ಕೇಂದ್ರ ಸೇವೆಗೆ ತೆರಳಲು ಅಧಿಕಾರಿಗಳ ನಿರಾಸಕ್ತಿ?

ಶುಕ್ರವಾರ, ಜೂಲೈ 19, 2019
26 °C
ನಿಯೋಜನೆಗೆ ಮುಂದಾಗದ ರಾಜ್ಯಗಳು: ಎಚ್ಚರಿಕೆ ಸಂದೇಶ ರವಾನಿಸಿದ ಸಿಬ್ಬಂದಿ ಸಚಿವಾಲಯ

ಕೇಂದ್ರ ಸೇವೆಗೆ ತೆರಳಲು ಅಧಿಕಾರಿಗಳ ನಿರಾಸಕ್ತಿ?

Published:
Updated:

ನವದೆಹಲಿ: ಭಾರತೀಯ ಆಡಳಿತ ಸೇವೆಯ (ಐಎಎಸ್‌) ಅಧಿಕಾರಿಗಳು ರಾಜ್ಯಗಳಿಂದ ನಿಯೋಜನೆಯ ಮೇಲೆ ಕೇಂದ್ರ ಸೇವೆಗೆ ತೆರಳಲು ನಿರಾಸಕ್ತಿ ತೋರುತ್ತಿದ್ದಾರೆಯೇ? ರಾಜ್ಯಗಳಿಗೆ ಕೇಂದ್ರದ ಸಿಬ್ಬಂದಿ ಸಚಿವಾಲಯ ಈಚೆಗೆ ಬರೆದಿರುವ ಪತ್ರದ ಅನುಸಾರ ಹೌದು.

ಅಧಿಕಾರಿಗಳು ವೃತ್ತಿಯಲ್ಲಿ ಮುನ್ನಡೆ ಸಾಧಿಸುವುದಕ್ಕಾಗಿ ಮತ್ತು ಅವರ ಅನುಭವವನ್ನು ಕೇಂದ್ರವು ಬಳಸಿಕೊಳ್ಳುವುದಕ್ಕಾಗಿ ಅಗತ್ಯ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜನೆಯ ಮೇಲೆ ಕೇಂದ್ರಕ್ಕೆ ಕಳುಹಿಸಬೇಕು ಎಂದು ಸಚಿವಾಲಯವು ಪತ್ರದಲ್ಲಿ ಸೂಚಿಸಿದೆ.

ಕೇಂದ್ರದಲ್ಲಿ ಮುಖ್ಯವಾಗಿ ಉಪ ಕಾರ್ಯದರ್ಶಿಗಳು ಮತ್ತು ನಿರ್ದೇಶಕ ದರ್ಜೆಯ ಹುದ್ದೆಗಳಿಗೆ ಅಧಿಕಾರಿಗಳ ಕೊರತೆ ಕಾಡುತ್ತಿದೆ ಎಂದು ಸಚಿವಾಲಯವು ಪತ್ರದಲ್ಲಿ ಹೇಳಿದೆ.

ಕೇಂದ್ರ ಸಿಬ್ಬಂದಿ ಯೋಜನೆ ಮತ್ತು ಜಾಗೃತ ದಳದ ಮುಖ್ಯಾಧಿಕಾರಿ (ಸಿವಿಒ) ಹುದ್ದೆಗಳಿಗೆ ನೇಮಿಸಲು ಅಧಿಕಾರಿಗಳನ್ನು ನಿಯೋಜಿಸುವಂತೆ ಸಿಬ್ಬಂದಿ ಸಚಿವಾಲಯವು ರಾಜ್ಯಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಸೂಚನೆ ನೀಡಿತ್ತು. ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಭ್ರಷ್ಟಾಚಾರ ತಡೆ ಇವರ ಜವಾಬ್ದಾರಿ. ಪತ್ರ ಬರೆದು ಆರು ತಿಂಗಳಾದರೂ ಯಾವುದೇ ರಾಜ್ಯದಿಂದ ಒಬ್ಬ ಅಧಿಕಾರಿ ಹೆಸರೂ ಕೇಂದ್ರಕ್ಕೆ ರವಾನೆ ಆಗಿಲ್ಲ.

ಕೇಂದ್ರ ಸಿಬ್ಬಂದಿ ಯೋಜನೆಯಡಿ ಯಾವುದೇ ಶ್ರೇಣಿಯ ಅಧಿಕಾರಿಯನ್ನು ಕೇಂದ್ರ ಸೇವೆಗೆ ಕಳುಹಿಸಬಹುದು. ಇದು, ಸೇವಾವಧಿಯಲ್ಲಿ ಅಧಿಕಾರಿಗಳ ಅನುಭವವನ್ನು ಹೆಚ್ಚಿಸಲಿದೆ. ಉಪಕಾರ್ಯದರ್ಶಿ, ನಿರ್ದೇಶಕ ಹಂತದಲ್ಲಿ ಈ ಅವಕಾಶದ ಸದ್ಬಳಕೆಯಾಗಿಲ್ಲ ಎಂಬ ಅಂಶವನ್ನು ಸಚಿವಾಲಯವು ಪ್ರಮುಖವಾಗಿ ಉಲ್ಲೇಖಿಸಿದೆ.‌

ಮುಂದೆ, ರಾಜ್ಯ ಕೇಡರ್‌ನ ಪರಿಷ್ಕರಣೆ ಸಮಯದಲ್ಲಿ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. 

‘ಕೇಂದ್ರ ಸೇವೆಗೆ ವಿವಿಧ ಹಂತಗಳ ಅಧಿಕಾರಿಗಳನ್ನು ಅಗತ್ಯ ಸಂಖ್ಯೆಯಲ್ಲಿ ನಿಯೋಜಿಸದ ರಾಜ್ಯಗಳ ಕೇಡರ್‌ಗೆ ಹಿರಿಯ ಅಧಿಕಾರಿಗಳ ಹೆಚ್ಚುವರಿ ನಿಯೋಜನೆ ಸಂಖ್ಯೆಯನ್ನು ಕಡಿತಗೊಳಿಸಬಹುದು’ ಎಂದೂ ಸಿಬ್ಬಂದಿ ಸಚಿವಾಲಯ ತಿಳಿಸಿದೆ. 

ಖಾಸಗಿ ವಲಯದ ತಜ್ಞರನ್ನು ನೇಮಿಸಲು ನಿರ್ಧಾರ
ನವದೆಹಲಿ: ಆಯಕಟ್ಟಿನ ಸ್ಥಾನಗಳಿಗೆ ಅರ್ಹ ಹಾಗೂ ಅನುಭವಿ ಅಧಿಕಾರಿಗಳ ಕೊರತೆ ಇರುವುದರಿಂದ ಖಾಸಗಿ ವಲಯದ ಸುಮಾರು 40 ಪರಿಣತರನ್ನು ಆಯ್ಕೆ ಮಾಡಿ ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಉಪ ಕಾರ್ಯದರ್ಶಿ ಮತ್ತು ನಿರ್ದೇಶಕ ಹಂತಗಳ ಸ್ಥಾನಗಳಿಗೆ ಹೀಗೆ ಆಯ್ಕೆ ಮಾಡಲಾದ ಪರಿಣತರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಸೇವೆಗೆ ಐಎಎಸ್‌ ಅಧಿಕಾರಿಗಳ ನಿಯೋಜನೆ

ರಾಜ್ಯ

ಆಗಿದ್ದು ಆಗಬೇಕಿರುವುದು
ಕರ್ನಾಟಕ 20 68
ಪಶ್ಚಿಮಬಂಗಾಳ 08 78
ಮಧ್ಯಪ್ರದೇಶ 27 90
ಬಿಹಾರ 36 74
ಜಮ್ಮು ಮತ್ತು ಕಾಶ್ಮೀರ 14 30
ಛತ್ತೀಸಗಡ 07 38
ಉತ್ತರಪ್ರದೇಶ 44 134
ಒಡಿಶಾ 20 51
ಗುಜರಾತ್ 17 64
ಹರಿಯಾಣ 12 44
ಆಂಧ್ರಪ್ರದೇಶ 18 46
     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !