ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಫಾ: ಆರು ಜನರಿಗೆ ಸೋಂಕು ಹರಡಿಲ್ಲ’

ವಿದ್ಯಾರ್ಥಿ ಜತೆ ನೇರ ಸಂಪರ್ಕ ಹೊಂದಿದ್ದವರ ರಕ್ತದ ಮಾದರಿ ಪರೀಕ್ಷೆ
Last Updated 7 ಜೂನ್ 2019, 1:08 IST
ಅಕ್ಷರ ಗಾತ್ರ

ಕೊಚ್ಚಿ/ನವದೆಹಲಿ (ಪಿಟಿಐ): ನಿಫಾ ಸೋಂಕಿಗೆ ಗುರಿಯಾಗಿರುವ ಕಾಲೇಜು ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದ್ದ ಮೂವರು ನರ್ಸ್‌ಗಳು ಸೇರಿದಂತೆ ಆರು ಜನರ ರಕ್ತದ ಮಾದರಿ ಫಲಿತಾಂಶ ಬಂದಿದ್ದು, ಇವರಿಗೆಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ.

‘ಈ ಆರು ಜನರು ವಿದ್ಯಾರ್ಥಿ ಜತೆ ನೇರ ಸಂಪರ್ಕ ಹೊಂದಿದ್ದರು. ಆದರೆ ಇವರಿಗೆ ವೈರಾಣು ಹರಡಿಲ್ಲ ಎನ್ನುವುದು ನಮಗೆ ದೊಡ್ಡ ನಿರಾಳತೆ ತಂದಿದೆ. ಏಳನೇ ವ್ಯಕ್ತಿಯ ರಕ್ತದ ಮಾದರಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಪ್ರತಿಕ್ರಿಯಿಸಿದ್ದಾರೆ.

ಈ ಆರು ಜನರ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.

ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಯ ಆರೋಗ್ಯ ಸ್ಥಿರವಾಗಿದೆ. ವಿದ್ಯಾರ್ಥಿ ಜತೆ ಸಂಪರ್ಕಕ್ಕೆ ಬಂದಿದ್ದ ಒಟ್ಟು 314 ಜನರಲ್ಲಿ ಏಳು ಜನರನ್ನು ವೈದ್ಯಕೀಯ ಆಸ್ಪತ್ರೆಯ ಕಾಲೇಜಿನ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದುಬೈನಲ್ಲಿರುವ ಕೇರಳಿಗರಿಗೆ ಆತಂಕ

ದುಬೈ(ಪಿಟಿಐ) :ಕೇರಳದಲ್ಲಿ ವ್ಯಕ್ತಿಯೊಬ್ಬರಿಗೆ ನಿಫಾ ಸೋಂಕು ಇರುವುದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುಬೈಯಲ್ಲಿರುವ ಕೇರಳ ಮೂಲದ ಕುಟುಂಬಗಳಿಗೆ ಆತಂಕಉಂಟಾಗಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕೇರಳದ 23 ವರ್ಷದ ಕಾಲೇಜು ವಿದ್ಯಾರ್ಥಿಗೆ ಮಿದುಳು ನಿಷ್ಕ್ರಿಯವಾಗುವ ಈ ನಿಫಾ ಸೋಂಕು ತಗುಲಿರುವುದು ವರದಿಯಾಗಿದೆ. ಕಳೆದ ವರ್ಷ ಈ ಸೋಂಕಿಗೆ ಕೇರಳದಲ್ಲಿ 17 ಮಂದಿ ಬಲಿಯಾಗಿದ್ದರು.

ಸೋಂಕು ತಗುಲಿದ ಎರ್ನಾಕುಲಂ ಜಿಲ್ಲೆಯ ರೋಗಿಯು ಸಂವಹನ ನಡೆಸಿದ ವಿವಿಧ ಜಿಲ್ಲೆಗಳ ಒಟ್ಟು 311 ಜನರನ್ನು ಪರಿಶೀಲನೆಯಲ್ಲಿ ಇಡಲಾಗಿದೆ.

ಎರ್ನಾಕುಲಂ ಮೂಲದ ಪ್ರಸ್ತುತ ಶಾರ್ಜಾ ನಿವಾಸಿ ಶ್ರೀದೇವಿ ರಾಜೇಂದ್ರನ್‌ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ‘ರೋಗಿಯು ನನ್ನ ಮಗನ ಶಿಕ್ಷಣ ಸಂಸ್ಥೆಯಲ್ಲಿಯೇ ಓದುತ್ತಿದ್ದ. ಊರಲ್ಲಿ ಪರಿಸ್ಥಿತಿ ಹೇಗಿದೆಯೋ ಎಂಬ ಆತಂಕ ಕಾಡಿದೆ. ವೈರಸ್‌ ಸೋಂಕು ಹೇಗೆ ಆರಂಭವಾಗಿದೆ ಎಂಬ ಮಾಹಿತಿಯೇ ಇಲ್ಲ. ಜನರು ತುಂಬ ಭೀತಿಗೊಳಗಾಗಿದ್ದಾರೆ’ ಎಂದು ಹೇಳಿದ್ದಾರೆ.

‘ಕೇರಳದಲ್ಲಿ ಕೆಲವು ಕಾಲೊನಿಗಳಲ್ಲಿ ಬಾವಲಿಗಳು ತುಂಬಾ ಇವೆ. ಈಗ ನಿಫಾ ಸೋಂಕಿನ ಸುದ್ದಿ ಕೇಳಿದ ಮೇಲೆ ಜನರು ಬಾವಲಿಗಳ ಬಗ್ಗೆ ಭಯಪಟ್ಟಿದ್ದಾರೆ. ಜನರು ಮಾಸ್ಕ್‌ ಧರಿಸಿಯೇ ಓಡಾಡುತ್ತಿದ್ದಾರೆ. ’ ಎಂದು ಅವರು ಹೇಳಿದರು. ದುಬೈಯಲ್ಲಿ ಹಣ್ಣು ತರಕಾರಿ ಮಾರುತ್ತಿದ್ದ ವ್ಯಾಪಾರಿಯೊಬ್ಬರು ಕೇರಳದಿಂದ ಹಣ್ಣು ತರಕಾರಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಆದರೆ ಅಧಿಕೃತವಾಗಿ ಆಮದು ಮಾಡಿಕೊಳ್ಳಲು ಯಾವುದೇ ನಿಷೇಧ ಹೇರಿಲ್ಲ.

’ತಾತ್ಕಾಲಿಕವಾಗಿ ಹಣ್ಣು ತರಕಾರಿ ಆಮದು ನಿಲ್ಲಿಸಿದ್ದೇವೆ. ಅಂದರೆ ಒಟ್ಟು ಉತ್ಪನ್ನದ ಸುಮಾರು ಶೇಕಡ 25ರಷ್ಟು ಪ್ರಮಾಣದ ಆಮದನ್ನು ನಿಲ್ಲಿಸಲಾಗಿದೆ’ ಎಂದು ಹಣ್ಣು ತರಕಾರಿ ಮಾರುವ ಫಾರ್ಮ್‌ ಚಿಪ್‌ ಕಂಪೆನಿಯ ಸಿಇಒ ಪಿ.ಸಿ. ಕಬೀರ್‌ ಹೇಳಿದ್ದಾರೆ.

’ಕಳೆದ ವರ್ಷ ಕೂಡ ನಿಫಾ ಸೋಂಕು ಇದ್ದಾಗ, ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿತ್ತು. ಈ ಸೋಂಕಿನ ಭೀತಿ ಹೆಚ್ಚಿದರೆ ಮತ್ತೆ ನಿಷೇಧ ಹೇರಬಹುದು ಎನಿಸುತ್ತದೆ’ ಎಂದು ಅವರ ಹೇಳಿಕೆಯನ್ನು ಸ್ಥಳೀಯ ಪತ್ರಿಕೆ ’ಖಲೀಜ್‌ ಟೈಮ್ಸ್‌’ ಪ್ರಕಟಿಸಿದೆ. ಕೇರಳಕ್ಕೆ ತೆರಳುವ ಪ್ರವಾಸಿಗರೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದೂ ಹೇಳಿದ್ದಾರೆ.

ನಿಫಾ ಸೋಂಕು ಬಾವಲಿ, ಹಂದಿ ಮುಂತಾದ ಪ್ರಾಣಿಗಳಿಂದಲೂ ಹರಡಬಹುದು. ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಂದ ಮನುಷ್ಯರಿಗೂ ಹರಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT