ಗುರುವಾರ , ನವೆಂಬರ್ 21, 2019
20 °C

ನಿರ್ಭಯಾ ಪ್ರಕರಣ: ಕ್ಷಮಾದಾನಕ್ಕೆ ಅರ್ಜಿ ಹಾಕಲು ಅಪರಾಧಿಗಳಿಗೆ 7 ದಿನ ಅವಕಾಶ

Published:
Updated:

ನವದೆಹಲಿ: ‘ರಾಷ್ಟ್ರಪತಿಗಳ ಎದುರು ಕ್ಷಮಾದಾನಕ್ಕೆ ಅರ್ಜಿ ಹಾಕಲು ನಿಮಗಿನ್ನು ಏಳು ದಿನಗಳ ಅವಕಾಶ ಮಾತ್ರ ಉಳಿದಿದೆ’ ಎಂದು ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಾದ ಅಕ್ಷಯ್ ಠಾಕೂರ್, ವಿನಯ್‌ ಶರ್ಮಾ, ಪವನ್ ಗುಪ್ತ ಮತ್ತು ಮುಖೇಶ್ ಸಿಂಗ್ ಅವರಿಗೆ ತಿಹಾರ್‌ ಜೈಲಿನ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಗಳು ಮುಗಿದಿವೆ. ನಿಮ್ಮೆದುರು ಒಂದು ಕೊನೆಯ ಆಯ್ಕೆ ಇದೆ. ನೀವು ಕ್ಷಮಾದಾನ ಕೋರಿ 7 ದಿನಗಳ ಒಳಗೆ ರಾಷ್ಟ್ರಪತಿಗೆ ಅರ್ಜಿ ಹಾಕಬಹುದು’ ಎಂದು ನೊಟೀಸ್‌ನಲ್ಲಿ ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹೈಕೋರ್ಟ್‌ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

‘ಒಂದು ವೇಳೆ ನೀವು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸದಿದ್ದರೆ ನಿಮಗೆ ಕ್ಷಮಾದಾನ ಕೋರುವ ಆಸಕ್ತಿಯಿಲ್ಲವೆಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. ನಿಮ್ಮ ವಿರುದ್ಧ ನ್ಯಾಯಾಲಯ ನೀಡಿರುವ ತೀರ್ಪಿನ ಜಾರಿಗೆ ಮುಂದಿನ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ’ ಎಂದು ನೊಟೀಸ್ ಹೇಳಿದೆ.

ಓರ್ವ ಅಪರಾಧಿ ಸಲ್ಲಿಸುವ ಅರ್ಜಿ ಎಲ್ಲ ನಾಲ್ವರಿಗೂ ಅನ್ವಯವಾಗಲಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಅಪರಾಧಿಗಳ ಎದುರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೊಟೀಸ್‌ ಓದಲಾಗಿದೆ. ಈ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್‌ ಸಹ ಮಾಡಿಕೊಂಡಿದ್ದೇವೆ’ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೊಯೆಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ದೃಷ್ಟಿಯನ್ನೇ ಬದಲಿಸಿದ ಪ್ರಕರಣ

ಅ.29ರಂದು ನೊಟೀಸ್‌ ಪ್ರತಿಯನ್ನು ಅಪರಾಧಿಗಳಿಗೆ ನೀಡಲಾಗಿದೆ.

ಅಪರಾಧಿಗಳಿಗೆ ನೊಟೀಸ್‌ ನೀಡಿರುವ ಮಾಹಿತಿಯನ್ನು ತಿಹಾರ್‌ ಜೈಲಿನ ಅಧಿಕಾರಿಗಳು ಮರಣದಂಡನೆ ವಿಧಿಸಿದ ನ್ಯಾಯಾಲಯಕ್ಕೆ ನೀಡಿ, ವಾರಂಟ್ ಪಡೆದುಕೊಳ್ಳಲಿದ್ದಾರೆ. ಇತ್ತ ಜೈಲಿನಲ್ಲಿ ನೊಟೀಸ್‌ ಸಿಕ್ಕ ನಂತರ ಅಪರಾಧಿಗಳು ಉದ್ವಿಗ್ನರಾಗಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಯುವತಿಯ ತಾಯಿ, ‘ಜೈಲು ಅಧಿಕಾರಿಗಳ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಏಳು ವರ್ಷಗಳ ನಂತರ ನನ್ನ ಮಗಳಿಗೆ ನ್ಯಾಯ ಸಿಗಲಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಎಲ್ಲರಿಗೂ ಇದು ಒಂದು ಪಾಠ’ ಎಂದು ಹೇಳಿದ್ದಾರೆ.

ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಪ್ರತಿಕ್ರಿಯಿಸಿ, ತಿಹಾರ್ ಅಭಿವೃದ್ಧಿ ಮಂಡಳಿಯಿಂದ ಈ ಕುರಿತು ಮಾಹಿತಿ ಸಿಕ್ಕಿದೆ. ನಾನು ಅಕ್ಷಯ ಠಾಕೂರ್ ಪರವಾಗಿ ಮೊದಲು ಕ್ಷಮಾದಾನ ಅರ್ಜಿ ಸಲ್ಲಿಸುತ್ತೇನೆ. ನಂತರ ಇತರರ ಪರವಾಗಿಯೂ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)