ಶುಕ್ರವಾರ, ಆಗಸ್ಟ್ 12, 2022
26 °C

ಲಾಕ್‌ಡೌನ್‌ಗೆ ಪೂರ್ಣ ಸಂಬಳ: ಸಂಧಾನಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೈಗಾರಿಕೆಗಳು ಮತ್ತು ಕಾರ್ಮಿಕರು ಪರಸ್ಪರ ಪೂರಕ. ಹಾಗಾಗಿ, ಉದ್ಯೋಗದಾತರು ಮತ್ತು ಉದ್ಯೋಗಿಗಳು ಪರಸ್ಪರ ಚರ್ಚಿಸಿ ಲಾಕ್‌ಡೌನ್‌ ಅವಧಿಗೆ ಪೂರ್ಣ ಸಂಬಳ ಪಾವತಿ ವಿಚಾರದಲ್ಲಿ ನಿರ್ಧಾರವೊಂದಕ್ಕೆ ಬರಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

ಲಾಕ್‌ಡೌನ್‌ ಅವಧಿಗೆ ಪೂರ್ಣ ಸಂಬಳ ಪಾವತಿಸದ ಖಾಸಗಿ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜುಲೈ ಕೊನೆಯವರೆಗೆ ಅವಕಾಶ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕೌಲ್‌ ಮತ್ತು ಎಂ.ಆರ್‌. ಶಾ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕಾರ್ಖಾನೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸಂಧಾನಕ್ಕೆ ಬೇಕಾದ ನೆರವನ್ನು ರಾಜ್ಯ ಸರ್ಕಾರಗಳು ನೀಡಬೇಕು. ಇದರ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ವರದಿ ನೀಡಬೇಕು ಎಂದು ಪೀಠವು ಸೂಚಿಸಿದೆ.

ಲಾಕ್‌ಡೌನ್‌ ಅವಧಿಗೆ ಪೂರ್ಣ ಸಂಬಳವನ್ನು ಪಾವತಿಸುವುದು ಕಡ್ಡಾಯ ಎಂದು ಗೃಹ ಸಚಿವಾಲಯವು ಮಾರ್ಚ್‌ 29ರಂದು ಹೊರಡಿಸಿದ್ದ ಆದೇಶದ ಕಾನೂನು ಸಮ್ಮತಿಯ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ವಿವಿಧ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಜುಲೈ ಕೊನೆಯ ವಾರಕ್ಕೆ ಮುಂದೂಡಲಾಗಿದೆ.

ಈಗ ನೀಡಿರುವ ಆದೇಶವನ್ನು ಕಾರ್ಮಿಕ ಇಲಾಖೆಗಳ ಮೂಲಕ ಪ್ರಸಾರ ಮಾಡಿ ಸಂಧಾನ ಪ್ರಕ್ರಿಯೆಗೆ ನೆರವಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೀಠವು ನಿರ್ದೇಶನ ನೀಡಿದೆ.

ಪೂರ್ಣ ವೇತನ ಪಾವತಿಯನ್ನು ಕಡ್ಡಾಯ ಮಾಡಿದ್ದ ಕೇಂದ್ರವು, ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಉದ್ಯೋಗದಾತರ ಮನವೊಲಿಸಲು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿತ್ತು.

ತನ್ನ ಆದೇಶವನ್ನು ಸಮರ್ಥಿಸಿಕೊಂಡು ಕೇಂದ್ರವು ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನೂ ಈ ಹಿಂದೆ ಸಲ್ಲಿಸಿತ್ತು. ಸಂಬಳ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳುವ ಕಂಪನಿಗಳು ತಮ್ಮ ಖರ್ಚು–ವರಮಾನದ ಲೆಕ್ಕಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಗುತ್ತಿಗೆ ಮತ್ತು ದಿನಗೂಲಿ ಕಾರ್ಮಿಕರ ಆರ್ಥಿಕ ಮುಗ್ಗಟ್ಟು ಶಮನ ಮಾಡುವುದಕ್ಕಾಗಿ ಪೂರ್ಣ ವೇತನ ಪಾವತಿಸಬೇಕು ಎಂಬ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ನಿರ್ದೇಶನವನ್ನು ಮೇ 18ರಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಹೇಳಿದೆ.

ನಿರರ್ಥಕ ಅರ್ಜಿ: ಪೂರ್ಣ ಸಂಬಳ ಪಾವತಿಯನ್ನು ಕಡ್ಡಾಯಗೊಳಿಸಿ ಮಾರ್ಚ್‌ 29ರಂದು ನೀಡಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಮಾಡಬೇಕು. ಅಧಿಸೂಚನೆಯೇ ರದ್ದಾಗಿರುವುದರಿಂದ ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಅರ್ಥಹೀನ ಎಂದು ಸರ್ಕಾರವು ವಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು