ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾವಧಿ ಆಡಳಿತ ನೀಡುವರೇ ಕುಮಾರಸ್ವಾಮಿ?

ಜಿಲ್ಲೆಯಿಂದ ಈವರೆಗೆ ನಾಲ್ಕು ಮುಖ್ಯಮಂತ್ರಿಗಳ ಆಯ್ಕೆ; ಅಧಿಕಾರಾವಧಿ ಅಪೂರ್ಣ
Last Updated 20 ಮೇ 2018, 19:30 IST
ಅಕ್ಷರ ಗಾತ್ರ

ರಾಮನಗರ: ನಾಲ್ಕು ತಾಲ್ಲೂಕುಗಳನ್ನು ಒಳಗೊಂಡ ಪುಟ್ಟ ಜಿಲ್ಲೆಯಾದ ರಾಮನಗರವು ಈವರೆಗೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದೆ. ಆದರೆ ಈ ನಾಲ್ವರೂ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿನ ಒಟ್ಟು 24 ಮುಖ್ಯಮಂತ್ರಿಗಳ ಪೈಕಿ ಕೇವಲ ಮೂರು ಮಂದಿ ಮಾತ್ರ ಐದು ವರ್ಷ ಆಡಳಿತ ಪೂರೈಸಿ ಸೈ ಎನಿಸಿಕೊಂಡಿದ್ದಾರೆ. ಎಸ್‌. ನಿಜಲಿಂಗಪ್ಪ, ಡಿ. ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅವರಿಗೆ ಮಾತ್ರ ಈ ಅವಕಾಶ ಸಿಕ್ಕಿದೆ.

ಇದೀಗ ಇಲ್ಲಿನ ಚನ್ನಪಟ್ಟಣ ಕ್ಷೇತ್ರದ ಶಾಸಕ ಎಚ್.ಡಿ. ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಉತ್ಸಾಹದಲ್ಲಿ ಇದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಅವರು ಪೂರ್ಣಾವಧಿಯ ಆಡಳಿತ ನಡೆಸಲಿದ್ದಾರೆ ಎನ್ನುವ ವಿಶ್ವಾಸ ಜಿಲ್ಲೆಯ ಜನರದ್ದು.

ರಾಮನಗರದಿಂದ ಮೊದಲ ಮುಖ್ಯಮಂತ್ರಿಯಾದ ಕೀರ್ತಿ ಕೆಂಗಲ್ ಹನುಮಂತಯ್ಯ ಅವರದ್ದು. 1952ರಲ್ಲಿ ಅಂದಿನ ಮೈಸೂರು ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದ ಅವರು 1952ರ ಮಾರ್ಚ್‌ 30ರಿಂದ 1956ರ ಆಗಸ್ಟ್‌ 19ರವರೆಗೆ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದರು. ಈ ಸಂದರ್ಭ ವಿಧಾನಸೌಧದ ನಿರ್ಮಾಣ ಕಾರ್ಯ ಕೈಗೊಂಡು ಮೆಚ್ಚುಗೆ ಪಡೆದರು. ಆದರೆ ಕರ್ನಾಟಕ ಏಕೀಕರಣಕ್ಕೆ ಮುನ್ನ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು. ನಂತರದಲ್ಲಿ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿ ಹುದ್ದೆಗೆ ಏರಿದರು.

ಅದಾದ ಮೂರು ದಶಕಗಳ ಬಳಿಕ, 1983ರಲ್ಲಿ ಈ ಭಾಗದ ಜನರಿಗೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ಚುನಾಯಿತರಾಗಿ ಕಳುಹಿಸುವ ಅವಕಾಶ ಕೂಡಿಬಂದಿತು. 1983ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಆದರೆ ಅವರು ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿರಲಿಲ್ಲ. ಹೀಗಾಗಿ ಕನಕಪುರ ಕ್ಷೇತ್ರದ ಶಾಸಕ ಪಿ.ಜಿ.ಆರ್‌. ಸಿಂಧ್ಯ, ಹೆಗಡೆ ಅವರಿಗೆ ಸ್ಥಾನ ಬಿಟ್ಟುಕೊಟ್ಟರು.

ಕನಕಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಗಡೆ ಅವರು ಸಿಂಧ್ಯ ಹಾಗೂ ಎಚ್.ಡಿ. ದೇವೇಗೌಡರ ಬಲದಿಂದ 23,156 ಮತಗಳ ಅಂತರದಿಂದ ಗೆದ್ದರು. 1983ರ ಜನವರಿ 10ರಿಂದ 1984ರ ಡಿಸೆಂಬರ್‌ 29ರವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಆದರೆ, 1984ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಕಾರಣಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದರು. 1985ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬಂತು. ಹೆಗಡೆ ಬಸವನಗುಡಿ ಕ್ಷೇತ್ರದಿಂದ ಗೆದ್ದು ಮತ್ತೆ ಮುಖ್ಯಮಂತ್ರಿ ಆದರು.

1994ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಸ್ವಕ್ಷೇತ್ರ ಹೊಳೆನರಸೀಪುರ ಬಿಟ್ಟು ರಾಮನಗರದಲ್ಲಿ ಸ್ಪರ್ಧಿಸುವ ಧೈರ್ಯ ಮಾಡಿದರು. ಇಲ್ಲಿನ ಮತದಾರರು ಅವರ ಕೈಹಿಡಿದರು. ಅವರ ನಾಯಕತ್ವದಲ್ಲಿ ಜನತಾ ದಳಕ್ಕೆ ಬಹುಮತ ಸಿಕ್ಕಿತು. 1994ರ ಡಿಸೆಂಬರ್‌ 11ರಿಂದ 1996ರ ಮೇ 31ರವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಆದರೆ ರಾಷ್ಟ್ರ ರಾಜಕಾರಣದಲ್ಲಾದ ಬದಲಾವಣೆ ಅವರನ್ನು ಪ್ರಧಾನಿ ಹುದ್ದೆಯತ್ತ ಕೊಂಡೊಯ್ದಿತು. ಹೀಗಾಗಿ ದೇವೇಗೌಡರ ಬದಲಿಗೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿ ಮುಂದುವರಿದರು.

20 ತಿಂಗಳ ಸಮ್ಮಿಶ್ರ ಸರ್ಕಾರ

ಎಚ್‌.ಡಿ. ಕುಮಾರಸ್ವಾಮಿ ಶಾಸಕರಾಗಿ ಮೊದಲ ಗೆಲುವು ದಾಖಲಿಸಿದ್ದು 2004ರ ಚುನಾವಣೆಯಲ್ಲಿ, ಅದು ರಾಮನಗರ ಕ್ಷೇತ್ರದಿಂದ.

2006ರಲ್ಲಿ ರಾಜ್ಯ ರಾಜಕಾರಣದಲ್ಲಾದ ಬದಲಾವಣೆಯ ಲಾಭ ಪಡೆದ ಕುಮಾರಸ್ವಾಮಿ ಜೆಡಿಎಸ್‌ನ  ಬೆಂಬಲಿಗರೊಂದಿಗೆ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದರು. 2006ರ ಫೆಬ್ರುವರಿ 3ರಿಂದ 2007ರ ಅಕ್ಟೋಬರ್‌ 8ರವರೆಗೆ ಮಾತ್ರ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದರು.

ರಾಮನಗರ ಜಿಲ್ಲೆಯಿಂದ ಚುನಾಯಿತರಾದ ಮುಖ್ಯಮಂತ್ರಿಗಳ ಅಧಿಕಾರದ ಅವಧಿ

ಕೆಂಗಲ್‌ ಹನುಮಂತಯ್ಯ–4 ವರ್ಷ, 142 ದಿನ
ರಾಮಕೃಷ್ಣ ಹೆಗಡೆ–1 ವರ್ಷ, 354 ದಿನ
ಎಚ್.ಡಿ. ದೇವೇಗೌಡ–1 ವರ್ಷ, 172 ದಿನ
ಎಚ್‌.ಡಿ. ಕುಮಾರಸ್ವಾಮಿ–1 ವರ್ಷ, 253 ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT