ಬುಧವಾರ, ಜುಲೈ 28, 2021
21 °C
ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಸವಾಲು * ಆನ್‌ಲೈನ್‌ ವ್ಯವಸ್ಥೆ ಮೊರೆಗೆ ಚಿಂತನೆ

ಸಂಸತ್‌ ಅಧಿವೇಶನ: ಪರ್ಯಾಯ ಮಾರ್ಗಗಳ ಹುಡುಕಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್‌ ಸೋಂಕಿನ ಕರಿನೆರಳು ಸಂಸತ್‌ನ ಮುಂಗಾರು ಅಧಿವೇಶನದ ಮೇಲೂ ಬಿದ್ದಿದೆ. ಕೋವಿಡ್‌–19ನಿಂದಾಗಿ ಮುಂಬರುವ ಅಧಿವೇಶನವನ್ನು ಅಂತರವನ್ನು ಕಾಯ್ದುಕೊಂಡೇ ನಡೆಸಬೇಕು. ಆದರೆ, ಈಗಿರುವ ಕಟ್ಟಡ ಮತ್ತು ಆಸನಗಳ ಲಭ್ಯತೆಯನ್ನು ನೋಡಿದಾಗ ಇದು ಕಷ್ಟವಾಗಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.

ಸಂಸತ್‌ನ ಸೆಂಟ್ರಲ್‌ ಹಾಲ್‌ ಅಥವಾ ವಿಜ್ಞಾನ ಭವನದ ಸಭಾಂಗಣದಲ್ಲಿ ಅಧಿವೇಶನವನ್ನು ಆಯೋಜಿಸಿದರೂ, ಸಂಸದರ ನಡುವೆ ಅಂತರ ಕಾಯ್ದುಕೊಂಡು ಕಲಾಪ ನಡೆಸುವುದು ಕಷ್ಟ ಎಂದು ಎರಡೂ ಸದನಗಳ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ‘ಹೈಬ್ರಿಡ್‌ ಸೆಷನ್‌’ ಎಂಬ ಪರಿಕಲ್ಪನೆಯ ಮೊರೆ ಹೋಗಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಈ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಈ ಸಂಬಂಧ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಹಾಗೂ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕರೆದಿದ್ದ ಸಭೆಯಲ್ಲಿ ಎರಡೂ ಸದನಗಳ ಮಹಾ ಕಾರ್ಯದರ್ಶಿಗಳು ಪರ್ಯಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. 

ನಿರ್ದಿಷ್ಟ ಸಂಖ್ಯೆಯ ಸಂಸದರು ಮಾತ್ರ ಸಂಸತ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಉಳಿದವರು ಆನ್‌ಲೈನ್‌ ವ್ಯವಸ್ಥೆ ಮೂಲಕವೇ ಸದನದ ಕಲಾಪದಲ್ಲಿ ಭಾಗಿಯಾಗಬೇಕು ಎಂದು ಅಧಿಕಾರಿಗಳು ವಿವರಿಸಿದರು.

ಈಗಿರುವ ಆಸನಗಳ ವ್ಯವಸ್ಥೆಯಲ್ಲಿ ಅಂತರ ಕಾಯ್ದುಕೊಂಡಾಗ ಲೋಕಸಭೆಯಲ್ಲಿ 100 ಜನ ಸಂಸದರು ಅಧಿವೇಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅದೇ ರೀತಿ ರಾಜ್ಯಸಭೆಯ ಆಸನ ಸಾಮರ್ಥ್ಯ 60 ಜನ ಸಂಸದರಿಗೆ ಮಾತ್ರ ಸಾಕಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದರು. ಅಲ್ಲದೇ, ಆನ್‌ಲೈನ್‌ ಮೂಲಕ ಕೆಲವು ಸಂಸದರು ಕಲಾಪದಲ್ಲಿ ಭಾಗಿಯಾಗಬೇಕು ಎಂದರೆ ನಿಯಮಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಎರಡೂ ಸದನಗಳ ಅಂಕಿತವೂ ಅಗತ್ಯ ಎಂಬ ಅಂಶವನ್ನು ಅಧಿಕಾರಿಗಳು ಸಭಾಪತಿ ಮತ್ತು ಸ್ಪೀಕರ್‌ ಅವರ ಗಮನಕ್ಕೆ ತಂದರು ಎಂದೂ ಮೂಲಗಳು ಹೇಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು