ಮಂಗಳವಾರ, ಮೇ 18, 2021
28 °C

ದುರಂತಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಭಾರೀ ಮಳೆಯಿಂದ ಕೇರಳ ಮತ್ತು ಕೊಡಗಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಹುತೇಕ ಎಲ್ಲ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿ. ಪ್ರಕೃತಿಯಲ್ಲಿ ನಡೆಯುವ ಇಂಥ ದುರಂತಗಳನ್ನು ಮಕ್ಕಳಿಗೆ ತಿಳಿಸುವುದು ಹೇಗೆ? ವಯಸ್ಕರಿಗಿಂತಲೂ ಚುರುಕು ಬುದ್ಧಿಯ ಪುಟಾಣಿಗಳಿಗೆ ದುರಂತಗಳ ಬಗ್ಗೆ ವಿವರಿಸಿ ಅವರ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸುವುದು ಸವಾಲಿನ ಕೆಲಸವೇ. 

ನಮ್ಮ ಸುತ್ತಲಿನ ಪರಿಸ್ಥಿತಿ, ವಾಸ್ತವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಅಗತ್ಯದ ಬಗ್ಗೆ ಬೆಂಗಳೂರ್ ಮಿರರ್‌ ಒಂದು ಲೇಖನ ಪ್ರಕಟಿಸಿದೆ. ಇಲ್ಲಿ ಶಾಲೆಯ ಶಿಕ್ಷಕಿಯೊಬ್ಬರು ಪ್ರಚಲಿತ ವಿದ್ಯಮಾನಗಳ ಕುರಿತು ಪಾಠ ಮಾಡಲು ನಿರ್ಧರಿಸಿ, ದಕ್ಷಿಣ ಭಾರತದಲ್ಲಿನ ಜಲಪ್ರಳಯದ ಕುರಿತಾದ ಕೆಲವು ವಿಡಿಯೊಗಳನ್ನು ತಮ್ಮ ಮಕ್ಕಳಿಗೆ ತೋರಿಸಿರುವಂತೆ ಒಂದು ದಿನ ಮುಂಚಿತವಾಗಿ ಪಾಲಕರಿಗೆ ತಿಳಿಸಿರುತ್ತಾರೆ. ಪ್ರವಾಹಕ್ಕೆ ಸಂಬಂಧಿಸಿದ ಚಿತ್ರಗಳು, ಪ್ರವಾಹ ಉಂಟಾಗಲು ಕಾರಣ, ಹೀಗೆ ಅಗತ್ಯ ತಯಾರಿಗಳನ್ನು ಆ ಶಿಕ್ಷಕಿ ಮಾಡಿಕೊಂಡಿರುತ್ತಾರೆ. ಮಾರನೆಯ ದಿನ ತರಗತಿಯಲ್ಲಿ ಪ್ರವಾಹದ ವಿಷಯವನ್ನು ಶಿಕ್ಷಕಿ ಮಕ್ಕಳ ಮುಂದಿಡುತ್ತಿದ್ದಂತೆ; ಅವರಲ್ಲಿ ಇಮ್ಮಡಿಯಾದ ಉತ್ಸಾಹ, ತೆರೆದುಕೊಂಡ ವಿಶ್ಲೇಷಣೆ–ಲೆಕ್ಕಾಚಾರಗಳು, ಸಮಸ್ಯೆಗೆ ಪರಿಹಾರ ಹಾಗೂ ಕ್ರಿಯಾಶೀಲ ಚಿಂತನೆಗಳು ಎಂಥವರನ್ನೂ ನಾಚಿಸುವಂತಿತ್ತು. 

ಅಂದು ಮಕ್ಕಳು ಪ್ರವಾಹ ಪರಿಸ್ಥಿತಿಯನ್ನು ವಿಶ್ಲೇಷಿಸಿ ನೀಡಿದ ಪರಿಹಾರಗಳು, ಕೇಳಿದ ಕ್ಲಿಷ್ಟ ಪ್ರಶ್ನೆಗಳು, ಜಗತ್ತಿನ ಇತರೆ ಘಟನೆಗಳೊಂದಿಗೆ ಹೋಲಿಕೆ ಎಲ್ಲವೂ ಉತ್ತಮ ಚರ್ಚೆಗೆ ನಾಂದಿಯಾಯಿತು. ಸಾಕಷ್ಟು ತಯಾರಿ ನಡೆಸಿದ್ದರೂ ಸಹ ಶಿಕ್ಷಕಿಗೆ ಮಕ್ಕಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗಲಿಲ್ಲ. ಮತ್ತಷ್ಟು ಅಧ್ಯಯನ ಮತ್ತು ಗ್ರಹಿಕೆಯ ಅವಶ್ಯಕತೆ ಇರುವುದು ಅರಿವಾಯಿತು, ಹಾಗೇ ಮಕ್ಕಳೊಂದಿಗೆ ನಮ್ಮ ಪರಿಸ್ಥಿತಿಯ ಕುರಿತು ನಡೆಸಬೇಕಾದ ಮಾತುಕತೆಯ ಪ್ರಾಮುಖ್ಯತೆಯೂ ತಿಳಿಯಿತು. 

ಅಂದರೆ, ನಮ್ಮ ಸುತ್ತಲಿನ ಭೀಕರ ಸ್ಥಿತಿಯ ಕುರಿತಾಗಿ ಎಲ್ಲವನ್ನೂ ಮಕ್ಕಳಿಗೆ ಹೇಳಬೇಕೆ?

ಹೇಳಲು ಪಾಲಕರಿಗೆ ವಿಷಯದ ಸೂಕ್ತ ತಿಳಿವಳಿಕೆ ಬೇಕು. ಕೇವಲ ತಿಳಿಯುವುದಷ್ಟೇ ಅಲ್ಲ, ಅದನ್ನು ಅರ್ಥೈಸಿಕೊಂಡಿರಬೇಕು. ನಮಗೆ ಸಿಗುವ ಮಾಹಿತಿಯನ್ನು ಸರಳವಾಗಿ ಮತ್ತು ವಸ್ತುನಿಷ್ಠವಾಗಿ ಮಕ್ಕಳ ಮುಂದೆ ಪ್ರಸ್ತುತ ಪಡಿಸುವುದು ನಿರ್ಣಾಯಕ ಹಂತ. 

ಜನರ ಜೀವನನಕ್ಕೆ ಹತ್ತಿರವೆನಿಸುವ ಉದಾಹರಣೆ ಅಥವಾ ಒಂದು ಕಥೆಯನ್ನು ಆಯ್ಕೆ ಮಾಡಿಕೊಳ್ಳಿ. ಒಂದಕ್ಕಿಂತ ಹೆಚ್ಚು ವಿವರಣೆಗಳು ಗೊಂದಲಕ್ಕೆ ಕಾರಣವಾಗಬಹುದು. ಮನಷ್ಯರ ತಪ್ಪುಗಳಿಂದಾಗಿ ಮಾನವ ಜನಾಂಗವೇ ಕುಗ್ಗುವಂತಹ ವಿವರಗಳು ಹೊಸತಲ್ಲ. ಅದಕ್ಕಿಂತಲೂ  ಉತ್ಸಾಹ ತುಂಬುವ, ಆಸಕ್ತಿ ಬೆಳೆಸುವಂತಹ ಪಾಸಿಟಿವ್‌ ಸುದ್ದಿಗಳನ್ನು ಮಕ್ಕಳಿಗೆ ಹೇಳಬೇಕು. ಸುದ್ದಿ ಅಥವಾ ಕಥೆಯ ಮೂಲಕ ವಿವರಿಸುವಾಗ ನಮ್ಮ ಅಭಿಪ್ರಾಯಗಳನ್ನು ಸೇರಿಸದಂತೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಕಥೆಗೊಂದು ಸ್ಪಷ್ಟ ಅಂತ್ಯವನ್ನು ನೀಡಬಾರದು. ಏಕೆಂದರೆ, ನಮ್ಮ ತಿಳಿವಳಿಕೆ ನಮ್ಮ ಮನಃಸ್ಥಿತಿಯ ಮೇಲೂ ಅವಲಂಬಿತವಾಗಿರುತ್ತದೆ. ಅದು ನಿಜಕ್ಕಿಂತಲೂ ಭಿನ್ನವಾಗಿರಬಹುದು ಎಂದು ಶಿ‌ಕ್ಷಕಿ ಸಲಹೆ ನೀಡುತ್ತಾರೆ. 

ಕೇಳಿಸಿಕೊಳ್ಳಿ, ಗಮನಿಸಿ, ಮತ್ತೆ ಕೇಳಿಸಿಕೊಳ್ಳಿ

ಪ್ರವಾಹದ ಬಗ್ಗೆ ಸಾಕಷ್ಟು ವಿಷಯಗಳನ್ನು ಗ್ರಹಿಸಿ, ತಮ್ಮದೇ ಸಿದ್ಧಾಂತಗಳನ್ನು ಕಟ್ಟಿಕೊಂಡಿರುವ ಮಕ್ಕಳನ್ನು ಅವುಗಳನ್ನು ತಮ್ಮ ಆಟ ಮತ್ತು ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ. ತಮ್ಮಲ್ಲಿರುವ ಆಟಿಕೆ ಮತ್ತು ಇತರ ವಸ್ತುಗಳನ್ನು ಬಳಸಿ ಮಕ್ಕಳು ಪ್ರವಾಹದ ಆಟ ಪ್ರಾರಂಭಿಸಿರುತ್ತಾರೆ. ಅವರದೇ ರೀತಿಯಲ್ಲಿ ಜನರು ಹಾಗೂ ಆಸ್ತಿ–ಪಾಸ್ತಿಗಳನ್ನು ರಕ್ಷಿಸುವ ಕಾರ್ಯತಂತ್ರ ರೂಪಿಸಿರುತ್ತಾರೆ. ಇಂಥ ಆಟಗಳಿಗೆ ಅಡಚಣೆ ಉಂಟು ಮಾಡುವುದು ಅಥವಾ ಸರಿ ಪಡಿಸಲು ಹೋಗುವುದನ್ನು ಮಾಡಬಾರದು.

ನಿಮಗೆ ಅವರು ಆಡುತ್ತಿರುವ ಆಟದ ಸ್ಪಷ್ಟ ಚಿತ್ರಣ ಸಿಗಬೇಕು. ಪರಿಸ್ಥಿತಿಯನ್ನು ಮಕ್ಕಳು ವಿವರಿಸುತ್ತಿರುವುದನ್ನು ಕೇಳಿಸಿಕೊಳ್ಳಬೇಕು, ಆಟದಲ್ಲಿ ಆಗುತ್ತಿರುವ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಆಟದಲ್ಲಿ ಒಂದು ಮಗುವಿಗಿಂತ ಹೆಚ್ಚು ಮಕ್ಕಳಿದ್ದರೆ ಅಥವಾ ಯಾವುದೇ ಮಗುವಿಗೆ ಅಪಾಯ ಉಂಟು ಮಾಡುವಂತಿದ್ದರೆ, ಆಗ ಪಾಲಕರು ಮಧ್ಯ ಪ್ರವೇಶಿಸಿಬೇಕು. ಮತ್ತೆ ಮಕ್ಕಳು ಅನುಸರಿದ ಮಾರ್ಗ, ಅವರ ಸಲಹೆಗಳನ್ನು ಕೇಳಬೇಕು ಮತ್ತು ಪ್ರಶ್ನಿಸಬೇಕು. 

ಹೀಗೆ ಕಲಿಕೆ ಮುಂದುವರಿಯುತ್ತಿರಬೇಕು. ನಿಮ್ಮ ಮಗು ಆಡುವ ಮಾತುಗಳನ್ನು ಕೇಳುವುದು ಹಾಗೂ ಮಾಡುತ್ತಿರುವುದನ್ನು ಗಮನಿಸುತ್ತಲೇ ಮಗುವಿಗೆ ಉತ್ಸಾಹ ತುಂಬವ ಪ್ರಯತ್ನ ನಡೆಸಬೇಕು. ಇದರಿಂದಾಗಿ ಕಠಿಣ ಸಮಯದಲ್ಲಿಯೂ ಭದ್ರತೆ ಹಾಗೂ ಮೌಲ್ಯಗಳ ಅನುಭವವನ್ನು ಮಗು ಪಡೆದುಕೊಳ್ಳುತ್ತದೆ. ಮಕ್ಕಳಿಂದ ತಿಳಿಯುವ, ಅವರನ್ನು ಅರಿಯುವ ಹಾಗೂ ತಿಳಿಸುವುದಕ್ಕೆ ಸೂಕ್ತ ಮಾರ್ಗವೆಂದರೆ ಆಟ. ಅವರ ಆಟಗಳಲ್ಲಿ ಕೆಲವು ಸಮಯ ನಾವೇ ವಿದ್ಯಾರ್ಥಿಗಳಾಗಬೇಕಾಗುತ್ತದೆ; ಇನ್ನೂ ಕೆಲ ಸಮಯ ಅವರಿಗೆ ಗುರುವಾಗಬೇಕಾಗುತ್ತದೆ. 

ಅವರದೇ ಲೋಕದಲ್ಲಿ ಆಟ ಆಡುವ ವಯಸ್ಸಿಗಿಂತ ದೊಡ್ಡ ಮಕ್ಕಳು ಕ್ರಿಯಾತ್ಮಕ ಕೆಲಸಗಳಿಂದ ತಮ್ಮ ಮಾನಸಿಕ ಸ್ಥಿತಿಯನ್ನು ಹೊರಹಾಕುತ್ತಿರುತ್ತಾರೆ. ಅವರ ಮಾತುಗಳನ್ನು ಅನೇಕ ಸಂಗತಿಗಳು ಹೊರಬರುತ್ತಿರುತ್ತವೆ. ಇಂಥ ಸಮಯದಲ್ಲಿ ಸುದ್ದಿಗಳ ಬಗ್ಗೆ ಮಾತುಕತೆ ನಡೆಸಿ. ಮಕ್ಕಳು ಕೇಳುವ ವಿಷಯದ ಬಗ್ಗೆ ನಿಮಗೆ ತಿಳಿಯದೇ ಇದ್ದರೂ ಮಾತಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ, ಅವರ ಜತೆಯಲ್ಲಿಯೇ ಕುಳಿತು ಓದಿ ತಿಳಿದು–ತಿಳಿಸಲು ಪ್ರಯತ್ನಿಸಿ. ಮಕ್ಕಳ ಜತೆಗಿನ ಒಂದು ಪುಟ್ಟ ಚರ್ಚೆ ಅದ್ಭುತ ಸಂಗತಿಗಳನ್ನು ತೆರೆದಿಡುತ್ತವೆ. 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು