ಗುರುವಾರ , ನವೆಂಬರ್ 14, 2019
22 °C
ಕೃಷಿ ತ್ಯಾಜ್ಯ ಸುಟ್ಟರೆ ಅಧಿಕಾರಿಗಳೇ ಜವಾಬ್ದಾರರು; ಮಾಲಿನ್ಯ ನಿಯಂತ್ರಣಕ್ಕೆ ಮಾರ್ಗಸೂಚಿ

ಮಾಲಿನ್ಯಕ್ಕೆ ರಾಜ್ಯಗಳೇ ಹೊಣೆ: ಸುಪ್ರೀಂ ಕೋರ್ಟ್ ತಾಕೀತು

Published:
Updated:

ನವದೆಹಲಿ: ದೆಹಲಿಯಲ್ಲಿ ವಿಪರೀತ ಅಪಾಯಕಾರಿ ಹಂತಕ್ಕೆ ತಲುಪಿರುವ ವಾಯು ಗುಣಮಟ್ಟದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಈ ಸಮಸ್ಯೆಗೆ ರಾಜ್ಯಗಳೇ ಹೊಣೆ ಎಂದು ಹೇಳಿದೆ.

‘ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದ್ದ ರಾಜ್ಯಗಳು ಚುನಾವಣಾ ಪ್ರಚಾರದಲ್ಲಿ ಆಸಕ್ತಿ ಹೊಂದಿದ್ದವು. ಅವರ ಹೊಣೆಗೇಡಿತನದಿಂದ ನಾವು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕೃಷಿ ತ್ಯಾಜ್ಯ ದಹಿಸುವ ಮೂಲಕ ಸಮಸ್ಯೆ ಬಿಗಡಾಯಿಸಲು ಕಾರಣರಾಗಿರುವ ಪಂಜಾಬ್ ಹಾಗೂ ಹರಿಯಾಣದ ರೈತರ ಬಗ್ಗೆ ಯಾವುದೇ ಅನುಕಂಪ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ತಾಜ್ಯ ಸುಡುವ ಒಂದೇ ಒಂದು ಪ್ರಕರಣ ವರದಿಯಾದರೂ, ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕು ಎಂದು ಕೋರ್ಟ್ ತಾಕೀತು ಮಾಡಿತು.

‘ಸಮ–ಬೆಸ’ ಉಲ್ಲಂಘಿಸಿದ ಸಂಸದ
ನವದೆಹಲಿಯಲ್ಲಿ ಸೋಮವಾರದಿಂದ ಜಾರಿಗೆ ಬಂದಿರುವ ಸಮ–ಬೆಸ ವಾಹನ ಸಂಚಾರ ವ್ಯವಸ್ಥೆಯನ್ನು ಉಲ್ಲಂಘಿಸಿದ ಬಿಜೆಪಿ ಸಂಸದ ವಿಜಯ್ ಗೋಯಲ್ ಅವರಿಗೆ ಪೊಲೀಸರು ₹4 ಸಾವಿರ ದಂಡ ವಿಧಿಸಿದ್ದಾರೆ. ಸೋಮವಾರದ ನಿಯಮದಂತೆ, ವಾಹನದ ನೋಂದಣಿ ಫಲಕದ ಕೊನೆಯಲ್ಲಿ ಸರಿಸಂಖ್ಯೆ ಇರುವ ವಾಹನಗಳು ಮಾತ್ರ ಸಂಚರಿಸಲು ಅವಕಾಶವಿತ್ತು. 

‘ಇದು ಕೇಜ್ರಿವಾಲ್ ಸರ್ಕಾರದ ಚುನಾವಣಾ ತಂತ್ರಗಾರಿಕೆ’ ಎಂದು ಆರೋಪಿಸಿರುವ ಅವರು, ‘ಸರ್ಕಾರದ ಸಮ–ಬೆಸ ನಿರ್ಧಾರದ ವಿರುದ್ಧದ ಸಾಂಕೇತಿಕ ಪ್ರತಿಭಟನೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಳಿಕ ಗೋಯಲ್ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿದ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ಸರ್ಕಾರದ ಕ್ರಮ ಬೆಂಬಲಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಚಿವರ ಕಾರಿನಲ್ಲಿಯೇ ಸಚಿವಾಲಯಕ್ಕೆ ತೆರಳಿದರು.

ದೆಹಲಿ ಮೀರಿಸಿದ ಉತ್ತರ ಪ್ರದೇಶ
ಲಖನೌ: ಉತ್ತರ ಪ್ರದೇಶದ ಕೆಲ ಭಾಗಗಳಲ್ಲೂ ವಾಯುಗುಣಮಟ್ಟ ತೀರಾ ಹದಗೆಟ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ರಾಜ್ಯದ ಪಶ್ಚಿಮ ಭಾಗದ ಬಾಗಪತ್ ಪಟ್ಟಣದಲ್ಲಿ ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ (ಪಿಎಂ 2.5) ಮಾಲಿನ್ಯಕಾರಕ ಕಣಗಳ ಸಂಖ್ಯೆ 500 ಇತ್ತು. ಇದು ‘ವಿಪರೀತ ಅಪಾಯಕಾರಿ’ ಮಟ್ಟವಾಗಿದ್ದು, ಡಿಜಿಟಲ್ ಫಲಕಗಳು ತೋರಿಸಲು ಸಾಧ್ಯವಿರುವ ಗರಿಷ್ಠ ಸಂಖ್ಯೆ ಇದಾಗಿದೆ. 

ತಜ್ಞರನ್ನು ಕರೆಸಿದ ಕೋರ್ಟ್: ದೆಹಲಿಯ ಐಐಟಿ ತಜ್ಞರು, ಹವಾಮಾನ ಬದಲಾವಣೆ ತಜ್ಞರನ್ನು ಕರೆಸುವಂತೆ ವಿಚಾರಣೆ ವೇಳೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು. ಮಾಲಿನ್ಯ ತಡೆಗೆ ತಕ್ಷಣದ ಕ್ರಮಗಳು ಏನು ಎಂದು ಕೋರ್ಟ್ ಅವರನ್ನು ಪ್ರಶ್ನಿಸಿತು.

ಮೋಡ ಬಿತ್ತನೆ ಪರಿಹಾರವಾಗಬಲ್ಲದೇ ಎಂದು ಪೀಠ ಕೇಳಿತು. ಆದರೆ ಮಾಲಿನ್ಯದ ವ್ಯಾಪ್ತಿ ದೊಡ್ಡದಿರುವುದರಿಂದ ಅದು ಪರಿಹಾರವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರು. ಹೆಲಿಕಾಪ್ಟರ್ ಮೂಲಕ ನೀರು ಎರಚಬಹುದೇ ಎಂದು ಕೇಳಿತು. ರಸ್ತೆ ಮೇಲಿನ ದೂಳು ಕಡಿಮೆಮಾಡಲು ವಾಹನಗಳ ಮೂಲಕ ನೀರು ಚುಮುಕಿಸಬಹುದು ಎಂದು ತಜ್ಞರು ಹೇಳಿದರು. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪರಿಸರ ಸಚಿವಾಲಯದ ಅಧಿಕಾರುಗಳು ಮಾಹಿತಿ ನೀಡಿದರು.


ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನ.3ರಂದು ‘ಹೊಂಜು’ ಆವರಿಸಿರುವ ದೃಶ್ಯ. ನವೆಂಬರ್ 4ರಂದು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವ ದೃಶ್ಯ –ಎಎಫ್‌ಪಿ ಚಿತ್ರಗಳು

ಸುಪ್ರೀಂಕೋರ್ಟ್ ಹೇಳಿದ್ದೇನು...?
* ಇದು ತುರ್ತು ಪರಿಸ್ಥಿತಿಯನ್ನೂ ಮೀರಿಸಿದೆ. ಎಲ್ಲಕ್ಕಿಂತ ಬದುಕುವ ಹಕ್ಕು ದೊಡ್ಡದು
* ಜನರನ್ನು ಸಾಯಲು ಬಿಡಲಾಗದು; ನಾಗರಿಕ ಸಮಾಜದಲ್ಲಿ ಇದು ಘಟಿಸಬಾರದು
* ಜನರು ತಮ್ಮ ಅತ್ಯಮೂಲ್ಯ ಜೀವನವನ್ನು ಮಾಲಿನ್ಯದಿಂದ ಕಳೆದುಕೊಳ್ಳುತ್ತಿದ್ದಾರೆ
* ಮುಂಜಾಗ್ರತಾ ಕ್ರಮ ಒಳಗೊಂಡ ವರದಿ ಸಲ್ಲಿಸಲು 3 ವಾರ ಗಡುವು
* ಹಿಂದಿನ ಸಮ–ಬೆಸ ಯೋಜನೆ ಜಾರಿ ಬಳಿಕದ ವಾಯುಗುಣಮಟ್ಟ ಸೂಚ್ಯಂಕ ದಾಖಲೆ ಒದಗಿಸಲು ದೆಹಲಿ ಸರ್ಕಾರಕ್ಕೆ ಸೂಚನೆ

ಪ್ರತಿಕ್ರಿಯಿಸಿ (+)