ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್–ಜನತಾ ಪರಿವಾರಕ್ಕೆ ಹೆಚ್ಚು ಒಲಿದ ಕ್ಷೇತ್ರ

‌ಬೇಲೂರು: ಮೂರು ಬಾರಿ ಗೆದ್ದಿರುವ ಎಚ್.ಕೆ.ಕುಮಾರಸ್ವಾಮಿ
Last Updated 17 ಏಪ್ರಿಲ್ 2018, 8:21 IST
ಅಕ್ಷರ ಗಾತ್ರ

ಹಾಸನ: 1957ರಿಂದಲೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಬೇಲೂರು ಮತದಾರರು ಎಲ್ಲಾ ಪಕ್ಷಕ್ಕೂ ಬೆಂಬಲ ನೀಡುತ್ತಿರುವುದು ವಿಶೇಷ. 13 ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿ ಸ್ಪರ್ಧೆ ಮಾಡಿಲ್ಲ. 2008ರಿಂದ ಬೇಲೂರು ಸಾಮಾನ್ಯ ಕ್ಷೇತ್ರವಾಗಿದೆ.

ಜನತಾ ಪರಿವಾರದ ಎಚ್‌.ಕೆ.ಕುಮಾರಸ್ವಾಮಿ ಮೂರು ಬಾರಿ ಗೆದ್ದಿದ್ದರೆ, ಕಾಂಗ್ರೆಸ್‌ನ ವೈ.ಎನ್‌.ರುದ್ರೇಶ್‌ಗೌಡ ಸತತ ಎರಡು ಬಾರಿ ಗೆಲುವು ದಾಖಲಿಸಿದ್ದರು.

ಈ ಕ್ಷೇತ್ರದಲ್ಲಿ ಗೆಲುವಿನ ಖಾತೆ ತೆರೆದಿದ್ದು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಬೋರಣ್ಣಗೌಡ. 1957ರಲ್ಲಿ ಬೋರಣ್ಣಗೌಡ 33144 ಮತ ಪಡೆದು ಸ್ವತಂತ್ರ ಪಕ್ಷದ ಗುರಪ್ಪ ಬಿ.ಜಿ. (32755) ಎದುರು ಗೆದ್ದಿದ್ದರು. ಎಸ್‌ಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಸಿದ್ದಯ್ಯ 28761 ಮತ ಪಡೆದು ಸ್ವತಂತ್ರ ಪಾರ್ಟಿ ಅಭ್ಯರ್ಥಿ ಕೈಲಾಸಯ್ಯ ಅವರನ್ನು ಸೋಲಿಸಿದರು.

ಸ್ವಾತಂತ್ರ ನಂತರ ನಡೆದ ಪ್ರಥಮ ಚುನಾವಣೆಯಲ್ಲಿಯೇ ಅಸ್ತಿತ್ವದಲ್ಲಿದ್ದ ಬೇಲೂರು ಕ್ಷೇತ್ರ ಜಿಲ್ಲೆಯ ಏಕೈಕ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆರಂಭದಲ್ಲಿ ಈಗಿನ ಬೇಲೂರು ಹಾಗೂ ಸಕಲೇಶಪುರ ಕ್ಷೇತ್ರದ ವ್ಯಾಪ್ತಿಗಳೆರಡೂ ಒಂದೇ ಕ್ಷೇತ್ರಕ್ಕೆ ಸೇರಿದ್ದು, ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬಹುದಿತ್ತು. ಅಂದರೆ ಒಬ್ಬರು ಪರಿಶಿಷ್ಟ ಜಾತಿ ಹಾಗೂ ಮತ್ತೊಬ್ಬ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಲು ಅವಕಾಶವಿತ್ತು.

1962ರ ಚುನಾವಣೆ ವೇಳೆಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರ ಪ್ರತ್ಯೇಕಗೊಂಡು ಸಾಮಾನ್ಯ ಕ್ಷೇತ್ರವಾಯಿತು. ಬೇಲೂರು ಕ್ಷೇತ್ರ ಪರಿಶಿಷ್ಟ ಮೀಸಲು ಕ್ಷೇತ್ರವಾಗಿ ಉಳಿಯಿತು.

1957ರ ಚುನಾವಣೆಯಲ್ಲಿಯೂ ಶಾಸಕರು ಮರು ಆಯ್ಕೆಯಾದರು. ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆಯ ಕಾಫಿ ಬೆಳೆಗಾರ ಬಿ.ಜಿ. ಗುರುಪ್ಪ ಅವರು ಕಡಿಮೆ ಮತಗಳ ಅಂತರದಿಂದ ಸೋತರು. ಕಾಂಗ್ರೆಸ್‍ನಿಂದ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಶಾಸಕ ಬಿ.ಎನ್. ಬೋರಣ್ಣಗೌಡ 33144 ಹಾಗೂ ಎಸ್‌ಸಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಶಾಸಕ ಎಚ್.ಕೆ. ಸಿದ್ದಯ್ಯ 28618 ಮತ ಗಳಿಸಿ ಗೆಲುವಿನ ನಗೆ ಬೀರಿದರು.
ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿ.ಜಿ.ಗುರಪ್ಪ 32755 ಮತ ಗಳಿಸಿ, ಅಲ್ಪ ಮತಗಳ ಅಂತರದ ಸೋಲುಂಡರು.

ಮೊದಲ ಎರಡು ಚುನಾವಣೆಗಳಲ್ಲಿ ದ್ವಿಮತ ಕ್ಷೇತ್ರವಾಗಿದ್ದ ಬೇಲೂರಿನಿಂದ ಹೊರನಡೆದ ಸಕಲೇಶಪುರ ಸ್ವತಂತ್ರ ಸಾಮಾನ್ಯ ಕ್ಷೇತ್ರವಾದರೆ, ಬೇಲೂರು ಪರಿಶಿಷ್ಟ ಮೀಸಲು ಕ್ಷೇತ್ರವಾಯಿತು. ಹಾಗಾಗಿ 2008ರವರೆಗೆ ಕ್ಷೇತ್ರದಲ್ಲಿ ದಲಿತ ಸಮುದಾಯದ ಯುವ ನಾಯಕರು ರಾಜಕೀಯ ಮುಖ್ಯವಾಹಿನಿಗೆ ಬರುವಂತಾಯಿತು.

ಸಕಲೇಶಪುರ ತಾಲ್ಲೂಕಿನ ಬನವಾಸೆಯ ಬಿ.ಎಚ್. ಲಕ್ಷ್ಮಣಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 10801 ಮತ ಗಳಿಸಿ ಶಾಸಕರಾದರು.ಜೆಎಸ್ ಅಭ್ಯರ್ಥಿ ರಂಗಾಬೋವಿ 2734, ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಕಳಸಯ್ಯ 2415 ಮತ ಗಳಿಸಿ ಪರಾಭಗೊಂಡರು.ಕ್ಷೇತ್ರದ ರಾಜಕೀಯದಲ್ಲಿ ಮೂರು ದಶಕ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡ ಎಸ್.ಎಚ್.ಪುಟ್ಟರಂಗನಾಥ್ ಗೆ 1967ರ ಚುನಾವಣೆ ರಾಜಕೀಯ ಜನ್ಮ ದೊರಕಿಸಿಕೊಟ್ಟಿತ್ತು.

ಸ್ವರಾಜ್‌ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಟ್ಟರಂಗನಾಥ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಬಿ.ಎಚ್.ಲಕ್ಷ್ಮಣಯ್ಯ ಅವರನ್ನು ಸೋಲಿಸುವ ಜತೆಗೆ ಹಿಡಿತ ಸಾಧಿಸಿದ್ದ ಕಾಂಗ್ರೆಸ್ ನಿಂದ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು ವಿಶೇಷ.

1972ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುಟ್ಟರಂಗನಾಥ್ ಮರು ಆಯ್ಕೆಯಾದರು. ಎದುರಿಸಿದ ಎರಡು ಚುನಾವಣೆಗಳಲ್ಲಿ ಗೆಲುವು-ಸೋಲು ಸಮಾನವಾಗಿ ಅನುಭವಿಸಿದ್ದ ಬಿ.ಎಚ್.ಲಕ್ಷ್ಮಣಯ್ಯ ಅವರಿಗೆ ಮತ್ತೊಮ್ಮೆ ಸೋಲಿನ ಕಹಿ ಅನುಭವಿಸುವಂತಾಯಿತು.

ಸತತ ಎರಡು ಸೋಲುಗಳಿಂದ ರಾಜಕೀಯ ಹಿನ್ನಡೆ ಕಂಡಿದ್ದ ಬಿ.ಎಚ್. ಲಕ್ಷ್ಮಣಯ್ಯ ಅವರಿಗೆ 1978ರ ಚುನಾವಣೆ ಮರುಜನ್ಮ ನೀಡಿತು. ಲಕ್ಷ್ಮಣಯ್ಯ ಜನತಾ ಪಾರ್ಟಿಯಿಂದ ಕಣಕ್ಕಿಳಿದು ಮರಳಿ ಜಯ ದಕ್ಕಿಸಿಕೊಂಡರು. ಹಿಂದಿನ ಎರಡು ಚುನಾವಣೆಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದ ಪುಟ್ಟರಂಗನಾಥ್ ಮೂರನೇ ಸ್ಥಾನ ಪಡೆದರು.

ಜನತಾ ಪಾರ್ಟಿಯ ಬಿ.ಎಚ್. ಲಕ್ಷ್ಮಣಯ್ಯ 26,045 ಮತ ಗಳಿಸುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ (ಐ) ಅಭ್ಯರ್ಥಿ ಉದಯಕುಮಾರ್ (23,286 ಮತ) ಅವರನ್ನು ಪರಾಭವಗೊಳಿಸಿದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಎಚ್. ಪುಟ್ಟರಂಗನಾಥ್ ಕೇವಲ 2,647 ಮತಗಳಿಸಲಷ್ಟೇ ಶಕ್ತರಾದರು.

1983ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಹೊಸಮುಖವಾಗಿ ಕಣಕ್ಕಿಳಿದ ಡಿ.ಮಲ್ಲೇಶ್‍ಗೆ ಮಣೆ ಹಾಕುವ ಮೂಲಕ ಯುವ ನಾಯಕನಿಗೆ ಅವಕಾಶ ಕಲ್ಪಿಸಿದರು. ಈ ಸಂಪ್ರದಾಯ 1985ರ ಚುನಾವಣೆಯಲ್ಲಿಯೂ ಮುಂದುವರಿಯಿತು. ಆ ವರೆಗೂ ವಕೀಲಿಕೆ ಮಾಡಿಕೊಂಡಿದ್ದ ಎಚ್.ಕೆ.ಕುಮಾರಸ್ವಾಮಿ ಮೊದಲ ಬಾರಿಗೆ ಶಾಸನಸಭೆಗೆ ಆಯ್ಕೆಯಾದರು.

ವೀರಪ್ಪಮೊಯ್ಲಿ ಅವರು ಆಗಿನ ರಾಮಕೃಷ್ಣ ಹೆಗಡೆ ಸರ್ಕಾರ ಬೀಳಿಸಲು ಯತ್ನಿಸಿದಾಗ ಡಿ.ಮಲ್ಲೇಶ್ ತಮ್ಮ ಪಕ್ಷದ ವಿರುದ್ಧವಾಗಿ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದರು. ಅಲ್ಲದೆ ಸ್ಥಳೀಯವಾಗಿ ಪಕ್ಷದ ಹಿರಿಯ ಮುಖಂಡರನ್ನು ಕಡೆಗಣಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು. ಇದೆಲ್ಲ ಗಮನಿಸಿದ್ದ ಜನತಾ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ದೇವೇಗೌಡರು ವಕೀಲ ಎಚ್.ಕೆ.ಕುಮಾರಸ್ವಾಮಿ ಅವರನ್ನು ಕರೆತಂದು ಟಿಕೆಟ್ ನೀಡಿದರು.

1978ರ ಚುನಾವಣೆಯ ನಂತರ ತೆರೆಮರೆಗೆ ಸರಿದಿದ್ದ ಬಿ.ಎಚ್.ಲಕ್ಷ್ಮಣಯ್ಯ ಕಾಂಗ್ರೆಸ್‍ಗೆ ಮರುಸೇರ್ಪಡೆಯಾಗಿ ಕಣಕ್ಕಿಳಿದು ಮತ್ತೊಮ್ಮೆ ಜಯದ ಸಿಹಿ ಅನುಭವಿಸಿದರು. ಆದರೆ, ಮೊದಲ ಚುನಾವಣೆಯಲ್ಲಿ ಭರವಸೆ ಮೂಡಿಸಿದ್ದ ಎಚ್.ಕೆ.ಕುಮಾರಸ್ವಾಮಿ, ಸಮಾಜವಾದಿ ಜನತಾ ಪಾರ್ಟಿ ವಿರುದ್ಧ ಎದ್ದ ಆಡಳಿತ ವಿರೋಧಿ ಅಲೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ರಾಜ್ಯದಾದ್ಯಂತ ಜನತಾದಳದ ಪರವಾಗಿ ಎದ್ದ ಅಲೆ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ದೇವೇಗೌಡರ ತವರು ಜಿಲ್ಲೆಯಲ್ಲಿಯೂ ಸಾಕಷ್ಟು ಪ್ರಭಾವ ಬೀರಿತು. 1994ರ ಚುನಾವಣೆಯಲ್ಲಿ ಎಚ್.ಕೆ.ಕುಮಾರಸ್ವಾಮಿ ಎರಡನೇ ಬಾರಿಗೆ ಶಾಸಕರಾದರು.

ಎಸ್.ಎಚ್. ಪುಟ್ಟರಂಗನಾಥ್ ಅವರು ಬಿಜೆಪಿ ಸೇರ್ಪಡೆಗೊಂಡು 1999ರ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಒದಗಿಸಿದರು. ಎರಡು ಬಾರಿ ಗೆಲುವು ಸಾಧಿಸಿದ್ದ ಎಚ್.ಕೆ.ಕುಮಾರಸ್ವಾಮಿ ಅವರ ಪಕ್ಷನಿಷ್ಠೆ 2004ರ ಚುನಾವಣೆ ಬಳಿಕ ಅವರಿಗೆ ಸಚಿವ ಸ್ಥಾನ ಒಲಿದು ಬರಲು ಕಾರಣವಾಯಿತು.

1952ರಿಂದ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದ ಬೇಲೂರು 2008 ಕ್ಷೇತ್ರ ಪುನರ್ವಿಂಗಡಣೆಯಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಪಕ್ಕದ ಸಕಲೇಶಪುರ ಕ್ಷೇತ್ರಕ್ಕೆ ಮೀಸಲು ವರ್ಗವಾಯಿತು.

ಪರಿಶಿಷ್ಟ ಸಮುದಾಯವರೇ ಸ್ಪರ್ಧಿಸುತ್ತಿದ್ದ ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೂ ಬಾಗಿಲು ತೆರೆದಿದ್ದರಿಂದ ಭಾರಿ ಪೈಪೋಟಿಗೆ ಚುನಾವಣೆ ಸಾಕ್ಷಿಯಾಯಿತು. ಸಂಸದರಾಗಿ ವರ್ಚಸ್ಸು ಬೆಳೆಸಿಕೊಂಡಿದ್ದ ವೈ.ಎನ್.ರುದ್ರೇಶ್ ಗೌಡ ಸುಲಭವಾಗಿ ಗೆಲುವು ತಮ್ಮದಾಗಿಸಿಕೊಂಡರು.

ರುದ್ರೇಶ್‌ಗೌಡರ ಕೊನೆ ಚುನಾವಣೆ

ಜೆಡಿಎಸ್ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯ ಕೊರತೆಯಿಂದ ತತ್ತರಿಸುತ್ತಿದ್ದಾಗ ಬೇಲೂರಿನಲ್ಲಿ ಪಕ್ಷಕ್ಕೆ ವೈ.ಎನ್.ರುದ್ರೇಶ್‍ಗೌಡ ನೆಲೆ ಒದಗಿಸಿದರು. ತಮ್ಮ ಕುಟುಂಬ ಹಾಗೂ ವೈಯಕ್ತಿಕ ವರ್ಚಸ್ಸಿನ ಬೆಂಬಲದೊಂದಿಗೆ ಅವರು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ರುದ್ರೇಶ್‍ಗೌಡ 48802 ಮತ ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಕೆ.ಎಸ್.ಲಿಂಗೇಶ್ (41273 ಮತ ) ಅವರನ್ನು ಪರಾಭವಗೊಳಿಸಿದರು. ತಮ್ಮ ಶಾಸಕ ಸ್ಥಾನದ ಅವಧಿ 2 ತಿಂಗಳು ಬಾಕಿ ಇರುವಾಗಲೇ ರುದ್ರೇಶ್‍ಗೌಡ ಮಾರ್ಚ್ 24 ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು.

ಮೊದಲ ಚುನಾವಣೆ: ದಾಖಲೆ ಮತದಾನ

1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಎಸ್‌ಸಿ ಕ್ಷೇತ್ರದಿಂದ ಇಬ್ಬರು ಹಾಗೂ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಶಾಲಿಗಳಾಗಿದ್ದರು. ಅಚ್ಚರಿ ಎಂದರೆ ಬೇಲೂರು ಕ್ಷೇತ್ರದಲ್ಲಿ ಶೇ 99.69 ದಾಖಲೆ ಪ್ರಮಾಣದ ಮತದಾನವಾಗಿದ್ದು ವಿಶೇಷವಾಗಿತ್ತು. ಕ್ಷೇತ್ರದ ಒಟ್ಟು 80974 ಮತದಾರರ ಪೈಕಿ 80722 (ಶೇ 99.69) ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಎಸ್‌ಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಸಿದ್ದಯ್ಯ 28761 (ಶೇ 35.63) ಹಾಗೂ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎನ್. ಬೋರಣ್ಣಗೌಡ 25516 (ಶೇ.31.61) ಮತ ಗಳಿಸುವ ಮೂಲಕ ಪ್ರಥಮ ಶಾಸಕರಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT