ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ನಡೆ: ಸರ್ಕಾರಕ್ಕೆ ಸಂದೇಹ

Last Updated 1 ನವೆಂಬರ್ 2019, 19:26 IST
ಅಕ್ಷರ ಗಾತ್ರ

ನವದೆಹಲಿ : ಜೂನ್‌ ನಂತರ ವಾಟ್ಸ್‌ಆ್ಯಪ್‌ ಸಂಸ್ಥೆ ಜತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಈ ಮಾತುಕತೆಗಳಲ್ಲಿಗೂಢಚರ್ಯೆ ತಂತ್ರಾಂಶ ಪೆಗಾಸಸ್‌ ಬಳಸಿಕೊಂಡು ಹಲವು ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿಚಾರವನ್ನುಆ ಸಂಸ್ಥೆಯು ಬಹಿರಂಗಪಡಿಸಿಲ್ಲ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂದೇಶದ ಮೂಲ ಪತ್ತೆ ಮತ್ತು ಉತ್ತರದಾಯಿತ್ವ ನಿಗದಿ ಮಾಡುವ ನಿಯಮಗಳನ್ನು ಸರ್ಕಾರ ಜಾರಿಗೆ ತರ
ದಂತೆ ತಡೆಯುವುದಕ್ಕಾಗಿ ವಾಟ್ಸ್‌ಆ್ಯಪ್‌ ಕೈಗೊಂಡ ರಕ್ಷಣಾತ್ಮಕ ನಡೆಯೇ ಇದು ಎಂದು ಆ ಅಧಿಕಾರಿ ಪ್ರಶ್ನಿಸಿದ್ದಾರೆ.

ಗೂಢಚರ್ಯೆ ಮಾಡಲಾಗಿದೆ ಎಂಬುದನ್ನು ಬಹಿರಂಗ ಮಾಡಿದ ಸಮಯದ ಬಗ್ಗೆಯೂ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಗೆ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮೂರು ತಿಂಗಳ ಸಮಯಾವಕಾಶ ಕೊಟ್ಟ ಸಂದರ್ಭದಲ್ಲಿಯೇ ಗೂಢಚರ್ಯೆ ವಿಚಾರವನ್ನು ಯಾಕೆ ಬಯಲಿಗೆ ತರಲಾಗಿದೆ ಎಂದು ಅವರು ಕೇಳಿದ್ದಾರೆ.

ದುರುದ್ದೇಶಪೂರಿತ ಸಂದೇಶಗಳ ಮೂಲವನ್ನು ಸೇವಾದಾತ ಸಂಸ್ಥೆಗಳು ನೀಡಬೇಕು ಎಂಬ ನಿಯಮ ರೂಪಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಭಾರತದ ಹಲವು ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಮತ್ತು ವಕೀಲರ ವಿರುದ್ಧ ಪೆಗಾಸಸ್‌ ತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂದು ವಾಟ್ಸ್‌ಆ್ಯಪ್‌ ಸಂಸ್ಥೆಯು ಗುರುವಾರ ಹೇಳಿತ್ತು.

ಖಾಸಗಿತನ ರಕ್ಷಣೆಗೆ ಬದ್ಧ:ವಾಟ್ಸ್‌ಆ್ಯಪ್‌

ಎಲ್ಲ ಜನರ ಖಾಸಗಿತನ ರಕ್ಷಣೆಯಾಗಬೇಕು ಎಂಬ ಭಾರತ ಸರ್ಕಾರದ ನಿಲುವನ್ನು ಬೆಂಬಲಿಸುವುದಾಗಿ ವಾಟ್ಸ್‌ಆ್ಯಪ್‌ ಸಂಸ್ಥೆ ಹೇಳಿದೆ. ಗೂಢಚರ್ಯೆ ನಡೆಸಿ, ಖಾಸಗಿತನ ಉಲ್ಲಂಘನೆ ಮಾಡಿದವರ ವಿರುದ್ಧ ‘ಕಠಿಣ ಕ್ರಮ’ ಕೈಗೊಳ್ಳಲಾಗುವುದು ಎಂದೂ ಹೇಳಿದೆ.

ಗೂಢಚರ್ಯೆ ವಿಚಾರದಲ್ಲಿ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸಂಸ್ಥೆಗೆ ಸರ್ಕಾರ ಸೂಚಿಸಿತ್ತು. ಅದರಂತೆ ವಿವರ ನೀಡಲಾಗುವುದು ಎಂದಿದೆ.

ಗಂಭೀರ ಹಗರಣ: ಪ್ರಿಯಾಂಕಾ

‘ಪತ್ರಕರ್ತರು, ವಕೀಲರು, ಹೋರಾಟಗಾರರು ಮತ್ತು ರಾಜಕಾರಣಿಗಳ ಮೇಲೆ ನಿಗಾ ಇರಿಸಲು ಇಸ್ರೇಲ್‌ನ ಸಂಸ್ಥೆಯನ್ನು ಕೇಂದ್ರ ಸರ್ಕಾರ ಬಳಸಿಕೊಂಡಿದೆ ಎಂದಾದರೆ ಅದು ಮಾನವ ಹಕ್ಕುಗಳ ಉಲ್ಲಂಘನೆ. ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಲ್ಲ ಹಗರಣ’ ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT