ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಂಡ್ ಸೃಷ್ಟಿಸಿರುವ ರಂಜಾನ್‌

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಹಾಗೂ ಸೌಂದರ್ಯವನ್ನು ಆಸ್ವಾದಿಸುವ ಕಣ್ಣು ಮತ್ತು ಮನಸ್ಸುಗಳಲ್ಲಾಗುವ ಪ್ರತಿ ಬದಲಾವಣೆ ಫ್ಯಾಷನ್‌ ಕ್ಷೇತ್ರದ ಮೇಲೆ ಬಿಂಬಿತವಾಗುತ್ತದೆ. ಬದಲಾವಣೆ ಬಯಸುವ ಮನಸ್ಸುಗಳಿರುವವರೆಗೂ ಹೊಸ ಹೊಸ ವಿನ್ಯಾಸಗಳಿಗೇನೂ ಕೊರತೆ ಇಲ್ಲ. ಅಂತಹ ಫ್ಯಾಷನ್‌ ಕ್ಷೇತ್ರಕ್ಕೆ ಹಬ್ಬಗಳು ನೆಪವಷ್ಟೇ. ಸದ್ಯ ರಂಜಾನ್‌ ಕೂಡ ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡ್‌ ಸೃಷ್ಟಿಗೆ ಕಾರಣವಾಗಿದೆ.

ರಂಜಾನ್‌ ಹಬ್ಬವೆಂದರೆ ಧಾರ್ಮಿಕ ಆಚರಣೆ, ಆಹಾರ ವೈವಿಧ್ಯಕ್ಕಷ್ಟೇ ಸೀಮಿತವಲ್ಲ. ಹೊಸ ವಸ್ತ್ರ, ಆಭರಣ, ಫ್ಯಾಷನ್‌ ಪರಿಕರಗಳು ಟ್ರೆಂಡ್ ಆಗುತ್ತಲೇ ಇರುತ್ತದೆ. ಸೀರೆ, ಕುರ್ತಾ, ಬುರ್ಖಾ, ಟೋಪಿ, ಸಲ್ವಾರ್‌ ಕಮೀಜ್‌, ಹಿಜಾಬ್‌ ಸೇರಿದಂತೆ ಅಡಿಯಿಂದ ಮುಡಿವರೆಗೂ ಶೃಂಗರಿಸುವ ಉಡುಗೆಗಳೀಗ ನಾವೀನ್ಯತೆಯ ಸ್ಪರ್ಶ ಪಡೆದಿವೆ. ಎಲ್ಲೆಡೆಯೂ ರಂಜಾನ್ ಝಲಕ್‌ ಕಾಣಸಿಗುತ್ತಿದೆ.

ಈ ಬಾರಿ ಬೇಸಿಗೆಯಲ್ಲಿಯೇ ರಂಜಾನ್‌ ಬಂದಿರುವುದರಿಂದ ಬೇಸಿಗೆಗೂ ಹೊಂದಿಕೆಯಾಗುವಂತಹ ಉಡುಪುಗಳು ಜನಪ್ರಿಯವಾಗಿವೆ. ‘ಕಫ್ತಾನ್‌’ ಹಾಗೂ ‘ಲಾನ್‌ ಕಾಟನ್’ ಈ ಬಾರಿ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿವೆ. ಕಫ್ತಾನ್‌ ನಡುವಿನಲ್ಲಿ ಲೇಸ್‌ ಇರುತ್ತದೆ. ಎರಡೂ ಬದಿಯಲ್ಲಿಯೂ ಸಡಿಲವಾಗಿರುವ ಇದು ಬೇಸಿಗೆಗೆ ಹೇಳಿ ಮಾಡಿಸಿದಂತಿದೆ. ಜಾರ್ಜೆಟ್‌ ಹಾಗೂ ಶಿಫಾನ್‌ ಬಟ್ಟೆಗಳಿಂದ ಇದನ್ನು ತಯಾರಿಸಲಾಗುತ್ತದೆ. ನಿತ್ಯ ನಡೆಯುವ ಇಫ್ತಾರ್ ಕೂಟಗಳಲ್ಲಿ ‘ಲಾನ್‌ ಕಾಟನ್‌’ ಉಡುಗೆಗಳು ರಾರಾಜಿಸುತ್ತಿವೆ.

ಪಾಕಿಸ್ತಾನದ ಖ್ಯಾತ ವಿನ್ಯಾಸಕರಾದ ಮರಿಯಾಬೀ, ಗುಲ್‌ ಅಹಮ್ಮದ್‌ ಈ ಉಡುಗೆಗಳ ವಿನ್ಯಾಸದಲ್ಲಿ ಜನಪ್ರಿಯರು. ‘ತಿಳಿ ಬಣ್ಣದ ಮಲ್‌ಮಲ್‌ ಕಾಟನ್‌ ಅಥವಾ ಶಿಫಾನ್ ಬಟ್ಟೆಗಳ ಮೇಲೆ ಪ್ರಿಂಟೆಡ್ ವಿನ್ಯಾಸ ಇರುತ್ತದೆ. ಅದರ ಮೇಲೆ ಎಂಬ್ರಾಯ್ಡರಿ ವಿನ್ಯಾಸವಿರುತ್ತದೆ. ಇವುಗಳಿಗೆ ಲೈನಿಂಗ್ ಬಟ್ಟೆ ಅಗತ್ಯವಿಲ್ಲ. ತಿಳಿ ಬಣ್ಣವಿದ್ದರೂ ಪಾರದರ್ಶಕವಲ್ಲದ ಈ ಉಡುಗೆಗಳನ್ನು ಹೆಚ್ಚಿನವರು ಧರಿಸುತ್ತಾರೆ’ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್ ಜಹೀನಾ ಮುಜಾಹಿದ್‌.

ರಂಜಾನ್‌ನಲ್ಲಿ ಉದ್ದದ ಉಡುಗೆಗಳು ಹೆಚ್ಚು ಜನಪ್ರಿಯ. ಮಹಿಳೆಯರಲ್ಲಿ ಅನಾರ್ಕಲಿ, ಫಲಾಜ್‌, ಗೌನ್ಸ್‌ಗಳ ಫ್ಯಾಷನ್‌ ಮುನ್ನೆಲೆಗೆ ಬಂದಿದೆ. ಮಕ್ಕಳಿಗೆ ಲೆಹಂಗಾ, ಉದ್ದದ ಗೌನ್‌, ಹ್ಯಾಂಡ್‌ ವರ್ಕ್‌ ಹೆಚ್ಚಿರುವ ಗಾಡ ಬಣ್ಣದ ಉಡುಗೆಗಳು ಜನಪ್ರಿಯವಾಗಿವೆ. ಬೇಬಿ ಪಿಂಕ್‌, ಆಕಾಶ ನೀಲಿ, ಪೇಸ್ಟಲ್‌ ಶೇಡ್‌ ವಸ್ತ್ರಗಳು ಎಲ್ಲರ ಮೆಚ್ಚಿನ ಉಡುಗೆಗಳಾಗಿವೆ.

‘ಪುರುಷರಲ್ಲಿ ಜುಬ್ಬಾ ಕುರ್ತೀಸ್‌, ವೇಸ್ಟ್‌ ಕೋಟ್‌, ಜುಬ್ಬಾಗಿಂತ ತುಸು ಭಿನ್ನವೆನಿಸುವ ‘ಪಠಾನಿ’ ಉಡುಗೆಗಳು ಟ್ರೆಂಡ್‌ ಸೃಷ್ಟಿಸಿವೆ. ಸರಳವಾದ ಕುರ್ತಾದೊಂದಿಗೆ  ಪ್ರಿಂಟೆಡ್‌ ಹಾಗೂ ಗಾಢ ಬಣ್ಣದ ವೇಸ್ಟ್‌ ಕೋಟ್‌ ಧರಿಸುತ್ತಾರೆ’ ಎನ್ನುತ್ತಾರೆ ಜಹೀನಾ.

ಟೋಪಿಗಳಿಗೂ ನವೀನ ಸ್ಪರ್ಶ
ಹಿಂದೆ ಬರಿ ಬಿಳಿ ಬಣ್ಣದಲ್ಲಿ ಟೋಪಿಗಳು ಸೀಮಿತವಾಗಿದ್ದವು. ಇಂದು ಟೋಪಿಗಳಲ್ಲಿ ಬಹು ವಿನ್ಯಾಸದಲ್ಲಿ ದೊರೆಯುತ್ತಿವೆ. ಹ್ಯಾಂಡ್ ನೆಟ್ಟೆಡ್‌, ಉಲ್ಲನ್‌ ಟೋಪಿಗಳು ಜನಪ್ರಿಯ. ಸರಳವಾದ ಕುರ್ತಾದೊಂದಿಗೆ ಬಣ್ಣ, ಬಣ್ಣದ ಟೋಪಿ ಧರಿಸುವುದು ಫ್ಯಾಷನ್‌ ಆಗಿದೆ.

ಖಾದಿ ಫ್ಯಾಷನ್‌
ರಂಜಾನ್‌ ಉಡುಗೆಗೆ ಈಗ ಖಾದಿ ಸೇರ್ಪಡೆಯಾಗಿದೆ. ಸರಳವಾದ ಖಾದಿ ಬಟ್ಟೆಗೆ ಹ್ಯಾಂಡ್‌ ವರ್ಕ್‌ಗಳನ್ನು ಮಾಡಿ ಹೊಸ ಶೇಡ್‌ ನೀಡಲಾಗುತ್ತಿದೆ. ಹರಳು, ಮುತ್ತುಗಳಿಂದ ಖಾದಿಯನ್ನು ಶ್ರೀಮಂತಗೊಳಿಸಲಾಗುತ್ತಿದೆ. ಖಾದಿ ಟೋಪಿಗಳು ರಂಜಾನ್‌ ಫ್ಯಾಷನ್‌ ಆಗಿದೆ.

ಆ್ಯಂಕಲ್‌ ಲೆನ್ತ್‌ ಪ್ಯಾಂಟ್‌ 
ಚೂಡಿ ಪ್ಯಾಂಟ್‌, ಸಲ್ವಾರ್ ಪ್ಯಾಂಟನ್ನು ಧರಿಸುವುದು ಮುಗಿದು ಹೋದ ಅಧ್ಯಾಯ. ಈಗೇನಿದ್ದರೂ ಆ್ಯಂಕಲ್ ಲೆನ್ತ್‌ ಪ್ಯಾಂಟ್‌. ಅದರಲ್ಲೂ ಸ್ಟ್ರೇಟ್‌ ಪ್ಯಾಂಟ್‌ನ ಕೆಳಗಡೆ ಲೇಸ್‌ ಕಟ್ಟಲಾಗುತ್ತಿದೆ. ಎಂಬ್ರಾಯ್ಡರ್‌ ಕೂಡ ಪ್ಯಾಂಟ್‌ಗಳಿಗೆ ಸಾಮಾನ್ಯವಾಗುತ್ತಿದೆ.

ಒಂದು ಕಾಲಿಗೆ ಕಾಲ್ಗೆಜ್ಜೆ
ಆ್ಯಂಕಲ್‌ ಲೆನ್ತ್‌ ಧರಿಸುವುದರಿಂದ ಒಂದೇ ಕಾಲಿಗೆ ಮುತ್ತು, ಹರಳಗಳ ಕಾಲ್ಗೆಜ್ಜೆ ಧರಿಸುತ್ತಿದ್ದಾರೆ. ಜೊತೆಗೆ ಹಿಜಾಬ್‌ಗೆ ಹೊಂದಿಕೆಯಾಗುವ ಬ್ರೇಸ್‌ಲೇಟ್‌ ಹಾಗೂ ಉಂಗುರ ತೊಡುತ್ತಾರೆ. 

*
ಮ್ಯಾಚಿಂಗ್ ಹಿಜಾಬ್‌
ಹಿಜಾಬ್‌ ಇಂದು ಸಂಪ್ರದಾಯ, ಕಟ್ಟುಕಟ್ಟಲೆಯಾಗಿ ಉಳಿದಿಲ್ಲ. ಅದಕ್ಕೂ ಫ್ಯಾಷನ್‌ ಲುಕ್‌ ನೀಡಿದ್ದಾರೆ ವಿನ್ಯಾಸಕರು. ಕಪ್ಪು ಬಣ್ಣಕ್ಕೆ ಸೀಮಿತವಾಗಿದ್ದ ಹಿಜಾಬ್‌ ಈಗ ಬಹುಬಣ್ಣಗಳಲ್ಲಿ ಲಭ್ಯ. ಜಾರ್ಜೆಟ್‌ ಹಾಗೂ ಕ್ರೇಪ್‌ ಬಟ್ಟೆಗಳಲ್ಲಿ ತಯಾರಾಗುವ ಹಿಜಾಬ್‌ನ್ನು ಬ್ರೋಚಸ್‌ಗಳು ಅಲಂಕರಿಸುತ್ತಿವೆ. ಸರಳ ಹಿಜಾಬ್‌ಗಳಿಗೆ ಆಲಂಕಾರಿಕ ಬ್ರೋಚ್‌ ಬಳಸಲಾಗುತ್ತದೆ. ಹೂವು, ಹಣ್ಣಿನ ವಿನ್ಯಾಸದ ಬ್ರೋಚ್‌ಗಳು ಮುನ್ನೆಲೆಗೆ ಬಂದಿವೆ. ಹಿಜಾಬ್‌ ಹೆಚ್ಚು ಗ್ರ್ಯಾಂಡ್‌ ಇದ್ದರೆ, ಸರಳವಾದ ಪಿನ್‌ ಬ್ರೋಚರ್‌ ಬಳಸುತ್ತಾರೆ. ಕೂದಲನ್ನು ಎತ್ತಿ ಹೇರ್‌ ಬನ್ಸ್‌ ಬಳಸಿ ಹಿಜಾಬ್‌ ಧರಿಸಿದರೆ ಮುಖಕ್ಕೆ ಹೊಸ ಅಂದ ನೀಡುತ್ತದೆ.
–ಜಹೀನಾ ಮುಜಾಹಿದ್, ಫ್ಯಾಷನ್‌ ಡಿಸೈನರ್

*
ಸೋನಂ ಕಪೂರ್‌ ಅವರ ಮದುವೆಯ ಉಡುಗೆ ಸಹ ಸದ್ಯ ರಂಜಾನ್‌ ಟ್ರೆಂಡ್ ಆಗಿದೆ. ಸೋನಂ ಧರಿಸಿದ್ದ ಘಾಗ್ರಾ, ಚೋಲಿ ಈ ಬಾರಿ ರಂಜಾನ್‌ನ ಫ್ಯಾಷನ್‌ ಪಟ್ಟಿಗೆ ಹೊಸ ಸೇರ್ಪಡೆ.
–ಪ್ರಸಾಧ್‌ ಬಿದ್ದಪ್ಪ, ಫ್ಯಾಷನ್‌ ಡಿಸೈನರ್.

*
ಸಲ್ವಾರ್ ಸೂಟ್‌, ಕಮೀಜ್‌ ಟ್ರೆಂಡ್‌ ಆಗಿದೆ. ಶರಾರಾ, ಗರಾರ ಉಡುಗೆ ಜನಪ್ರಿಯ. ಜರ್ದೋಸಿ ಸೇರಿದಂತೆ ಹೆಚ್ಚು ಎಂಬ್ರಾಯ್ಡರ್‌ ವಸ್ತ್ರ ಟ್ರೆಂಡ್ ಆಗಿದೆ.
–ಪುಣ್ಯ, ಪ್ಯಾಷನ್‌ ಡಿಸೈನರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT