ನಿತಿನ್‌ ಗಡ್ಕರಿ ಸಂದರ್ಶನ: ’ವಾಯುದಾಳಿಯನ್ನು ಯಾರೂ ರಾಜಕೀಯಕ್ಕೆ ಬಳಸಬಾರದು’

ಶನಿವಾರ, ಮಾರ್ಚ್ 23, 2019
31 °C

ನಿತಿನ್‌ ಗಡ್ಕರಿ ಸಂದರ್ಶನ: ’ವಾಯುದಾಳಿಯನ್ನು ಯಾರೂ ರಾಜಕೀಯಕ್ಕೆ ಬಳಸಬಾರದು’

Published:
Updated:

ಬಿಜೆಪಿಯಲ್ಲಿ ನಿತಿನ್ ಗಡ್ಕರಿ ಅವರದು ಪ್ರಧಾನಿ ನರೇಂದ್ರ ಮೋದಿ ನಂತರದ ಸ್ಥಾನ. ಸಾರಿಗೆ, ಜಲ ಸಂಪನ್ಮೂಲ ಮತ್ತು ಗಂಗಾ ಶುದ್ಧೀಕರಣದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಅನುಭವಿ. ಪಕ್ಷ ಮತ್ತು ಸರ್ಕಾರದ ನಡೆಯನ್ನು ಟೀಕಿಸುವಷ್ಟು ಛಾತಿ ಉಳ್ಳವರು. ವಿಪಕ್ಷ ಸದಸ್ಯರ ಬೇಡಿಕೆಗೂ ಸ್ಪಂದಿಸಿ ಉತ್ತಮ ಹೆಸರು ಪಡೆದವರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಂದರ್ಶನ.

* ಪುಲ್ವಾಮಾ, ಬಾಲಾಕೋಟ್‌ ಘಟನೆಗಳು ಚುನಾವಣಾ ಚಿತ್ರಣ ಬದಲಿಸಿವೆ ಎಂಬುದು ನಿಮ್ಮ ಭಾವನೆಯೇ?

ರಾಜಕೀಯಕ್ಕೆ ಈ ಘಟನೆ ಬಳಸಿಕೊಳ್ಳಬಾರದು ಎಂಬುದೇ ನನ್ನ ಭಾವನೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ರಾಷ್ಟ್ರೀಯ ಭದ್ರತೆ ಎಲ್ಲಕ್ಕಿಂತಲೂ ಮಿಗಿಲು. ಇದು ರಾಜಕೀಯ ಅಜೆಂಡಾ ಆಗಕೂಡದು. ರಾಷ್ಟ್ರದ ಪ್ರತಿ ನಾಗರಿಕನ ರಕ್ಷಣೆ ಆಯಾ ಸರ್ಕಾರಗಳ ಕರ್ತವ್ಯ. ಈಗಾಗಲೇ ಮೂರು ಯುದ್ಧಗಳಲ್ಲಿ ಸೋತಿರುವ ಪಾಕಿಸ್ತಾನ, ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಸಹಾಯದೊಂದಿಗೆ ಪರೋಕ್ಷ ಯುದ್ಧಕ್ಕೆ ಮುಂದಾಗಿದೆ. ಅವರಿಗೆ ನಾವು ದಾಳಿ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದೇವೆ. ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ನಮಗೆ ದೊರೆತಿದ್ದು, ಪಾಕಿಸ್ತಾನ ಏಕಾಂಗಿ
ಯಾಗಿದೆ. ಹೀಗಿದ್ದರೂ ಸರ್ಕಾರದ ನಿಲುವನ್ನು ವಿಪಕ್ಷಗಳು ವಿರೋಧಿಸಿದರೆ ಅದೇ ಮಾದರಿಯಲ್ಲಿ ಪಾಕಿಸ್ತಾನದ ಜನರೂ ನಮ್ಮನ್ನು ವಿರೋಧಿಸುತ್ತಾರೆ. ಇದು ದೇಶದ ಹಿತಾಸಕ್ತಿಗೆ ಮಾರಕ.

* 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಬಿಜೆಪಿ ಹೇಳಿದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿಕರ ಮತವನ್ನು ಹೇಗೆ ಪಡೆಯುವಿರಿ?

ನಾವು ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ. ಕೆಲವು ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಸಕ್ಕರೆಯ ಬೆಲೆ ಭಾರತದಲ್ಲಿ ನಿರ್ಧರಿವಾಗದೆ, ಬ್ರೆಜಿಲ್‌ನಲ್ಲಿ ನಿರ್ಧರಿತವಾಗುತ್ತಿದೆ. ಆದರೂ ನಮ್ಮ ಕಬ್ಬು ಬೆಳೆಗಾರರಿಗೆ ಅಲ್ಲಿಯ ಬೆಳೆಗಾರರಿಗಿಂತಲೂ ಅಧಿಕ ಬೆಲೆ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು, ರಫ್ತು ಹೆಚ್ಚಳವಾಗಬೇಕಿದೆ. ಸರ್ಕಾರ ಇದರತ್ತ ಗಮನಹರಿಸಿದೆ.

*  ಕಾವೇರಿ ಜಲವಿವಾದ ಬಗೆಹರಿಸಲು ಕೇಂದ್ರ ಸರ್ಕಾರದ ಬಳಿ ಯೋಜನೆ ಇದೆಯೇ?

ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ಕಾವೇರಿ ವಿವಾದ ಕೇವಲ 45 ಟಿಎಂಸಿ ಅಡಿ ನೀರಿಗೆ ಸೀಮಿತ. ಈ ವಿವಾದವನ್ನು ಬಗೆಹರಿಸಲು ನಮ್ಮ ಬಳಿ ಯೋಜನೆ ಇದೆ. ಪೋಲಾವರಂ ಯೋಜನೆಯಿಂದ ಗೋದಾವರಿಯ ಹಿನ್ನೀರನ್ನು ಕೃಷ್ಣಾ ನದಿಗೆ ಕೊಂಡೊಯ್ದು, ಅಲ್ಲಿಂದ ಪೆನ್ನಾರ್‌ಗೆ ಹರಿಸಲಾಗುತ್ತದೆ. ನಂತರ ಅದೇ ನೀರನ್ನು ತಮಿಳುನಾಡಿನ ಕಟ್ಟಕಡೆಯ ಕಾವೇರಿ ಕಣಿವೆಯತ್ತ ತಿರುವಲಾಗುತ್ತದೆ. ಇದು ನನ್ನ ಕನಸಿನ ಯೋಜನೆ. ಈ ಮೂಲಕ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಲವಿವಾದ ಅಂತ್ಯವಾಗಲಿದೆ ಎಂಬುದೇ ನನ್ನ ಆಶಯ. ತೂತ್ತುಕುಡಿ, ಕಾಂಡ್ಲಾ ಮತ್ತಿತರ ಕಡೆ ಸಮುದ್ರದ ನೀರಿನಿಂದ ಉಪ್ಪಿನಂಶ ಬೇರ್ಪಡಿಸುವ ಮಹತ್ವದ ಯೋಜನೆಗೂ ಅನುಮತಿ ನೀಡಲಾಗಿದೆ. ಈ ಯೋಜನೆಯೂ ಕರ್ನಾಟಕ ಮತ್ತು ತಮಿಳುನಾಡಿನ ಜಲವಿವಾದ ಅಂತ್ಯಕ್ಕೆ ಪೂರಕ.

* ನೋಟು ರದ್ದತಿ ಮತ್ತು ಜಿಎಸ್‌ಟಿ ಕಾಯ್ದೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆಯಲ್ಲ?

ಜಿಎಸ್‌ಟಿ ಪ್ರಸ್ತಾವಕ್ಕೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಬೆಂಬಲ ನೀಡಿವೆ. ಆರಂಭದಲ್ಲಿ ಕೆಲವು ಸಮಸ್ಯೆಗಳಿದ್ದವು. ನಂತರ ನಾವು ಕೈಗೊಂಡ ನಿರ್ಧಾರಗಳಿಂದ ಜನತೆ ನಿರಾಳರಾಗಿದ್ದಾರೆ. ಈಗಂತೂ ಜಿಎಸ್‌ಟಿ ಒಂದು ಸಮಸ್ಯೆಯೇ ಅಲ್ಲ. ನೋಟು ರದ್ದತಿಯೂ ಅಷ್ಟೇ. ಕಪ್ಪು ಹಣವನ್ನು ನಿಯಂತ್ರಿಸಬೇಕೆಂಬ ನಮ್ಮ ಪಕ್ಷದ ಪ್ರಣಾಳಿಕೆಯ ಅನ್ವಯವೇ ಕ್ರಮ ಕೈಗೊಳ್ಳಲಾಗಿದೆ. ಅದರ ಫಲಿತಾಂಶ ಎಲ್ಲರೆದುರೂ ಇದೆ.

* ಆದರೆ ಕಪ್ಪು ಹಣ ಈಗಲೂ ಚಲಾವಣೆಯಲ್ಲಿದೆಯಲ್ಲ?

ಇಲ್ಲ ಇಲ್ಲ. ಕಪ್ಪು ಹಣ ನಿವಾರಣೆ ಆಗಿರುವ ಕಾರಣವೇ ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ಬರುತ್ತಿರುವ ಆದಾಯ ಹೆಚ್ಚತೊಡಗಿದೆ. ನೋಟು ರದ್ದತಿಯಿಂದಾದ ನೇರ ಲಾಭವನ್ನು ಇದು ಸೂಚಿಸುತ್ತದೆ.

* ಹಾಗಾದರೆ ನೋಟು ರದ್ದತಿ ಯಶಸ್ವಿಯಾಗಿದೆ ಎಂದು ಹೇಳುತ್ತೀರಾ? ಅದನ್ನು ಸಮರ್ಥಿಸಿಕೊಂಡು ಮತ ಯಾಚಿಸುತ್ತೀರಾ?

ನೋಟು ರದ್ದತಿ ನೂರಕ್ಕೆ ನೂರು ಯಶಸ್ವಿಯಾಗಿದೆ. ಇದನ್ನು ಸಮರ್ಥಿಸಿಕೊಂಡು ಮತ ಯಾಚಿಸುವುದು ನಿಶ್ಚಿತ. ಈ ಬಗ್ಗೆ ಜನರ ಮನವೊಲಿಸುತ್ತೇವೆ. ಹೊಸ ಸಾಹಸಕ್ಕೆ ಕೈಹಾಕಿದಾಗ ಆರಂಭಿಕ ಸಮಸ್ಯೆಗಳು ಸಹಜ. ಸಮಸ್ಯೆಗಳು ಒಂದೊಂದಾಗಿ ದೂರವಾಗಿದ್ದು ಜನ ಸಂತುಷ್ಟರಾಗಿದ್ದಾರೆ.

* ಲೋಕಸಭೆ ಚುನಾವಣೆಗೆ ಒಂದು ತಿಂಗಳು ಬಾಕಿ ಇದೆ. ಕೇಂದ್ರ ಮಂತ್ರಿಯಾಗಿ ಮತ ಯಾಚಿಸಲು ನೀವು ಜನರ ಮುಂದೆ ಇರಿಸುವ ಮೂರು ಮುಖ್ಯ ಸಾಧನೆಗಳು ಯಾವುವು?

ಮೊದಲಿಗೆ ಗಂಗಾ ನದಿ ಕುರಿತ ಸಾಧನೆಯನ್ನು ಹೇಳಿಕೊಳ್ಳಬೇಕು. ಗಂಗಾ ಶುದ್ಧವಾಗಿದೆ ಮತ್ತು ನಿರಂತರ ಹರಿಯುತ್ತಿದೆ ಎಂಬ ಭಾವನೆ ಮೂಡಿದೆ. ಶುದ್ಧೀಕರಣಕ್ಕೆಂದೇ ₹ 26,000 ಕೋಟಿ ವೆಚ್ಚದ 286 ಯೋಜನೆಗಳನ್ನು ಆರಂಭಿಸಿದ್ದೇವೆ. ಗಂಗೆ ಕಲ್ಮಶವಾಗುತ್ತಿರುವ ಕಾನ್ಪುರ, ವಾರಾಣಸಿ ಮತ್ತು ಅಲಹಾಬಾದ್‌ ನಗರಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗಾಗಿ ಜಗತ್ತಿನ ಅತ್ಯುತ್ತಮ ತಂತ್ರಜ್ಞಾನವನ್ನು ಆಯ್ದುಕೊಳ್ಳಲಾಗಿದೆ. ಗಂಗಾ, ಯಮುನಾ ನದಿಗಳ 40ಕ್ಕೂ ಅಧಿಕ ಉಪ ನದಿಗಳ ಶುದ್ಧೀಕರಣದತ್ತಲೂ ಗಮನ ಹರಿಸಲಾಗಿದೆ. ಇದುವರೆಗೆ ಶೇ 30ರಷ್ಟು ಕೆಲಸ ಪೂರ್ಣಗೊಂಡಿದ್ದು, ಫಲಿತಾಂಶ ಅತ್ಯುತ್ತಮವಾಗಿದೆ. ಮುಂದಿನ ವರ್ಷದ ಮಾರ್ಚ್‌ ಒಳಗಾಗಿ ಗಂಗಾ ನದಿ ಸಂಪೂರ್ಣ ಶುದ್ಧಗೊಳ್ಳಲಿದೆ. ಜೊತೆಗೆ ಗಂಗೆಯ ನೀರು ನಿರಂತರ ಹರಿಯುವುದೂ ಸರ್ಕಾರದ ಇಚ್ಛೆ.

ಎರಡನೆಯದಾಗಿ, ನಾವು 14 ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ದೆಹಲಿಯ ರಿಂಗ್‌ ರಸ್ತೆಯ ಅಭಿವೃದ್ಧಿಯಿಂದ ಶೇ 30ರಷ್ಟು ವಾಯು ಮಾಲಿನ್ಯ ತಗ್ಗಿದೆ. ನಾಲ್ಕೂವರೆ ಗಂಟೆಯ ಪ್ರಯಾಣವನ್ನು 45 ನಿಮಿಷಗಳಿಗೆ ಇಳಿಸಿರುವ ದೆಹಲಿ– ಮೀರಠ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಮುಂಬೈ– ದೆಹಲಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಯೋಜನೆಯನ್ನೂ ಆರಂಭಿಸಲಾಗಿದೆ. ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣದ ಅತ್ಯಂತ ಹಿಂದುಳಿದ, ಬುಡಕಟ್ಟು ಪ್ರದೇಶಗಳಲ್ಲಿನ ಈ ಹೆದ್ದಾರಿಗಾಗಿ ₹ 1 ಲಕ್ಷ ಕೋಟಿ ವ್ಯಯಿಸಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಅಡಿ ₹ 16,000 ಕೋಟಿ ಉಳಿತಾಯ ಮಾಡಲಾಗಿದೆ. ಈ ಹೆದ್ದಾರಿ ಪೂರ್ಣಗೊಂಡಲ್ಲಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ರೂಪಾಂತರಕ್ಕೆ ಮಾದರಿಯಾಗಲಿದೆ.

ದೇಶವು ಜಗತ್ತಿನ ನಂಬರ್‌ 1 ಹೆದ್ದಾರಿ ಜಾಲವಾಗಿ ಹೊರಹೊಮ್ಮಿರುವುದು ಮೂರನೇ ಪ್ರಮುಖ ಅಂಶ. 93,000 ಕಿಲೋಮೀಟರ್‌ ಇದ್ದ ಹೆದ್ದಾರಿಗಳ ಉದ್ದ ಈಗ 2 ಲಕ್ಷ ಕಿಲೋಮೀಟರ್‌ಗೆ ಹೆಚ್ಚಲಿದೆ. ಈ ಪೈಕಿ ಈಗಾಗಲೇ 40,000 ಕಿಲೋಮೀಟರ್‌ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ನಾನು ಅಧಿಕಾರ ಸ್ವೀಕರಿಸಿದಾಗ ನಿತ್ಯ 2 ಕಿಲೋ ಮೀಟರ್‌ನಷ್ಟಿದ್ದ ಹೆದ್ದಾರಿ ನಿರ್ಮಾಣ ಪ್ರಮಾಣ ಈಗ 35 ಕಿ.ಮೀಗೆ ಹೆಚ್ಚಿದೆ.

* ಚುನಾವಣೆ ಪ್ರಚಾರದಲ್ಲಿ ಯಾವ ಅಂಶಕ್ಕೆ ಒತ್ತು ನೀಡಲಿದ್ದೀರಿ?

ನಮ್ಮ ಸರ್ಕಾರವು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಗತಿ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಜಲ ಸಾರಿಗೆಯ ಬಳಕೆ ನಮ್ಮ ಸರ್ಕಾರದ ಮೊತ್ತ ಮೊದಲ ಕ್ರಾಂತಿಕಾರಿ ನಿರ್ಧಾರ. 111 ನದಿಗಳಗುಂಟ ಜಲ ಮಾರ್ಗ ನಿರ್ಮಿಸುವುದು ನಮ್ಮ ಗುರಿ. ಈಗಾಗಲೇ 10 ಯೋಜನೆಗಳು ಆರಂಭವಾಗಿವೆ. ನಮ್ಮ ಮಹಾನ್‌ ಸಾಧನೆ ಗಂಗಾ ಜಲ ಮಾರ್ಗ ಇನ್ನೇನು ಪೂರ್ಣಗೊಳ್ಳಲಿದೆ. ಬಡತನ ಮತ್ತು ನಿರುದ್ಯೋಗ ನಮ್ಮ ದೊಡ್ಡ ಸಮಸ್ಯೆಗಳಾಗಿವೆ. ನಿರುದ್ಯೋಗ ಕೊನೆಗಾಣಿಸಲು ಹೆಚ್ಚು ಹೂಡಿಕೆ ಅಗತ್ಯ. ಕೃಷಿ ಕ್ಷೇತ್ರದ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಬೇಕು. ಅಭಿವೃದ್ಧಿ ಹಾಗೂ ಬಡತನ ನಿವಾರಣೆಗಳೇ ನಮ್ಮ ಪಕ್ಷದ ನಮ್ಮ ಗುರಿಯಾಗಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ ಸೂಕ್ತ ಆರ್ಥಿಕ ನೀತಿಯನ್ನು ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ.

* ಉದ್ಯೋಗ ಸೃಷ್ಟಿಯ ಬಗ್ಗೆ ಏನು ಹೇಳುತ್ತೀರಿ?

ಹೆದ್ದಾರಿ ಅಭಿವೃದ್ಧಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಲ್ಲಿ ಈ ಸಮಸ್ಯೆಗೆ ಕೊಂಚ ಪರಿಹಾರ ಲಭಿಸಲಿದೆ. ಜೊತೆಗೆ ನಿರ್ಮಾಣ ಸಂಬಂಧಿ ಉದ್ಯಮವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ನಿರ್ಮಾಣ ವಲಯದಲ್ಲಿ ಬಳಕೆಯಾಗುವ ಉಪಕರಣಗಳ ತಯಾರಿಕೆ ಕ್ಷೇತ್ರವೂ ಶೇ 80ರಷ್ಟು ಅಭಿವೃದ್ಧಿ ಸಾಧಿಸಿದೆ. ರಸ್ತೆ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರವೂ ಉದ್ಯೋಗ ಒದಗಿಸುತ್ತಿದೆ.

ಕೃಷಿಯನ್ನು ಇಂಧನ ಮೂಲವನ್ನಾಗಿ ಬದಲಿಸುವ ಅಗತ್ಯವೂ ಇದೆ. ಎಥೆನಾಲ್‌ ಬಳಕೆಯನ್ನು ಪ್ರೋತ್ಸಾಹಿಸಿದಲ್ಲಿ ಇಂಧನ ಆಮದು ₹ 2 ಲಕ್ಷ ಕೋಟಿಯಷ್ಟು ತಗ್ಗಲಿದೆ. ಅದೇ ಹಣ ಕೃಷಿ ವಲಯದತ್ತ ಮುಖಮಾಡಲಿದೆ. ಆಹಾರೇತರ ಬಳಕೆಯ ಎಣ್ಣೆ ಬೀಜಗಳಿಂದ ವಿಮಾನಯಾನ ಇಂಧನ ತಯಾರಿಕೆಯತ್ತ ಗಮನ ಹರಿಸಲಾಗಿದೆ. ಕೆಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ಯಶಸ್ವಿಯಾಗಿ ಈ ಮಾದರಿಯ ಇಂಧನ ಬಳಸಿವೆ. ಹೆಚ್ಚಿನ ಪ್ರಮಾಣದಲ್ಲಿ ಇಂತಹ ಬೆಳೆಗಳಿಗೆ ಪ್ರೋತ್ಸಾಹ ನೀಡಿದಲ್ಲಿ ಕೃಷಿ ಕ್ಷೇತ್ರದಲ್ಲೂ ಅಧಿಕ ಉದ್ಯೋಗ ಸೃಷ್ಟಿ ಸಾಧ್ಯ.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !