ಶನಿವಾರ, ಡಿಸೆಂಬರ್ 14, 2019
24 °C

ರೈಲ್ವೆ ಖಾಸಗೀಕರಣವಿಲ್ಲ, ಹೊರಗುತ್ತಿಗೆ ಮಾತ್ರ: ಗೋಯಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಬದಲಿಗೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ವಾಣಿಜ್ಯ ಸೇವೆಗಳು ಮತ್ತು ರೈಲುಗಳೊಳಗೆ ನೀಡುವ ಸೌಲಭ್ಯಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ’ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು.

‘ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸರ್ಕಾರದ ಉದ್ದೇಶವೇ ವಿನಾ, ರೈಲ್ವೆ ಸೇವೆಯನ್ನು ಖಾಸಗೀಕರಣಗೊಳಿಸುವುದಲ್ಲ. ರೈಲ್ವೆ ಯಾವತ್ತಿಗೂ ಭಾರತದ ಮತ್ತು ಭಾರತೀಯರ ಆಸ್ತಿಯಾಗಿಯೇ ಇರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರೈಲ್ವೆ ಸೇವೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲು ಮತ್ತು ಗುಣಮಟ್ಟದ ಸೇವೆ ನೀಡಬೇಕಾದರೆ ಇಲಾಖೆಗೆ ಮುಂದಿನ 12 ವರ್ಷಗಳಲ್ಲಿ ₹ 50 ಲಕ್ಷ ಕೋಟಿ ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟವಾಗಿರುವುದರಿಂದ ಕೆಲವು ಸೇವೆಗಳನ್ನು ಹೊರಗುತ್ತಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಸಚಿವರು ತಿಳಿಸಿದರು.

ಇಲಾಖೆಗೆ ಕಾರ್ಪೊರೇಟ್‌ ಸ್ವರೂಪ ನೀಡುವುದರಿಂದ ಉದ್ಯೋಗಿಗಳಿಗೆ ತೊಂದರೆ ಆಗಲಾರದು. ಖಾಸಗಿ ಸಂಸ್ಥೆಗಳು ಉತ್ತಮ ಸೇವೆ ನೀಡುವ ಮೂಲಕ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು