ಮಂಗಳವಾರ, ಆಗಸ್ಟ್ 20, 2019
25 °C

ಪಕೋಡಾ ಮಾರುತ್ತಿದ್ದವರು ಪೊಲೀಸರ ವಶಕ್ಕೆ

Published:
Updated:

ಚಂಡೀಗಡ: ಚಂಡೀಗಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ರ‍್ಯಾಲಿ ನಡೆಸಲಿದ್ದ ಜಾಗದಲ್ಲಿ ಪಕೋಡಾ ಮಾರಲು ಯತ್ನಿಸಿದ 12 ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ರ‍್ಯಾಲಿ ಸ್ಥಳಕ್ಕೆ ಮೋದಿ ಬರುವುದಕ್ಕೂ ಮೊದಲು ಈ ಯುವಕರು ಅಲ್ಲಿ ಸೇರಿದ್ದರು. ಎಂಜಿನಿಯರಿಂಗ್, ಬಿ.ಎ ಮತ್ತು ಕಾನೂನು ಪದವಿ ಪಡೆದಿದ್ದ ಯುವಕರು ಘಟಿಕೋತ್ಸವ ಧಿರಿಸಿನಲ್ಲಿದ್ದರು. ಎಲ್ಲರೂ ಒಂದೊಂದು ತಟ್ಟೆಯಲ್ಲಿ ಪಕೋಡಾ ಜೋಡಿಸಿಕೊಂಡು ಮಾರಾಟ ಮಾಡುತ್ತಿದ್ದರು. ಮುಂಜಾಗೃತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪಕೋಡಾ ಯೋಜನೆ ಅಡಿ ನಮಗೆ ಹೊಸ ಉದ್ಯೋಗ ನೀಡಿದ ಮೋದಿ ಅವರನ್ನು ನಾವು ಅಭೂತಪೂರ್ವವಾಗಿ ಸ್ವಾಗತಿಸಲು ಬಯಸಿದ್ದೆವು. ಮೋದಿ ಅವರ ರ‍್ಯಾಲಿಯಲ್ಲಿ ಪಕೋಡಾ ಮಾರಲು ಬಯಸಿದ್ದೆವು. ಉನ್ನತ ಶಿಕ್ಷಣ ಪಡೆದವರು ಪಕೋಡಾ ಮಾರಾಟ ಮಾಡಿದರೆ ಹೇಗಿರುತ್ತದೆ ಎಂಬುದನ್ನು ಮೋದಿಗೆ ಮನವರಿಕೆ ಮಾಡಿಕೊಡಬೇಕಿತ್ತು’ ಎಂದು ಪಕೋಡಾ ಮಾರಲು ಯತ್ನಿಸಿದ್ದ ಯುವತಿಯೊಬ್ಬರು ಹೇಳಿದ್ದಾರೆ.

‘ಪಕೋಡಾ ಮಾರಾಟ ಮಾಡುವವರೂ ಪ್ರತಿದಿನ ₹ 200 ಸಂಪಾದಿಸುತ್ತಾರೆ. ಹೀಗಾಗಿ ಪಕೋಡಾ ಮಾರುವವರನ್ನು ನಿರುದ್ಯೋಗಿಗಳು ಎಂದು ಕರೆಯಲಾಗದು. ಅದೊಂದು ಉತ್ತಮ ಉದ್ಯೋಗ’ ಎಂದು ಪ್ರಧಾನಿ ಮೋದಿ ಅವರು ಇದೇ ಜನವರಿಯಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

Post Comments (+)