ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಶಿಫಾರಸು ಮಾತ್ರ, ಕಾದು ನೋಡುತ್ತೇವೆ’

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬಿಸಿಸಿಐ: ಕಾನೂನು ಆಯೋಗ
Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ತರಬೇಕೆಂದು ಕಾನೂನು ಆಯೋಗವು ಶಿಫಾರಸು ಮಾಡಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡುತ್ತೇವೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

‘ಬುಧವಾರ ಆಯೋಗವು ಶಿಫಾರಸು ಪತ್ರವನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ಈ ವಿಷಯದಲ್ಲಿ ಬಿಸಿಸಿಐ ಈಗಲೇ ಏನೂ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕಾನೂನು ಸಮಿತಿಯ ಶಿಫಾರಸುಗಳನ್ನು ಲೋಕಸಭೆಯಲ್ಲಿ ಅನುಮೋದನೆಯಾದ ನಂತರವಷ್ಟೇ ಜಾರಿಗೆ ಬರುತ್ತವೆ. ಆದ್ದರಿಂದ ಸರ್ಕಾರದ ನಡೆಯನ್ನು ಕಾದು ನೋಡುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಮ್ಮ ಮಂಡಳಿಯು ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲ. ಆದರೂ ಇವತ್ತು ಮಂಡಳಿಯನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಮುಂದೊಂದು ದಿನ ಭಾರತ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ವ್ಯಾಪ್ತಿಗೂ ಸೇರಿಸಬಹುದು. ಆಗ ಉಳಿದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಮಾದರಿಯಲ್ಲಿ ಸರ್ಕಾರದ ಅನುದಾನದ ಮೇಲೆ ಬಿಸಿಸಿಐ ಅವಲಂಬಿತವಾಗುವಂತಾಗುತ್ತದೆ. ಇದು ಸರಿಯಾದ ಕ್ರಮವಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಿಸಿಸಿಐನಲ್ಲಿರುವ ಕೆಲವು ಸದಸ್ಯರು ಮತ್ತು ಪದಾಧಿಕಾರಿಗಳು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ವಿಷಯದಲ್ಲಿ ಅವರ ನಿಲುವು ಎಂಬುದು ಈಗ ಕುತೂಹಲ ಕೆರಳಿಸಿದೆ. ಈ ಶಿಫಾರಸಿನ ಕುರಿತು ಅವರೆಲ್ಲರ ನಡೆ ಏನು ಎಂಬುದನ್ನು ಎದುರು ನೋಡುತ್ತಿದ್ದೇವೆ’ ಎಂದರು.

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೊಂದಲು ಬಿಸಿಸಿಐ ಅನ್ನು ಆರ್‌ಟಿಐ ಅಡಿಗೆ ತರಬೇಕು. ಸಂವಿಧಾನದ 12ನೇ ವಿಧಿಯ ಪ್ರಕಾರ  ಈ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಕಾನೂನು ಆಯೋಗವು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT