ತಮ ಬಾಂಧವ್ಯ ಇದೆ.

ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ, ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರುಗಳು ರಾಜ್ಯಪಾಲರ ಹುದ್ದೆಗೆ ಕೇಳಿ ಬಂದಿದ್ದವು. ಆದರೆ ಈಗ 4 ರಾಜ್ಯಗಳಿಗೆ ಹೊಸದಾಗಿ ನೇಮಕ ಮಾಡಿದ್ದರೂ, ರಾಜ್ಯದ ಪ್ರಸ್ತಾಪವಾಗಿಲ್ಲ.

ಬಿಡದ ವಿವಾದ: 2018 ಮೇನಲ್ಲಿ ಸರ್ಕಾರ ರಚಿಸಲು ಬಿಅಜೆಪಿಗೆ ಆಹ್ವಾನ ನೀಡಿದ್ದಕ್ಕೆ ವಾಲಾ ಅವರು ಟೀಕೆಗೆ ಗುರಿಯಾಗಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರು ತೀವ್ರವಾಗಿ ನಿಂದಿಸಿದ್ದು, ‘ಗುಜರಾತ್ ವ್ಯಾಪಾರಿ’ ಎಂದೆಲ್ಲ ಜರಿದಿದ್ದರು. ಬಹುಮತ ಸಾಬೀತುಪಡಿಸಲಾಗದೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ನಂತರ ಮೈತ್ರಿ ಸರ್ಕಾರ ರಚನೆಯಾಗಿದ್ದು, 2019 ಜುಲೈನಲ್ಲಿ ಈ ಸರ್ಕಾರವೂ ಬಹುಮತ ಕಳೆದುಕೊಂಡು ಪತಗೊಂಡಿತು. ಈ ಸಂದರ್ಭದಲ್ಲಿ ವಾಲಾ ಅವರನ್ನು ಮುಖಂಡರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಪಕ್ಷಗಳ ನಾಯಕರು ಟೀಕೆಗೆ ಗುರಿಪಡಿಸಿದ್ದರು. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ವಾಲಾ ಅವರು ಸಾಕಷ್ಟು ಕಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಮಾಹಿತಿ ಇಲ್ಲ: ‘ರಾಷ್ಟ್ರಪತಿ ಭವನ ಅಥವಾ ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ. ಅದರ ನಿರೀಕ್ಷೆಯಲ್ಲೇ ಇದ್ದೇವೆ’
ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.

ದಕ್ಷಿಣದತ್ತ ಕಣ್ಣು ನೆಟ್ಟು ಬಿಜೆಪಿ ಹೆಜ್ಜೆ

ದಕ್ಷಿಣದ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಆದ್ಯತೆ ನೀಡುತ್ತಿರುವ ಬಿಜೆಪಿಯು ವಿರೋಧ ಪಕ್ಷಗಳ ಪ್ರಭಾವಿ ನಾಯಕರನ್ನು
ತನ್ನ ತೆಕ್ಕೆಗೆ ಸೆಳೆದುಕೊಂಡು ಸಂಘಟನೆಯನ್ನು ಬಲಗೊಳಿಸುತ್ತಿದೆ.

‘ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥೆ ತಮಿಳ್‌ಸಾಯಿ ಸೌಂದರರಾಜನ್‌ ಅವರನ್ನು ತೆಲಂಗಾಣದ ರಾಜ್ಯಪಾಲೆಯಾಗಿ ನೇಮಕ ಮಾಡಿರುವುದರ ಹಿಂದೆ ಇಂಥದ್ದೇ ಚಿಂತನೆ ಇದೆ. ತಮಿಳುನಾಡಿನಲ್ಲಿ ಹೊಸ ನಾಯಕತ್ವದ ಬೆಳವಣಿಗೆಗೆ ಇದು ಪೂರಕವಾಗಲಿದೆ’ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದ್ದಾರೆ.

ವಿರೋಧ ಪಕ್ಷಗಳ, ವಿಶೇಷವಾಗಿ ಟಿಡಿಪಿಯ ನಾಯಕರನ್ನು ತನ್ನತ್ತ ಸೆಳೆಯುವ ಮೂಲಕ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಜೆಪಿಯು ತನ್ನ ವಿಸ್ತರಣಾ ಕಾರ್ಯವನ್ನು ಈಗಾಗಲೇ ದೊಡ್ಡಮಟ್ಟದಲ್ಲಿ ಜಾರಿಮಾಡಿದೆ.

ಉತ್ತರ ಭಾರತದಲ್ಲಿ ಬಿಜೆಪಿಗೆ ಬೆಂಬಲ ಹೆಚ್ಚಾಗಿರುವುದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸಿದರೂ, ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಅದರ ಹೆಜ್ಜೆ ಗುರುತುಗಳು ಗಟ್ಟಿಗೊಳ್ಳಲಿಲ್ಲ. ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದ ಒಟ್ಟು 84 ಲೋಕಸಭಾ ಕ್ಷೇತ್ರಗಳಲ್ಲಿ ಒಂದನ್ನು ಗೆಲ್ಲಲೂ ಬಿಜೆಪಿಗೆ ಸಾಧ್ಯವಾಗಲಿಲ್ಲ. ಆಂಧ್ರಪ್ರದೇಶದಲ್ಲಿ ಹಿಂದಿನ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಕಳೆದ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿತು. ಆದರೆ ತೆಲಂಗಾಣದಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ.

ತೆಲಂಗಾಣದ ಫಲಿತಾಂಶದಿಂದ ಪ್ರೇರಣೆ ಪಡೆದ ಬಿಜೆಪಿಯು ಆಡಳಿತಾರೂಢ ಟಿಆರ್‌ಎಸ್‌ಗೆ ಪ್ರಬಲ ಸ್ಪರ್ಧಿಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ವಿರೋಧಪಕ್ಷಗಳ ನಾಯಕರನ್ನು ಸೆಳೆಯಲಾರಂಭಿಸಿದೆ. ಅಂಥದ್ದೇ ಯೋಜನೆಯನ್ನು ಆಂಧ್ರದಲ್ಲೂ ಜಾರಿ ಮಾಡುತ್ತಿದೆ.

‘ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ದೇಶದಾದ್ಯಂತ ಭಾರಿ ಹಿನ್ನಡೆ ಸಾಧಿಸಿದ್ದರ ಪರಿಣಾಮ ಕೇರಳದಂಥ ರಾಜ್ಯದಲ್ಲೂ ಬಿಜೆಪಿಯ ಬಲವರ್ಧನೆ ಸಾಧ್ಯವಾಗುತ್ತಿದೆ. ರಾಜಕೀಯ ದಿಗ್ಗಜರೆನಿಸಿದ್ದ ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿ ಅವರ ಸಾವಿನ ನಂತರ ತಮಿಳುನಾಡಿನಲ್ಲಿ ರಾಜಕೀಯ ಶೂನ್ಯ ಸೃಷ್ಟಿಯಾಗಿದೆ. ನಮ್ಮನ್ನು ನಾವು ಹೊಸ ಶಕ್ತಿಯಾಗಿ ರೂಪಿಸಿಕೊಳ್ಳಲು ಈಗ ಒಂದು ಅವಕಾಶ ಒದಗಿದೆ’ ಎಂದು ಬಿಜೆಪಿಯ ನಾಯಕರೊಬ್ಬರು ಹೇಳುತ್ತಾರೆ. ಬಿ.ಎಲ್‌. ಸಂತೋಷ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಮಹಾ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಕ ಮಾಡಿರುವುದರ ಹಿಂದೆ ದಕ್ಷಿಣದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶವಿದೆ ಎಂದು ಪಕ್ಷದ ಅನೇಕ ಹಿರಿಯರು ಅಭಿಪ್ರಾಯಪಡುತ್ತಾರೆ.

ಕರ್ನಾಟಕದ ಸಂತೋಷ್‌ ಅವರು ಹಿಂದೆ ಪಕ್ಷದ ಜಂಟಿ ಮಹಾ ಕಾರ್ಯದರ್ಶಿಯಾಗಿದ್ದು. ಆಗ ಅವರು ಪಕ್ಷದ ದಕ್ಷಿಣ ಭಾರತದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT